ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ಬಿಜೆಪಿ ಜಯಭೇರಿ
Tumkurnews
ತುಮಕೂರು; ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ 2ನೇ ಹಂತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂರು ಪಂಚಾಯಿತಿಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದಂತೆ ಚುನಾವಣೆ ನಡೆದಿದೆ. ಈ ಪೈಕಿ ಏಳು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗಂಗೋನಹಳ್ಳಿ; ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಗಂಗೋನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಕೆಂಬಳಲು ಕ್ಷೇತ್ರದ ನಾಗರತ್ನಮ್ಮ ಉಮೇಶ್ ಅವಿರೋಧವಾಗಿ ಆಯ್ಕೆಯಾದರೆ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವೀಣಾ ಮತ್ತು ರಿಜ್ವಾನ್ ಅವರುಗಳು ನಾಮಪತ್ರ ಸಲ್ಲಿಸಿದ್ದು,14 ಸದಸ್ಯರಲ್ಲಿ ಬಿಜೆಪಿ ಬೆಂಬಲಿತ ಗಂಗೋನಹಳ್ಳಿ ಕ್ಷೇತ್ರದ ವೀಣಾ 8 ಮತಗಳನ್ನು ಪಡೆದು ಆಯ್ಕೆಯಾದರೆ. ರಿಜ್ವಾನ್ 6 ಮತಗಳನ್ನು ಪಡೆದರು.
ಬುಗುಡನಹಳ್ಳಿ; ಹತ್ತೊಂಬತ್ತು ಸದಸ್ಯ ಬಲದ ಬುಗುಡನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಕ್ಯಾಟಗೆರಿ(ಎ)ಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ರೇಖಾ ಶಿವರಾಜ್ ಮತ್ತು ಲತಾ ಪಾಲಾಕ್ಷಯ್ಯ ಸ್ಪರ್ಧಿಸಿದ್ದರು. ಇವರಲ್ಲಿ ರೇಖಾ ಶಿವರಾಜ್ 11 ಮತಗಳನ್ನು ಪಡೆದು ಆಯ್ಕೆಯಾದರೆ, ಲತಾ ಪಾಲಾಕ್ಷಯ್ಯ 9 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತ ಸೋಮಶೇಖರ್, ವಿಶಾಲ, ಲತಾ ಇವರುಗಳು ಸ್ಪರ್ಧಿಸಿದ್ದು, ಸುಜಾತ ಸೋಮಶೇಖರ್ 9 ಮತಗಳನ್ನು ಪಡೆದು ಆಯ್ಕೆಯಾದರೆ, ವಿಶಾಲ 3 ಮತ್ತು ಲತಾ 7 ಮತಗಳನ್ನು ಪಡೆದರು.
ಊರ್ಡಿಗೆರೆ; ದೇವರಾಯನದುರ್ಗ ಕ್ಷೇತ್ರವನ್ನು ಒಳಗೊಂಡ ಉರ್ಡಿಗೆರೆ ಗ್ರಾ.ಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಅವಿರೋಧವಾಗಿ ನಡೆದಿದ್ದು, ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಾಮಾನ್ಯ ಬಡ ಕುಟುಂಬಕ್ಕೆ ಸೇರಿದ ಟೀ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದೇವರಾಯನದುರ್ಗ; ಕ್ಷೇತ್ರದ ಅನ್ನಪೂರ್ಣಮ್ಮ ಕೆ.ಎಸ್., ಉಪಾಧ್ಯಕ್ಷರಾಗಿ ಕೊಡಿಗೆಹಳ್ಳಿ ಕ್ಷೇತ್ರದ ಸುಗುಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಳೂರು; ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರಕೆರೆ; ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹೊಸಹಳ್ಳಿ ಕ್ಷೇತ್ರದ ಅನೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಕುಚ್ಚಂಗಿಯ ಸುಷ್ಮಾ ನವೀನ್ ಸ್ಪರ್ಧಿಸಿದ್ದು, ಎರಡು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಬಂದ ಹಿನ್ನೆಲೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.
ಹೊನಸಿಗೆರೆ; ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದು, ಕ್ಯಾಟಗೆರಿ ಎ ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಕುಮಾರ್, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ಅವರುಗಳು ಸ್ಪರ್ಧಿಸಿದ್ದು, ನೇತ್ರಾವತಿ ಕುಮಾರ್ ಅಧ್ಯಕ್ಷರಾಗಿ, ಉಮೇಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು.
ಮಸ್ಕಲ್; ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಮಸ್ಕಲ್ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಬಸವೇಗೌಡನಪಾಳ್ಯ ಕ್ಷೇತ್ರದ ಸುನಂದ ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಜನರಲ್‌ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕುರುಗುಂದ ಕ್ಷೇತ್ರದ ರಾಜು ಅವರುಗಳು ಸ್ಪರ್ಧಿಸಿದ್ದು, ಇಬ್ಬರನ್ನು ಹೊರತು ಪಡಿಸಿ ಬೇರೆಯವರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನರೇಗಾ ಯಶಸ್ಸಿಗೆ ಹೀಗೆ ಮಾಡಿ; ಪಿಡಿಒಗಳಿಗೆ ಜಿಪಂ ಸಿಇಒ ಮಹತ್ವದ ಸೂಚನೆ
ಸೀತಕಲ್ಲು; ಹದಿನಾರು ಸದಸ್ಯ ಬಲದ ಸೀತಕಲ್ಲು ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಜನರಲ್ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಳೇನಹಳ್ಳಿ ಕ್ಷೇತ್ರದ ರೇಖಾ ಮತ್ತು ಸೀತಕಲ್ಲು ಕ್ಷೇತ್ರದ ಕಲ್ಪನಾ ಅವರುಗಳು ಸ್ಪರ್ಧಿಸಿದ್ದರು. ಇವರಲ್ಲಿ ರೇಖಾ 12 ಮತಗಳನ್ನು ಪಡೆದರೆ, ಕಲ್ಪನಾ 3 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಳೇನಹಳ್ಳಿ ಕ್ಷೇತ್ರದ ಸೌಮ್ಯ ಅವರು ಅವಿರೋಧವಾಗಿ ಆಯ್ಕೆಯಾದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 35 ಗ್ರಾ.ಪಂ.ಗಳಲ್ಲಿ 33 ಕ್ಕೆ ಇದುವರೆಗೂ ಎರಡನೇ ಸುತ್ತಿನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅತೀ ಹೆಚ್ಚು ಗ್ರಾ.ಪಂಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ವಿಧಾನಸಭಾ ಅಧಿವೇಶನ ನಡೆಯುತಿದ್ದರೂ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿರುವ ಶಾಸಕ ಬಿ.ಸುರೇಶಗೌಡ, ಸಾಧ್ಯವಾದಷ್ಟು ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯವಂತೆ ತಂತ್ರ ರೂಪಿಸಿದ್ದು, ಇದು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ದಿಕ್ಸೂಚಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗೃಹಲಕ್ಷ್ಮೀ; ತುಮಕೂರು ಜಿಲ್ಲೆಯಲ್ಲಿ ನೋಂದಣಿ ಯಾವಾಗ? ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ
+ There are no comments
Add yours