ಗೃಹ ಲಕ್ಷ್ಮಿ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಚಾಲನೆ
Tumkurnews
ತುಮಕೂರು; ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಯಾಗಬಯಸುವ ಪಡಿತರಚೀಟಿ ಹೊಂದಿದ ಕುಟುಂಬದ ಯಜಮಾನಿ ಮಹಿಳೆಯರು ತಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಕಳುಹಿಸಲಾಗುವ ಎಸ್.ಎಂ.ಎಸ್.ನಲ್ಲಿ ತಿಳಿಸಿದ ದಿನಾಂಕಗಳಂದು ಮಾತ್ರ ನಿಗದಿತ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಜುಲೈ 19ರಂದು ಮುಖ್ಯಮಂತ್ರಿಗಳು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಉಪ ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಯೋಜನೆಗೆ ಸಂಬಂಧಿಸಿದಂತೆ ಹಲವು ಮಾರ್ಗದರ್ಶನಗಳನ್ನು ನೀಡಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಯಶಸ್ವಿಯಾಗಬೇಕೆಂಬ ಸೂಚನೆ ನೀಡಲಾಗಿದ್ದು, ಅದರನ್ವಯ ಇಂದು ತುಮಕೂರು ತಾಲ್ಲೂಕು ಕೋರಾ ಗ್ರಾಮ ಪಂಚಾಯತಿಯಲ್ಲಿ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 7,22,523 ಪಡಿತರ ಚೀಟಿದಾರರಿದ್ದು, ಅಂತ್ಯೋದಯ, ಎಪಿಎಲ್, ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಯಜಮಾನಿ ಮಹಿಳೆಯರಿಗೆ ಮಾಸಿಕ ರೂ.2000 ಗಳಂತೆ ಪ್ರತಿ ತಿಂಗಳು ಈ ಜಿಲ್ಲೆಗೆ 140 ಕೋಟಿ ರೂ.ಗಳು ಬೇಕಾಗುತ್ತದೆ. ಬ್ಯಾಂಕಿನಲ್ಲಿ ಇಕೆವೈಸಿ ಆಗಿರುವ, ಆಧಾರ್ ಲಿಂಕ್ ಆಗಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ. 2,000 ಜಮೆಯಾಗಲಿದೆ. ಕುಟುಂಬದ ಯಜಮಾನಿ ಮಹಿಳೆಯರಿಗೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಸ್‍ಎಂಎಸ್ ರವಾನಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ನೋಂದಣಿ ಉಚಿತವಾಗಿದ್ದು, ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲವೆಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 744 ನೋಂದಣಿ ಕೇಂದ್ರಗಳಿದ್ದು, ಒಂದು ಕೇಂದ್ರದಲ್ಲಿ ದಿನಕ್ಕೆ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಬಹುದಾಗಿದ್ದು, ಯಜಮಾನಿ ಮಹಿಳೆಯರು ತಮಗೆ ಕಳುಹಿಸಲಾದ ಮೆಸೇಜ್‍ನಲ್ಲಿ ತಿಳಿಸಲಾದ ದಿನಾಂಕಗಳಂದು ಮಾತ್ರ ನಿಗದಿತ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬಹುದಾಗಿದೆ. ನೋಂದಣಿ ವೇಳಾಪಟ್ಟಿಯು ಪಡಿತರ ಚೀಟಿ ವಿಳಾಸಕ್ಕೆ ಸಮೀಪವಿರುವ ಕೇಂದ್ರದಲ್ಲಿರುತ್ತದೆ ಹಾಗೂ ಅರ್ಜಿ ನೋಂದಾಯಿಸುವ ಸಂದರ್ಭದಲ್ಲಿ ಪಡಿತರ ಚೀಟಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಆಧಾರ್ ನೋಂದಾಯಿತ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದು ಎಂದು ಅವರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂಬಂಧ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ರಾಜ್ಯ ಮಟ್ಟದ ಉಚಿತ ಸಹಾಯವಾಣಿ 1902 ಹಾಗೂ ತುಮಕೂರು ಜಿಲ್ಲಾ ಮಟ್ಟದಲ್ಲಿ 155304, 0816-2213400 ಯನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲೆಯ ಅಂದಾಜು 7 ಲಕ್ಷ ಯಜಮಾನಿ ಮಹಿಳೆಯರಿಗೆ ತಿಂಗಳಿಗೆ 2000 ದಂತೆ ವರ್ಷಕ್ಕೆ 24ಸಾವಿರ ರೂ. ವಿತರಿಸಲಿದ್ದು, ವರ್ಷಕ್ಕೆ 1680 ಕೋಟಿ ರೂ.ಗಳು ಬೇಕಾಗುತ್ತದೆ. ಯಾವುದೇ ಹಿರಿಯ ನಾಗರಿಕರನ್ನು, ಮಹಿಳೆಯರನ್ನು ವಿನಾಕಾರಣ ಅಲೆದಾಡಿಸದೆ ಅವರು ಬಂದ ತಕ್ಷಣ ಅರ್ಜಿ ಸ್ವೀಕರಿಸಿ ನೋಂದಣಿ ಮಾಡಬೇಕು. ಯಾವುದೇ ಫಲಾನುಭವಿಯ ಹೆಸರು ಕೈಬಿಟ್ಟು ಹೋದಲ್ಲಿ ಯೋಜನೆಗೆ ಸೇರ್ಪಡೆಗೊಳ್ಳುವ ಅವಕಾಶ ನಿರಂತರವಾಗಿ ದೊರಕಲಿದೆ ಎಂದರು.
ಗ್ರಾಮಪಂಚಾಯತಿಗಳು ಟಾಂಟಾಂ, ಕರಪತ್ರ ಹಂಚುವ ಮೂಲಕ ಈ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕೋರಾ ಗ್ರಾಮಪಂಚಾಯತಿ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷೆ ಮಧು ಬಿ. ಸೇರಿದಂತೆ ಪಡಿತರ ಚೀಟಿ ಯಜಮಾನಿ ಮಹಿಳೆಯರು ಈ ಸಂದರ್ಭ ಉಪಸ್ಥಿತರಿದ್ದರು.
ಗೃಹಲಕ್ಷ್ಮೀ; ತುಮಕೂರು ಜಿಲ್ಲೆಯಲ್ಲಿ ನೋಂದಣಿ ಯಾವಾಗ? ಎಲ್ಲಿ? ಹೇಗೆ? ಇಲ್ಲಿದೆ ಮಾಹಿತಿ
+ There are no comments
Add yours