ಮೌಢ್ಯಕ್ಕೆ ಹಸುಗೂಸು ಬಲಿ ಪ್ರಕರಣ; ಇಬ್ಬರ ವಿರುದ್ಧ ಎಫ್.ಐ.ಆರ್ ದಾಖಲು
Tumkurnews
ತುಮಕೂರು; ತಾಲ್ಲೂಕಿನ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ ಕಾರಣದಿಂದ ಬಾಣಂತಿ ಮತ್ತು ಹಸುಗೂಸನ್ನು ಮನೆಯಿಂದ ಹೊರಗಿಟ್ಟು ಮಗು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಪತಿ ಹಾಗೂ ಆಕೆಯ ತಂದೆ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆ – 2017 ಹಾಗೂ ಐ.ಪಿ.ಸಿ ಅಧಿನಿಯಮ 304, 34ರಡಿ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಲ್ಲೇನಹಳ್ಳಿ ಗ್ರಾಮದ ಹೊರಗಿನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿಟ್ಟ ಕಾರಣ ಸೂಕ್ತ ಆರೈಕೆ ಸಿಗದೆ ಜು.23ರಂದು ಮಗು ಮೃತಪಟ್ಟಿತ್ತು. ಈ ಪ್ರಕರಣ ರಾಜ್ಯಾದ್ಯಂತ ಟೀಕೆ ಮತ್ತು ಚರ್ಚೆಗೊಳಗಾಗಿದ್ದು, ಮಗು ಸಾವಿನ ಘಟನೆಗೆ ಪತಿ ಸಿದ್ದೇಶ್ ಹಾಗೂ ಆಕೆಯ ತಂದೆ ಚಿಕ್ಕಹುಲಿಗೆಪ್ಪ ಕಾರಣವೆಂದು ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮಹಿಳಾ ಮೇಲ್ವಿಚಾರಕಿ ರಾಜೇಶ್ವರಿ ಅವರು ಗೊಲ್ಲರಹಟ್ಟಿಯಲ್ಲಿ ಜು.27ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ್ ಅವರ ಸೂಚನೆ ಬಳಿಕ ಪ್ರಕರಣ ಸಂಬಂಧ ಎಫ್.ಐ.ಆರ್ ದಾಖಲಾಗಿದೆ.
ಮೌಢ್ಯಕ್ಕೆ ಮಗು ಬಲಿ; ನ್ಯಾಯಾಧೀಶರಿಂದ ತರಾಟೆ
ಕಾನೂನು ಅರಿವು; ಇಂದು ಜಿಲ್ಲೆಯ ತಂಬಾಗನ್ನ ಹಟ್ಟಿಯಲ್ಲಿ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ್ ಅವರು ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಹಮ್ಮಿಕೊಂಡು, ಪೋಕ್ಸೋ ಕಾಯ್ದೆ ಹಾಗೂ ಕರ್ನಾಟಕ ಅಮಾನವೀಯ ಕೆಟ್ಟ ಪದ್ಧತಿ ಪ್ರತಿಬಂಧ ಮತು ನಿರ್ಮೂಲನೆ ಅಧಿನಿಯಮ -2017 ಮೊದಲಾದ ಕಾನೂನುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ತಂಬಾಗನ್ನ ಹಟ್ಟಿಯ ಮನೆಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಬಾಣಂತಿ ಹಾಗೂ ಹಸುಗೂಸು ಮನೆಯ ಪ್ರತ್ಯೇಕ ಕೊಠಡಿಯಲ್ಲಿರುವುದು ಕಂಡು ಮಾತನಾಡಿಸಿ ಹರ್ಷ ವ್ಯಕ್ತಪಡಿಸಿದರು. ಇದೆ ರೀತಿ ಜನರಲ್ಲಿ ಮಾನವೀಯತೆಯ ಹಾಗೂ ಮೌಢ್ಯಚಾರಣೆ ವಿರುದ್ಧದ ಅರಿವು ಮೂಡಬೇಕು ಎಂದರು. ಈ ಸಂದರ್ಭದಲ್ಲಿ ಗೊಲ್ಲ ಸಮುದಾಯದ ರಾಜ್ಯ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷ, ಸಮುದಾಯದ ಚಲನ ಚಿತ್ರ ಸಂಗೀತಗಾರ ಮೋಹನ್, ತಹಶೀಲ್ದಾರ್, ಸ್ಥಳೀಯ ಜನ ಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು ಮತ್ತಿತರರು ಹಾಜರಿದ್ದರು.
ಸುಳ್ಳು ಸುದ್ದಿ ತಡೆಯಲು ಕಠಿಣ ಕಾನೂನು ಜಾರಿ; ಸಚಿವ ಡಾ. ಜಿ. ಪರಮೇಶ್ವರ್
+ There are no comments
Add yours