ಸುಳ್ಳು ಸುದ್ದಿ ತಡೆಯಲು ಕಠಿಣ ಕಾನೂನು ಜಾರಿ; ಸಚಿವ ಡಾ. ಜಿ. ಪರಮೇಶ್ವರ್
Tumkurnews
ತುಮಕೂರು; ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ಸದ್ಯದಲ್ಲಿಯೇ ಕಠಿಣ ಕಾನೂನನ್ನು ಜಾರಿಗೆ ತರಲಾಗುತ್ತಿದ್ದು, ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಸುಳ್ಳು ಸುದ್ದಿ ಹರಡುವಿಕೆಯನ್ನು ನಿಲ್ಲಿಸಲು ಸಕಲ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದಿಂದ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ, ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು, ಗಣ್ಯರ ಮೇಲೆ ಅನಾವಶ್ಯಕವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಗಂಭೀರ ಪರಿಣಾಮಗಳು ಸಮಾಜದ ಮೇಲೆ ಉಂಟಾಗುತ್ತಿದೆ. ಇದನ್ನು ನಿಲ್ಲಿಸಲು ಕಠಿಣ ಶಿಕ್ಷೆಯುಳ್ಳ ಕಾನೂನನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಚಿಂತನೆ ಸಮಾಜಮುಖಿಯಾಗಿರಬೇಕು ಮತ್ತು ಜನರ ಏಳಿಗೆಯನ್ನು ಬಯಸುವಂತಿರಬೇಕು. ಟೀಕೆಗಳು ಸತ್ಯ ಆಧಾರಿತ ಟೀಕೆಯಾಗಿರಬೇಕು. ಸುಳ್ಳಿನ ಟೀಕೆಯಾಗಿರಬಾರದು ಎಂದ ಅವರು ‘ತಟಸ್ಥ ನೀತಿ ಪತ್ರಕರ್ತರಿಗೆ ಶೋಭೆ ತರುತ್ತದೆ’ ಎಂದರು.
ಜೀವನೋಪಾಯಕ್ಕಾಗಿ ಪತ್ರಿಕೋದ್ಯಮಕ್ಕೆ ಬರುತ್ತಿರುವವರು ಹೆಚ್ಚುತ್ತಿದ್ದಾರೆ. ಪತ್ರಿಕೋದ್ಯಮ ಒಂದು ಜವಾಬ್ದಾರಿ ಎಂದು ಹೇಳುವವರು ಕಡಿಮೆಯಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಬೇಡಿಕೆಯಂತೆ ತುಮಕೂರು ನಗರದ 2 ಕಿ.ಮೀ. ವ್ಯಾಪ್ತಿಯೊಳಗೆ 5 ಎಕರೆ ಜಮೀನನ್ನು ಗುರುತಿಸಿ ನೋಂದಾಯಿತ ಪತ್ರಕರ್ತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು, ಜಿಲ್ಲೆಯ ಪತ್ರಕರ್ತರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದು ಸಂತಸ ನೀಡಿದೆ ಎಂದರು.
ಸರ್ಕಾರದ ಸವಲತ್ತುಗಳು ಏನೇ ಇದ್ದರೂ ಪತ್ರಕರ್ತರಿಗೆ ಒದಗಿಸಲಾಗುವುದು. ಪತ್ರಕರ್ತರ ಕಲ್ಯಾಣ ನಿಧಿಗೆ ರೂ. 500ಕೋಟಿ ನೀಡುವ ಸಂಬಂಧ ಸದ್ಯದಲ್ಲೇ ಘೋಷಣೆ ಹೊರಡಿಸಲಾಗುವುದು ಎಂದು ಈ ಸಂದರ್ಭ ಸಚಿವರು ತಿಳಿಸಿದರು.
ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ.ನಿ ಪುರುಷೋತ್ತಮ್ ಮಾತನಾಡಿ, ಗ್ರಾಮೀಣ ಪತ್ರಕರ್ತರು ವಾಸ್ತವವಾಗಿ ಸಂಕಷ್ಟದಲ್ಲಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಗ್ರಾಮೀಣ ಪತ್ರಕರ್ತರ ಏಳಿಗೆಗಾಗಿ ಸರ್ಕಾರದಿಂದ ಕಾರ್ಯಕ್ರಮಗಳು ಹೆಚ್ಚೆಚ್ಚು ಜಾರಿಯಾಗಬೇಕು. ಕೆಯುಡಬ್ಲ್ಯೂಜೆ ಸದಸ್ಯತ್ವ ಹೊಂದಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಂತೆ ಅವರು ಈ ಸಂದರ್ಭ ಸಚಿವರಲ್ಲಿ ಮನವಿ ಮಾಡಿದರು.
ಪತ್ರಕರ್ತರ ಮಾಸಾಶನವನ್ನು 10,000 ರೂ.ಗಳಿಂದ 12,000 ರೂ.ಗಳಿಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವುದು ಸಂತಸ ತಂದಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸಿದ ಅವರು, ಜಿಲ್ಲೆಯ ಪತ್ರಕರ್ತರು ನೆಮ್ಮದಿಯಿಂದ ಜೀವನ ನಡೆಸಲು ನಿವೇಶನ ಅಗತ್ಯವಿದ್ದು, ಪತ್ರಕರ್ತರಿಗೆ ನಿವೇಶನ ಒದಗಿಸಿಕೊಡುವಂತೆ ಕೋರಿಕೆ ಇಟ್ಟರು. 20ಲಕ್ಷ ರೂ. ವೆಚ್ಚದಲ್ಲಿ ಪತ್ರಿಕಾ ಭವನವನ್ನು ನವೀಕರಣಗೊಳಿಸಲಾಗಿದ್ದು, ಇನ್ನು 10ಲಕ್ಷ ರೂ. ವೆಚ್ಚದಲ್ಲಿ ಉಳಿದ ಕಾಮಗಾರಿಗಳನ್ನು ಸದ್ಯದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೊಳ್ಳು ಪತ್ರಕರ್ತರು ಹೆಚ್ಚಿದ್ದು, ಇದರಿಂದ ನೈಜ ಪತ್ರಕರ್ತರಿಗೆ ಕಳಂಕ ಮೆತ್ತಿಕೊಳ್ಳುತ್ತಿದೆ. ಇದು ನೋವಿನ ಸಂಗತಿಯಾಗಿದ್ದು, ಬ್ಲಾಕ್ ಮೇಲ್ ಮಾಡುವುದಕ್ಕಾಗಿಯೇ ಪತ್ರಿಕೋದ್ಯಮದ ಸೋಗು ಹಾಕುವಂತಹ ಜೊಳ್ಳು ಪತ್ರಕರ್ತರನ್ನು ಪತ್ರಿಕಾ ವೃತ್ತಿಯಿಂದ ಹೊರಗಿಡುವ ಕೆಲಸ ಪ್ರಥಮ ಆದ್ಯತೆ ಮೇರೆಗೆ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‍ವಾಡ್, ವಾರ್ತಾಧಿಕಾರಿ ಎಂ.ಆರ್. ಮಮತ, ಸಿದ್ಧಗಂಗಾ ವೈದ್ಯಕೀಯ ಸಂಶೋದನಾ ಕೇಂದ್ರದ ಡಾ.ಪರಮೇಶ್, ಉಪಾಧ್ಯಕ್ಷ ಚಿಕ್ಕೀರಪ್ಪ, ಪ್ರಸನ್ನಮೂರ್ತಿ, ತಿಪಟೂರು ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್ ಹಾಜರಿದ್ದರು.
+ There are no comments
Add yours