ಅಧಿಕಾರಿಗಳೊಂದಿಗೆ ಜಿಪಂ ಸಿಇಒ ಸಭೆ
Tumkurnews
ತುಮಕೂರು; ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದಲ್ಲಿ ರೈತರು, ಗ್ರಾಮೀಣ ಜನರ ಸಹಕಾರ ಅಗತ್ಯ. ಹಾಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 500 ಮಂದಿ ರೈತರನ್ನು ತಮ್ಮ ಸಂಪರ್ಕದಲ್ಲಿ ಹೊಂದಿರಬೇಕು. ಕುಡಿಯುವ ನೀರು, ಸ್ವಚ್ಚತೆ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಜನತೆಗೆ ಸಮರ್ಪಕ ರೀತಿಯಲ್ಲಿ ಕಲ್ಪಿಸಿಕೊಡಲು ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ನೀಡುವ ಅಂಕಿಅಂಶಗಳ ಪ್ರಗತಿ ಪರಿಶೀಲನೆ ಮಾಡುವ ಬದಲು ಕ್ಷೇತ್ರದಲ್ಲಿನ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳ ಮನೋಭಾವವನ್ನು ಬದಲಾಯಿಸಲು ಹಾಗೂ ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ ಜೊತೆಗೆ ಆರ್.ಡಿ.ಪಿ.ಆರ್ ಇಲಾಖೆಗೆ ಹೆಚ್ಚು ಪ್ರಾತಿನಿಧ್ಯ ಕೊಡಲಾಗುವುದು ಎಂದರು.
ಸಾರ್ವಜನಿಕರ ಸಮಸ್ಯೆಗಳು ಹಾಗೂ ಮನವಿಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು, ಮಹಾತ್ಮಗಾಂಧಿ ನರೇಗಾ ಯೋಜನೆ, ಜಲಜೀವನ್ ಮಿಷನ್, ಸ್ವಚ್ಚಭಾರತ್ ಮಿಷನ್ (ಗ್ರಾ), ಗ್ರಾಮೀಣ ಕುಡಿಯುವ ನೀರು ಪೂರೈಕೆ, ಎನ್.ಆರ್.ಎಲ್.ಎಂ, ಮೊದಲಾದ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರದ ಆದೇಶಗಳನ್ನು ಕಾಲಕಾಲಕ್ಕೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿಮಗೆ ಗೌರವ ಹೆಚ್ಚಾಗಬೇಕಾದರೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶದ 30 ವರ್ಷ ಪ್ರತಿಯೊಬ್ಬರಿಗೂ ಎಂ.ಸಿ.ಡಿ ಅಡಿಯಲ್ಲಿ ಬಿ.ಪಿ, ಶುಗರ್ ಹಾಗೂ ಕ್ಯಾನ್ಸರ್ ತಪಾಸಣೆ ಮಾಡಿ ಖಾಯಿಲೆಗಳನ್ನು ಪತ್ತೆಹಚ್ಚಿ ಪ್ರಾರಂಭದ ಹಂತದಿಂದಲೇ ಚಿಕಿತ್ಸೆ ನೀಡುವುದರಿಂದ ಮಾರಣಾಂತಿಕ ಖಾಯಿಲೆಗಳನ್ನು ತಡೆಗಟ್ಟುವುದು ಈ ಯೋಜನೆ ಕಾರ್ಯರೂಪಕ್ಕೆ ತರುವುದು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೈಪಾಲ್ ಡಿ, ಸೇರಿದಂತೆ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ)(ಎಸ್.ಮಂಜುನಾಥ್) ತಾಲ್ಲೂಕು ಯೋಜನಾಧಿಕಾರಿಗಳು(ಲೋಕೇಶ್‍ಕುಮಾರ್ ಬಿ) ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿ ಸೇರಿದಂತೆ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಗೃಹ ಲಕ್ಷ್ಮಿಗೆ ಚಾಲನೆ; ನೋಂದಣಿಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಗೃಹಲಕ್ಷ್ಮೀ; ತುಮಕೂರು ಜಿಲ್ಲೆಯಲ್ಲಿ ನೋಂದಣಿ ಯಾವಾಗ? ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ
+ There are no comments
Add yours