ಬಸವಣ್ಣನವರು ಸಮ ಸಮಾಜದ ಕನಸನ್ನು ಬಿತ್ತಿದ್ದರು; ಹೊಟೇಲ್ ಶಿವಪ್ಪ

1 min read

 

ಬಸವಣ್ಣನವರು ಸಮ ಸಮಾಜದ ಕನಸನ್ನು ಬಿತ್ತಿದ್ದರು

Tumkurnews
ತುಮಕೂರು: ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರು ಸೇರಿದಂತೆ ಎಲ್ಲಾ ತಳಸಮುದಾಯದ ವ್ಯಕ್ತಿಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಸಮ ಸಮಾಜದ ಕನಸನ್ನು ಬಿತ್ತಿದ್ದರು ಎಂದು ತುಮಕೂರು ಉಪವಿಭಾಗಾಧಿಕಾರಿ ಹೊಟೇಲ್ ಶಿವಪ್ಪ ತಿಳಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ನಗರ ವೀರಶೈವ ಸೇವಾ ಸಮಾಜ, ವೀರಶೈವ ಲಿಂಗಾಯಿತ ಮಹಾಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಮಹಿಳಾ ಮೀಸಲಾತಿ ಎಂಬುದು ಎಂಟು ನೂರು ವರ್ಷಗಳ ಹಿಂದೆಯೇ ಜಾರಿಯಲ್ಲಿತ್ತು ಎಂಬುದು ನಿಜಕ್ಕೂ ಸಂತೋಷ ಪಡುವ ವಿಚಾರ ಎಂದರು.
ಬಸವಣ್ಣನವರು ಸಂಸ್ಕೃತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿಯೇ ಜನಸಾಮಾನ್ಯ ಭಾಷೆಯಾದ ಕನ್ನಡದ ಮೂಲಕ ಸರಳವಾಗಿ ವಚನಗಳನ್ನು ರಚಿಸುವ ಮೂಲಕ ಜನಸಾಮಾನ್ಯರಿಗೆ ಮೂಢನಂಬಿಕೆ, ಜಾತಿಯತೆಯ ವಿರುದ್ದ ಜ್ಞಾನದ ಜ್ಯೋತಿ ಹೊತ್ತಿಸುವ ಕೆಲಸ ಮಾಡಿ, ಜನ ಬದುಕನ್ನು ಸುಂದರಗೊಳಿಸಿದ್ದರು. ಅವರ ಕಾಯಕವೇ ಕೈಲಾಸ, ನುಡಿದರೆ ಮುತ್ತಿನ ಹಾರದಂತಿರಬೇಕು, ದಯೇ ಇಲ್ಲದ ಧರ್ಮ ಅದಾವುದಯ್ಯ ಎಂಬ ಸರಳ ವಚನಗಳ ಮೂಲಕ ಆಳುವ ವರ್ಗ ಮತ್ತು ಉಳ್ಳವರ ಕಣ್ಣು ತೆರೆಸುವ ಕೆಲಸ ಮಾಡಿದ್ದರು. ಅವರ ಸರಳ ನಡೆ, ನುಡಿಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿ ಕೊಂಡು,ಅವರ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರು.
ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಬಸವಣ್ಣ 12ನೇ ಶತಮಾನದ ಐತಿಹಾಸಿಕ ಮಹಾಪುರುಷ. 12ನೇ ಶತಮಾನದಿಂದ 20ನೇ ಶತಮಾನದವರೆಗೆ ಬಸವ ಜಯಂತಿಯನ್ನು ಎತ್ತುಗಳ ಪೂಜೆ ನಡೆಸುವ ಮೂಲಕ ಆಚರಿಸುತಿದ್ದರು. ರಾಜ್ಯದಲ್ಲಿ ಐದು ಸಾವಿರ ಮಠಗಳಿದ್ದರೂ ಅವುಗಳಿಗೂ ಹೇಗೆ ಬಸವ ಜಯಂತಿ ಆಚರಿಸಬೇಕೆಂಬ ಪರಿಕಲ್ಪನೆ ಇರಲಿಲ್ಲ. ಆದರೆ ಮೊದಲ ಬಾರಿಗೆ 1913ರಲ್ಲಿ ಹರ್ಡಿಕರ್ ಮಂಜಪ್ಪ ಅವರು, ಬಸವ ಜಯಂತಿಯನ್ನು ಬಸವಣ್ಣನವರ ಜಯಂತಿಯಾಗಿ ಆಚರಿಸಿದರು. ಕುಲಕರ್ಣೀ ಹುದ್ದೆಯಿಂದ ಪ್ರಧಾನಮಂತ್ರಿಯ ಹುದ್ದೆಯವರೆಗೆ ಏರಿದ ಬಸವಣ್ಣ, ಸಮಾಜದಲ್ಲಿದ್ದ ಜಾತಿಯ ಅಹಂ ಮತ್ತು ಕಿಳೀರಿಮೆಯನ್ನು ಹೋಗಲಾಡಿಸಿ, ಸಮ ಸಮಾಜದ ಕನಸು ಕಂಡವರು. ಇಷ್ಟ ಲಿಂಗ ಧಾರಣೆ ಮಾಡಿರುವ ಎಲ್ಲರೂ ಸಮಾನರು ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ, ಡಿ.ವಿ ಸುರೇಶಕುಮಾರ್, ಮೋಹನ್‍ಕುಮಾರ್ ಪಟೇಲ್, ಅನಸೂಯಮ್ಮ, ನಾಗಭೂಷಣ್, ಶಿವಕುಮಾರ್, ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಅತ್ತಿ ರೇಣುಕಾನಂದ, ಮಲ್ಲಸಂದ್ರ ಶಿವಣ್ಣ, ಟಿ.ಆರ್.ಸದಾಶಿವಯ್ಯ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಾ.ವೈ.ಕೆ ಬಾಲಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours