ತುಮಕೂರು; ವಿಶೇಷ ನೇರ ನೇಮಕಾತಿಯಡಿ 276 ಪೌರ ಕಾರ್ಮಿಕರ ಖಾಯಂ; ಪರಂ

1 min read

 

ವಿಶೇಷ ನೇರ ನೇಮಕಾತಿಯಡಿ ಪೌರ ಕಾರ್ಮಿಕರ ಖಾಯಂ; ಪರಂ

Tumkurnews
ತುಮಕೂರು; ಮಹಾನಗರ ಪಾಲಿಕೆ ಒಳಗೊಂಡಂತೆ, ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 276 ಸಂಖ್ಯೆಯ ಪೌರ ಕಾರ್ಮಿಕರನ್ನು ವಿಶೇಷ ನೇರ ನೇಮಕಾತಿಯಡಿ ಖಾಯಂಗೊಳಿಸಲಾಗುತ್ತಿದ್ದು, ಈ ಪೈಕಿ ಇಂದು ಜಿಲ್ಲೆಯ 208 ಕಾರ್ಮಿಕರಿಗೆ ನೇಮಕಾತಿ ಆದೇಶಪತ್ರ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ವತಿಯಿಂದ ಏರ್ಪಡಿಸಿದ್ದ, ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಾಖಲಾತಿಗಳನ್ನು ಸಲ್ಲಿಸದಿರುವ 68 ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವುದು ಬಾಕಿ ಇದ್ದು, ಸಿಂಧುತ್ವ ಹಾಗೂ ಇತರೆ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಪೌರ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಖಾಯಂ ಮಾಡಲಾಗುವುದು ಎಂದರು.
ಸಮಾಜದ ಕೆಳಹಂತದಲ್ಲಿದ್ದುಕೊಂಡು ಸಮಾಜಕ್ಕಾಗಿ ದುಡಿಯುವ ಜನರೇ ಪೌರಕಾರ್ಮಿಕರು. ನಗರ ಮತ್ತು ಪಟ್ಟಣ ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ಕೀಳರಿಮೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ನಾವುಗಳು ಈ ಕೆಲಸವನ್ನು ಮಾಡಬೇಕೆ ಅಥವಾ ಮಾಡಬಾರದೆ ಎನ್ನುವಂತಹ ಯಾವುದೇ ಭಾವನೆಗಳಿಲ್ಲದೆ, ನಗರವನ್ನು ಸ್ವಚ್ಛವಾಗಿಡುವುದಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟಿರುವ ಪೌರಕಾರ್ಮಿಕರನ್ನು ವಿಶೇಷವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಜಿಲ್ಲೆಯ ತುಮಕೂರು ಪಾಲಿಕೆಯ ಸುಮಾರು 121 ಪೌರ ಕಾರ್ಮಿಕರಿಗೆ ಒಂದು ಹೊಸ ಜೀವನ ಆರಂಭವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಪಾಲಿಕೆಯ 79 ಜನ ಇಂದು ಸಿಂಧುತ್ವ ಪ್ರಮಾಣ ಹಾಗೂ ಎಲ್ಲಾ ಬೇಕಾದಂತಹ ಕಾಗದ ಪತ್ರಗಳನ್ನು ಕೊಟ್ಟು ಅವರ ನೌಕರಿಯನ್ನು ಖಾಯಂ ಮಾಡುವಂತಹ ಆದೇಶವನ್ನು ನಾವಿಂದು ನೀಡುತ್ತಿದ್ದೇವೆ. ಬಹುಶಃ ಇಂದು ಈ ಪೌರ ಕಾರ್ಮಿಕರ ಜೀವನದಲ್ಲಿ ಹೊಸ ಬದಲಾವಣೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ಬೆಂಗಳೂರು ನಗರ ಇಂದು ಇಡೀ ಏಷ್ಯಾ ಖಂಡದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಡೀ ವಿಶ್ವಕ್ಕೆ ಪರಿಚಯ ಇರುವಂತಹ ನಗರ ಬೆಂಗಳೂರು. ಪ್ರಪಂಚದ ಮೂಲೆ ಮೂಲೆಗಳಿಂದ ಜನರು ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ್ದಾರೆ. ಇಂತಹ ನಗರ ಬಹಳ ಸುಂದರವಾಗಿರಬೇಕು. ಬೆಂಗಳೂರನ್ನು ಗಾರ್ಡನ್ ಸಿಟಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಇಂತಹ ಉದ್ಯಾನವನದ ನಗರಿಯ ಚರಂಡಿ, ರಸ್ತೆಗಳು ಸ್ವಚ್ಛ ಸುಂದರವಾಗಿರಬೇಕು. ವಿದೇಶದಿಂದ ಬರುವವರಿಗೆ ರಾಜಧಾನಿ ಬೆಂಗಳೂರು ಸುಂದರವಾಗಿ ಕಾಣಬೇಕಾದರೆ ಇದಕ್ಕೆ ಪೌರಕಾರ್ಮಿರ ಕೊಡುಗೆ ಅಪಾರವಾಗಿದೆ. ಅಂದಾಜು 40,000 ಪೌರಕಾರ್ಮಿಕರು ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಾರೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಎರಡು ವರ್ಷಗಳ ಹಿಂದೆ ಮೈಸೂರು ನಗರವನ್ನು ಸ್ವಚ್ಛ ನಗರ ಎಂದು ಘೋಷಿಸಿ ಪ್ರಶಸ್ತಿ ನೀಡಲಾಯಿತು. ತುಮಕೂರು ಸಹ 2ನೇ ಸ್ಥಾನ ಪಡೆದಿದೆ. ಇದನ್ನೆಲ್ಲಾ ಮಾಡುವವರು ಯಾರು? ಹೀಗಾಗಿ ಇಂತಹ ನಗರಗಳನ್ನು ಸ್ವಚ್ಛವಾಗಿ ಸುಂದರವಾಗಿ ಕಾಣುವಂತೆ ಮಾಡುವವರೇ ಪೌರ ಕಾರ್ಮಿಕರು. ಇಂತಹ ಕಾರ್ಮಿಕರಿಗೆ ತಿಂಗಳಿಗೆ 5 ರಿಂದ 8 ಸಾವಿರ ರೂ. ಸಂಬಳ ಕೊಟ್ಟು ಜೀವನ ಮಾಡಿ ಎಂದು ಹೇಳುವುದು ಯಾವ ನ್ಯಾಯ. ಇವರಿಗೆ ಗೌರವಯುತವಾಗಿ ವೇತನ ಪಾವತಿಸುವುದೂ ಸಹ ಸರ್ಕಾರದ ಕರ್ತವ್ಯವಾಗಿದೆ ಎಂದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಪೌರಕಾರ್ಮಿಕರನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳುವ ಕುರಿತು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಪೌರ ಕಾರ್ಮಿಕರು ಕೈಗವಸು, ಶೂ, ಕೋಟು, ಮಾಸ್ಕ್, ಏಪ್ರಾನ್, ಮುಂತಾದ ಸುರಕ್ಷತಾ ಪರಿಕರ ಧರಿಸಿ ಕೆಲಸ ಮಾಡಬೇಕು. ಪೌರ ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಯಾವುದೇ ಸರ್ಕಾರ ಬರಲಿ ನೀಡಬೇಕಾಗುತ್ತದೆ. ಸ್ಲಂ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುವ ಮನೆಗಳನ್ನು ಬಹುತೇಕ ಪಾಲನ್ನು ಪೌರ ಕಾರ್ಮಿಕರಿಗೆ ಮೀಸಲಿಡಬೇಕೆಂದು ಅವರು ಈ ಸಂದರ್ಭ ಮನವಿ ಮಾಡಿದರು.
ಕರ್ತವ್ಯದ ಅವಧಿಯಲ್ಲಿ, ವಿಷಮ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ವೇಳೆ ಹಲವು ಪೌರ ಕಾರ್ಮಿಕರು ಮೃತಪಟ್ಟಿದ್ದು, ಇಂತಹ ಕಾರ್ಮಿಕ ಕುಟುಂಬಗಳನ್ನು ಗುರುತಿಸಿ ಸರ್ಕಾರದಿಂದ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ. ಮಾತನಾಡಿ, ‘ನನ್ನ ಕಸ ನನ್ನ ಹೊಣೆ’ ಎಂಬ ಮನೋಭಾವನೆ ನಾಗರೀಕರಾದ ನಮ್ಮಲ್ಲಿ ಮೂಡಬೇಕು. ಪಾಲಿಕೆಗೆ 507 ಪೌರ ಕಾರ್ಮಿಕ ಹುದ್ದೆಗಳು ಮಂಜೂರಾಗಿದ್ದು, ಸದ್ಯ 107 ಖಾಯಂ ಪೌರ ಕಾರ್ಮಿಕರು, 335 ಮಂದಿ ನೇರ ಪಾವತಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಲಿಕೆಯ 121 ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ದಾಖಲೆಗಳನ್ನು ಸಲ್ಲಿಸಿರುವ 78 ಮಂದಿ ಹಾಗೂ 1 ಸಾಮಾನ್ಯ ಅಭ್ಯರ್ಥಿಗೆ ಇಂದು ನೇಮಕಾತಿ ಆದೇಶ ಪ್ರತಿ ನೀಡಲು ಸಂತಸವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‍ವಾಡ್, ಮತ್ತಿತರರು ಉಪಸ್ಥಿತರಿದ್ದರು

About The Author

You May Also Like

More From Author

+ There are no comments

Add yours