ತುಮಕೂರು; ಮೇ 10ರ ಮಧ್ಯರಾತ್ರಿವರೆಗೆ ನಿಷೇದಾಜ್ಞೆ ಜಾರಿ; ಡಿಸಿ ಆದೇಶ

1 min read

 

ನಿಷೇಧಾಜ್ಞೆ ಜಾರಿ
Tumkurnews
ತುಮಕೂರು; ವಿಧಾನಸಭಾ ಚುನಾವಣೆ-2023ರ ಸಂಬಂಧ ಚುನಾವಣಾ ಬಹಿರಂಗ ಪ್ರಚಾರವನ್ನು ನಿಯಂತ್ರಿಸಲು ಹಾಗೂ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮೇ 8ರ ಸಂಜೆ 6 ಗಂಟೆಯಿಂದ ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ತುಮಕೂರು ಜಿಲ್ಲೆಯಾದ್ಯಂತ ಅನ್ವಯವಾಗುವಂತೆ ನಿಷೇಧಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್. ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಮೇ 10ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ. ನಿಷೇಧಾಜ್ಞೆಯ ಅವಧಿಯಲ್ಲಿ 5 ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ನಿಷೇಧಾಜ್ಞೆಯ ಅವಧಿಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಮತ್ತು ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದಾಗಲಿ ಅಥವಾ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ. ಯಾವುದೇ ಬಹಿರಂಗ ಪ್ರಚಾರ ಸಭೆ, ಸಮಾರಂಭ ಮತ್ತು ಮೆರವಣಿಗೆ ಮಾಡಬಾರದು. ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ಘೋಷಣೆ ಕೂಗುವುದು ಹಾಗೂ ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡತಕ್ಕದ್ದಲ್ಲ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟು ಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು. ಸಾರ್ವಜನಿಕ ಪ್ರಾಣ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗುವ ರೀತಿಯಲ್ಲಿ ವರ್ತಿಸತಕ್ಕದ್ದಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಶವಸಂಸ್ಕಾರ, ಮದುವೆ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ. ಚುನಾವಣಾ ಆಯೋಗವು ನೀಡಿರುವ ಸ್ಪಷ್ಟೀಕರಣದಂತೆ ಮತದಾನದ ಹಿಂದಿನ 48 ಗಂಟೆಯ ಅವಧಿಯಲ್ಲಿ ಅಭ್ಯರ್ಥಿಯು ಮನೆ-ಮನೆ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡುವುದಕ್ಕೆ ವಿನಾಯತಿ ನೀಡಲಾಗಿದೆ. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ.

About The Author

You May Also Like

More From Author

+ There are no comments

Add yours