ಮತ ಎಣಿಕೆ ಹೇಗೆ ನಡೆಯಲಿದೆ ಗೊತ್ತೇ?
Tumkurnews
ತುಮಕೂರು; ಜಿಲ್ಲೆಯಲ್ಲಿ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 198 ಸುತ್ತಿನಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು; ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಮೇ 13ರ ಬೆಳಿಗ್ಗೆ 8 ಗಂಟೆಯಿಂದ ನಡೆಸಲಾಗುವುದು.
ಮತ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ತಲಾ 14ರಂತೆ ಒಟ್ಟು 154 ಇವಿಎಂ ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಗುಬ್ಬಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯನ್ನು 16; ತಿಪಟೂರು, ತುರುವೇಕೆರೆ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 17; ಕೊರಟಗೆರೆ, ಪಾವಗಡ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 18; ಚಿಕ್ಕನಾಯಕನಹಳ್ಳಿ, ಕುಣಿಗಲ್ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 19; ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು 20 ಸೇರಿದಂತೆ ಒಟ್ಟು 198(187 ಪೂರ್ಣ ಸುತ್ತು) ಸುತ್ತಿನಲ್ಲಿ ಮತಗಳ ಎಣಿಕೆ ನಡೆಸಲಾಗುವುದು.
ಮತ ಎಣಿಕೆಯನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗುವುದು. ಎಣಿಕೆಯು 4 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಸಲಾಗುವುದು. ಅಂಚೆ ಮತ ಪತ್ರ, ಇಟಿಪಿಬಿಎಸ್ ಮತ, ಕಂಟ್ರೋಲ್ ಯೂನಿಟ್ ಮತ ಹಾಗೂ ವಿವಿ ಪ್ಯಾಟ್‍ನಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುವುದು.
ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮೊದಲಿಗೆ ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುವುದು. ಇಟಿಪಿಬಿಎಸ್ ಮತ ಎಣಿಕೆಗಾಗಿ ಕ್ಯೂಆರ್ ಕೋಡ್ ರೀಡರ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಟ್ರೋಲ್ ಯೂನಿಟ್‍ಗಳ ಮತ ಎಣಿಕೆ ಮೇಜುಗಳ ಮೇಲೆ ಕ್ರಮವಾಗಿ 1 ರಿಂದ 14ರವರೆಗೆ ಸಂಖ್ಯೆಯನ್ನು ನಮೂದಿಸಲಾಗುವುದು. ಮತಗಟ್ಟೆ ಸಂಖ್ಯೆಯ ಕ್ರಮಾಂಕದಲ್ಲಿಯೇ ಕಂಟ್ರೋಲ್ ಯೂನಿಟ್‍ಗಳನ್ನು ಎಣಿಕೆಗೆ ಪೂರೈಸಲಾಗುವುದು. ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಿಂದ ರ್ಯಾಂಡಮ್ ಆಗಿ 5 ಮತದಾನ ಖಾತ್ರಿ(ವಿವಿ ಪ್ಯಾಟ್) ಯಂತ್ರಗಳನ್ನು ಲಾಟರಿ ಮೂಲಕ ಆರಿಸಿ ಎಣಿಕೆ ಮಾಡಲಾಗುವುದು. ಇದನ್ನು ಕಂಟ್ರೋಲ್ ಯೂನಿಟ್ ಫಲಿತಾಂಶದೊಂದಿಗೆ ತಾಳೆ ಮಾಡಲಾಗುತ್ತದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 14 ಇವಿಎಂ ಟೇಬಲ್‍ನಂತೆ ಒಟ್ಟು 154 ಟೇಬಲ್, ಇಟಿಪಿಬಿಎಸ್ ಎಣಿಕೆಗಾಗಿ ತಲಾ 1ರಂತೆ ಒಟ್ಟು 11 ಟೇಬಲ್, ಅಂಚೆ ಮತಪತ್ರ ಎಣಿಕೆಗಾಗಿ ಒಟ್ಟು 30 ಟೇಬಲ್ ಸೇರಿದಂತೆ 195 ಟೇಬಲ್‍ಗಳಲ್ಲಿ ಮತ ಎಣಿಕಾ ಕಾರ್ಯವನ್ನು ನಡೆಸಲಾಗುವುದು. ಇದಕ್ಕಾಗಿ ಒಟ್ಟು 651 ಅಧಿಕಾರಿ, ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್’ಗಳನ್ನು ನಿಯೋಜಿಸಲಾಗಿದೆ.
ಸುಗಮವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 5 ಮಂದಿ ಡಿವೈ.ಎಸ್‍ಪಿ, 17 ಮಂದಿ ಪೊಲೀಸ್ ಇನ್ಸ್’ಪೆಕ್ಟರ್, 33 ಮಂದಿ ಸಬ್ ಇನ್ಸ್’ಪೆಕ್ಟರ್, 55 ಮಂದಿ ಸಹಾಯಕ ಸಬ್‍ಇನ್ಸ್’ಪೆಕ್ಟರ್, 285 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಶಸ್ತ್ರ ಸಜ್ಜಿತ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
+ There are no comments
Add yours