ಚುನಾವಣಾ ವೆಚ್ಚ; ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಮಾಹಿತಿ
Tumkurnews
ತುಮಕೂರು: ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾರ್ಚ್ 29 ರಿಂದ ಏಪ್ರಿಲ್ 18ರವರೆಗೆ 35,81,057 ರೂ.ಗಳನ್ನು ವಿವಿಧ ರಾಜಕೀಯ ಪಕ್ಷಗಳ ವೆಚ್ಚಕ್ಕೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಚುನಾವಣೆ ನಿಮಿತ್ತ ಪಕ್ಷಗಳಿಂದ ಏರ್ಪಡಿಸುವ ಸಭೆ, ಸಮಾರಂಭ ಸೇರಿದಂತೆ ವಿವಿಧ ಪ್ರಚಾರ ಕಾರ್ಯಕ್ರಮ, ಪ್ರಚಾರ ಸಾಮಾಗ್ರಿಗಳಿಗೆ ಚುನಾವಣಾ ಆಯೋಗ ನಿಗದಿಪಡಿಸಿದ ದರದನ್ವಯ ಸಂಬಂಧಿಸಿದ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ದಿನ ಅಂದರೆ ಮಾ.29 ರಿಂದ ಏಪ್ರಿಲ್ 18ರವರೆಗೂ ಭಾರತೀಯ ಜನತಾ ಪಕ್ಷಕ್ಕೆ 6,30,963 ರೂ., ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ 8,99,207 ರೂ., ಜನತಾ ದಳ(ಸೆಕ್ಯುಲರ್) ಪಕ್ಷಕ್ಕೆ 20,50,117 ರೂ., ಹಾಗೂ ಇತರೆ ಪಕ್ಷಗಳಿಗೆ 710 ರೂ. ಸೇರಿದಂತೆ ಒಟ್ಟು 35,81,057 ರೂ. ಗಳ ಚುನವಾಣಾ ವೆಚ್ಚವನ್ನು ಸೇರಿಸಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಗರಿಷ್ಟ 40 ಲಕ್ಷ ರೂ.ಗಳವರೆಗೆ ವೆಚ್ಚ ಮಾಡಲು ಅವಕಾಶವಿದೆ. ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಡಿದ ವೆಚ್ಚ ಹಾಗೂ ನಾಮಪತ್ರ ಸಲ್ಲಿಸಿದ ನಂತರ ಮಾಡಿದ ವೆಚ್ಚವನ್ನು ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುವುದು.
ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುವ ಬ್ಯಾನರ್, ಲೌಡ್‍ಸ್ಪೀಕರ್, ಪೋಸ್ಟರ್, ಕರಪತ್ರ, ಬಾವುಟ, ಹೋರ್ಡಿಂಗ್ಸ್, ಕಟೌಟ್ ಸೇರಿದಂತೆ ವಿವಿಧ ವಸ್ತು, ಸಾಮಗ್ರಿಗಳಿಗೆ ದರ ನಿಗದಿಪಡಿಸಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಈ ದರಗಳು ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಸುವ ಚುನಾವಣಾ ಪ್ರಚಾರಕ್ಕೆ ಅನ್ವಯವಾಗುತ್ತದೆ. ಪ್ರಚಾರ ಕಾರ್ಯಗಳಿಗಾಗಿ ಬಳಸಲಾಗುವ ಸಾಮಗ್ರಿಗಳಿಗೆ ನಿಗದಿಪಡಿಸಿದ ದರವನ್ನು ಸಂಬಂಧಿಸಿದ ಪಕ್ಷ, ಅಭ್ಯಥಿಗಳ ವೆಚ್ಚಕ್ಕೆ ಸೇರಿಸಲಾಗುವುದು.
ಪ್ರಚಾರ ಕಾರ್ಯಗಳಿಗೆ ಬಳಸಲಾಗುವ ಆಂಪ್ಲಿಫೈಯರ್ ಹಾಗೂ ಮೈಕ್ರೋಫೋನ್ ಸಹಿತ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ 1 ಸೆಟ್ ಮೈಕ್, ಹಾರ್ನ್, 1 ಆಂಪ್ಲಿಫೈಯರ್, 1 ಬ್ಯಾಟರಿಯುಕ್ತ ಆಟೋ ಅನೌನ್ಸ್’ಮೆಂಟ್‍ಗಾಗಿ ದಿನವೊಂದಕ್ಕೆ 3400 ರೂ.(ಪರವಾನಗಿ ಶುಲ್ಕ ಮತ್ತು ಅನೌನ್ಸ್’ಮೆಂಟ್ ಮಾಡುವ ಕಾರ್ಮಿಕ ಸಂಭಾವನೆ ಸೇರಿ) ; ಸಭೆ, ಸಮಾರಂಭ, ಕಾರ್ಯಕ್ರಮ ಸ್ಥಳದಲ್ಲಿ 2 ಸ್ಪೀಕರ್ ಬಾಕ್ಸ್, 4 ಹಾರ್ನ್, ಸಾರಿಗೆ ಮತ್ತು ಕಾರ್ಮಿಕನನ್ನು ಬಳಸಲು ದಿನವೊಂದಕ್ಕೆ 3900 ರೂ.; 4 ಸ್ಪೀಕರ್ ಬಾಕ್ಸ್, 10 ಹಾರ್ನ್, ಸಾರಿಗೆ ಮತ್ತು ಕಾರ್ಮಿಕನನ್ನು ಬಳಸಲು ದಿನವೊಂದಕ್ಕೆ 7800 ರೂ.; 10 ಸ್ಪೀಕರ್, 40 ಹಾರ್ನ್, ಸಾರಿಗೆ ಮತ್ತು ಕಾರ್ಮಿಕನನ್ನು ಬಳಸಲು ದಿನವೊಂದಕ್ಕೆ 11,700 ರೂ.ಗಳನ್ನು ನಿಗದಿಪಡಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಾಲ್ಕೈದು ವ್ಯಕ್ತಿಗಳಿಗೆ ಆಸನ ವ್ಯವಸ್ಥೆ ಇರುವ ವೇದಿಕೆ, ಪೆಂಡಾಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 10’ x 10’ ಪೋಡಿಯಂಗೆ 650 ರೂ. ಹಾಗೂ 10’ x 20’ ಪೋಡಿಯಂಗೆ 1300 ರೂ., ಪ್ರತಿ ಚದರ ಅಡಿ ಪೆಂಡಾಲ್‍ಗೆ 6 ರೂ., ತಾರಾ ಪ್ರಚಾರಕರಿದ್ದಲ್ಲಿ ಪ್ರತಿ ಚದರ ಅಡಿ ಪೆಂಡಾಲ್‍ಗೆ 25 ರೂ.ಗಳನ್ನು ನಿಗದಿಪಡಿಸಲಾಗಿದೆ.
ಪ್ರಚಾರ ಕಾರ್ಯದಲ್ಲಿ ಪ್ರತಿ ಚದರ ಅಡಿ ಬಟ್ಟೆಯ ಬ್ಯಾನರ್ ಬಳಕೆಗೆ 40 ರಿಂದ 45 ರೂ. ಹಾಗೂ ಬಟ್ಟೆಯ ಬಾವುಟಗಳಿಗೆ 8 ರೂ.ಗಳನ್ನು ನಿಗದಿಪಡಿಸಲಾಗಿದೆ. ಪ್ಲಾಸ್ಟಿಕ್ ಬಾವುಟಗಳ ಬಳಕೆಗೆ ಅವಕಾಶವಿಲ್ಲ. ಕರಪತ್ರಗಳಿಗೆ ಸಂಬಂಧಿಸಿದಂತೆ 1’ x 8’ ಅಳತೆಗೆ 500 ರೂ.(1000 ಕಪ್ಪು-ಬಿಳುಪು ಪ್ರತಿಗಳಿಗೆ), 1’ x 4’ ಅಳತೆಗೆ 2000 ರೂ.(1000 ವರ್ಣದ ಪ್ರತಿಗಳಿಗೆ) ಹಾಗೂ 1’ x 4’ ಅಳತೆಗೆ 3000 ರೂ.(ಬಹುವರ್ಣದ ಪ್ರತಿಗಳಿಗೆ)ಗಳನ್ನು ನಿಗದಿಪಡಿಸಲಾಗಿದೆ.
ಪೋಸ್ಟರ್(ಕಾಗದದಲ್ಲಿ ಮಾತ್ರ) ಬಳಕೆಯಲ್ಲಿ ಸಿಂಗಲ್ ಡಮ್ಮಿ ಅಳತೆಯ 100 ಪ್ರತಿಗಳಿಗೆ 400 ರೂ., ಡಬಲ್ ಡಮ್ಮಿ ಅಳತೆಯ 100 ಪ್ರತಿಗಳಿಗೆ 700 ರೂ. ಹಾಗೂ ಬಹುವರ್ಣದ 100 ಪ್ರತಿಗಳಿಗೆ 1000 ರೂ.ಗಳನ್ನು ನಿಗದಿಪಡಿಸಲಾಗಿದೆ.
ಪ್ರತಿ ಚದರ ಅಡಿ ಹೋರ್ಡಿಂಗ್ಸ್ ಬಳಕೆಗೆ 8 ರಿಂದ 12 ರೂ., ಮರದ ಕಟ್‍ಔಟ್-20 ರೂ., ಬಟ್ಟೆಯ ಕಟ್‍ಔಟ್-15 ರೂ., ಅಲ್ಯುಮೀನಿಯಂ, ಮೆಟಲ್ ಕಟ್‍ಔಟ್ ಚೌಕಟ್ಟು-60 ರೂ. ಹಾಗೂ ದಿನವೊಂದಕ್ಕೆ ವೀಡಿಯೋ ಗ್ರಾಫರ್‍ಗಳಿಗೆ 3000 ರೂ., ಆಡಿಯೋ ಕ್ಯಾಸೆಟ್-600 ರೂ.(ಪ್ರತಿ ಸಿಡಿ), ಗೇಟ್ ನಿರ್ಮಾಣ-4000 ರೂ.(ಒಟ್ಟಾರೆ ಪಾವತಿ-ಐumಠಿ Sum), ಕಮಾನು ನಿರ್ಮಾಣ-20 ರೂ.(ಚ.ಅಡಿ)ಗಳನ್ನು ನಿಗದಿಪಡಿಸಲಾಗಿದೆ.
ವಾಹನ ಬಳಕೆಗೆ ಸಂಬಂಧಿಸಿದಂತೆ ದಿನವೊಂದಕ್ಕೆ ಜೀಪ್, ಟೆಂಪೋ, ಟ್ರಕ್ಕರ್-3500 ರೂ., ಸುಮೋ, ಕ್ವಾಲಿಸ್-3000 ರೂ., ಎಸಿ ರಹಿತ ಕಾರ್-2500 ರೂ., ಎಸಿ ಸಹಿತ ಕಾರ್-3000 ರೂ., ಆಟೋ ರಿಕ್ಷಾ-1000 ರೂ., ಟೆಂಪೋ ಟ್ರಾವೆಲ್ಲರ್-3500 ರೂ., ಮಿನಿ ಬಸ್-7500 ರೂ., ದ್ವಿಚಕ್ರ ವಾಹನ ಬೈಕ್(ರ್ಯಾಲಿ, ಕ್ಯಾನ್‍ವಾಸಿಂಗ್)-300 ರೂ., ಬಸ್(52 ಆಸನ)-12000 ರೂ.ಗಳನ್ನು ನಿಗದಿಪಡಿಸಲಾಗಿದ್ದು, ಗೂಡ್ಸ್ ವಾಹನ ಹಾಗೂ ಪ್ಲಾಸ್ಟಿಕ್ ಕಟೌಟ್ ಬಳಕೆಗೆ ಅನುಮತಿಸಲಾಗುವುದಿಲ್ಲ.
ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ರೂಮ್, ಅತಿಥಿ ಗೃಹ ಬಾಡಿಗೆ ಪಡೆದಲ್ಲಿ ದಿನವೊಂದಕ್ಕೆ ಸಾಮಾನ್ಯ ರೂಮ್-600 ರೂ., ಡಿಲಕ್ಸ್-650 ರಿಂದ 1200 ರೂ., ಸೂಪರ್ ಡಿಲಕ್ಸ್-2000 ರಿಂದ 2500 ರೂ., ಡಾರ್ಮೆಂಟರಿಗಳಿಗೆ 2500 ರೂ.ಗಳನ್ನು ನಿಗದಿಪಡಿಸಲಾಗಿದ್ದು, ವಾಹನ ಚಾಲಕರ ಭತ್ಯೆಗಾಗಿ 600 ರೂ.ಗಳ ದರವನ್ನು ಅಧಿಸೂಚಿಸಲಾಗಿದೆ.
ಕಾರ್ಯಕ್ರಮಗಳಲ್ಲಿ ಪೀಠೋಪಕರಣಗಳನ್ನು ಬಳಕೆ ಮಾಡಿದಲ್ಲಿ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಪ್ರತಿ ಪ್ಲಾಸ್ಟಿಕ್ ಚೇರ್ ವಿತೌಟ್ ಆರ್ಮ್-5 ರೂ., ವಿತ್ ಆರ್ಮ್ ಚೇರ್-6 ರೂ. ಹಾಗೂ ಸೋಫಾ(ಪ್ರತಿ ಆಸನ)-60 ರೂ.ಗಳನ್ನು ನಿಗದಿಪಡಿಸಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆದು ಹೋರ್ಡಿಂಗ್ ಅಳವಡಿಕೆಗಾಗಿ ಪ್ರತೀ ಚದರ ಅಡಿಗೆ 250 ರಿಂದ 600 ರೂ.ಗಳವರೆಗೆ ಆಯಾ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿರುವ ದರಗಳಿಗೆ ಅನ್ವಯವಾಗುತ್ತದೆ.
ಹೆಲಿಕಾಪ್ಟರ್ ಗ್ರೌಂಡ್ ಬಳಕೆಗೆ 15000 ರೂ., 1 ಲೀ. ಬಾಟಲಿ ನೀರಿಗೆ 20 ರೂ., 1 ಸಾಚೆಟ್ ಮಜ್ಜಿಗೆಗೆ 10 ರೂ., ಅರ್ಧ ಲೀ. ನೀರಿನ ಬಾಟಲಿಗಳ ಬಾಕ್ಸ್-240 ರೂ., 20 ಲೀ. 1 ನೀರಿನ ಕ್ಯಾನ್ -30 ರೂ., ಪ್ರತಿ ಹ್ಯಾಟ್ಸ್, ಸ್ಕಾರ್ಫ್, ಶಾಲ್ ಬಳಕೆಗೆ 25 ರೂ.ಗಳನ್ನು ನಿಗದಿಪಡಿಸಲಾಗಿದೆ.
ಪಕ್ಷದ ಚಿಹ್ನೆ ಹೊಂದಿರುವ ಪ್ರತೀ ಟೋಪಿಗೆ 50 ರೂ., ಸಾಮಾನ್ಯ ಕ್ಯಾಪ್‍ಗೆ 20 ರೂ., ಬ್ಯಾಂಡ್‍ಸೆಟ್ ಬಳಸಿದಲ್ಲಿ ದಿನವೊಂದಕ್ಕೆ 6000 ರೂ.ಗಳನ್ನು ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು.
ಪ್ರತೀ ಬ್ಯಾಡ್ಜ್ ಬಳಕೆಗೆ ಅಳತೆ, ವಿನ್ಯಾಸ, ಗುಣಮಟ್ಟಕ್ಕನುಗುಣವಾಗಿ 15 ರಿಂದ 50 ರೂ.ಗಳವರೆಗೆ, ಪ್ರತೀ ಮೀ. ಅಳತೆಯ ಬಟ್ಟೆಯ ಬಂಟಿಂಗ್ ಬಳಕೆಗೆ 40 ರೂ., ಪ್ರತೀ ಚದರ ಅಡಿ ನೆಲಹಾಸು ಬಳಕೆಗೆ ಅದರ ಬಣ್ಣ ಮತ್ತು ವಿನ್ಯಾಸಕ್ಕೆ ತಕ್ಕಂತೆ 6 ರಿಂದ 30 ರೂ., ಡಬಲ್ ಮತ್ತು ಟ್ರಿಪಲ್ ಲೈನ್ ಬ್ಯಾರಿಕೇಡ್ ಬಳಕೆಗೆ ಕ್ರಮವಾಗಿ 50 ಮತ್ತು 75 ರೂ., ಪ್ರತಿ ಚದರ ಮೀ. ಅಳತೆಯ ಮರದ ಬ್ಯಾರಿಕೇಡ್-120 ರೂ. ಹಾಗೂ ಮೆಸ್ ಬ್ಯಾರಿಕೇಡ್-260 ರೂ.ಗಳೆಂದು ಆಯೋಗ ದರ ನಿಗದಿಪಡಿಸಿದೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ತೆರೆಯುವ ಕಚೇರಿ ಬಾಡಿಗೆ 50 ರೂ.(ಪ್ರತೀ ಚದರ ಅಡಿಗಳಿಗೆ)ಗಳ ಮಾಸಿಕ ಬಾಡಿಗೆಯನ್ನಾಗಿ ವೆಚ್ಚಕ್ಕೆ ಸೇರಿಸಲಾಗುವುದಲ್ಲದೆ ಪ್ರತಿ ಹೂವಿನ ಹಾರ-80 ರೂ., ಶ್ರೀಗಂಧದ ಹಾರ-1300 ರೂ., ಗಣ್ಯವ್ಯಕ್ತಿಗಳಿಗೆ ಹಾರ-800 ರೂ., ಸೇಬು, ಕೊಬ್ಬರಿ ಹಾರ-80 ರೂ.(ಪ್ರತೀ ಕೆ.ಜಿ.ಗೆ), ಅಡಿಕೆ ಹಾರ-30 ರೂ.(ಪ್ರತಿ ಕೆ.ಜಿ), 1 ಸಾಮಾನ್ಯ ಹೂವಿನ ಬೊಕ್ಕೆ-100, 1 ವಿಐಪಿ ಹೂವಿನ ಬೊಕ್ಕೆ-350 ರೂ., ಮೈಸೂರು ಪೇಟ-200 ರೂ., ಸಣ್ಣ ಶಾಲು-150 ರೂ. ದೊಡ್ಡ ಶಾಲು-450 ರೂ., ಏರ್ ಕೂಲರ್-2000 ರೂ., ಟೇಬಲ್-40 ರೂ.ಗಳನ್ನು ನಿಗದಿಪಡಿಸಲಾಗಿದೆ.
ಡಿಜಿಟಲ್ ಡಿಸ್‍ಪ್ಲೇ ವಾಲ್(ಚ.ಅಡಿ)-60 ರೂ., ಎಲ್‍ಇಡಿ ಟಿವಿ(ಪ್ರತಿ ಟಿವಿ)-1000 ರೂ., ದೀಪ-300 ರೂ., ಚೇರ್ಸ್ ವಿತ್ ಕ್ಲಾತ್-10 ರೂ., ಟೇಬಲ್ ವಿತ್ ಕವರ್-60 ರೂ., ವಿಐಪಿ ಚೇರ್ಸ್-60 ರೂ., ಪಕ್ಷದ ಚಿಹ್ನೆಯುಳ್ಳ ಟೀ-ಷರ್ಟ್-150 ರೂ., ಮತದಾನ ಮತ್ತು ಮತ ಎಣಿಕಾ ಏಜೆಂಟ್ ಸಂಭಾವನೆ-700 ರೂ., ಹಾರ, ತುರಾಯಿ ಹಾಕಲು ಜೆಸಿಬಿ ಬಳಕೆ ಮಾಡಿದರೆ ಪ್ರತೀ ಗಂಟೆಗೆ 1000 ರೂ. ಹಾಗೂ ಕ್ರೇನ್ ಬಳಸಿದರೆ ಪ್ರತೀ ಗಂಟೆಗೆ 2500 ರೂ.ಗಳನ್ನು ವೆಚ್ಚಕ್ಕೆ ಸೇರಿಸಲಾಗುವುದು.
ಪ್ರಚಾರಕ್ಕಾಗಿ ಬಳಸುವ ಪ್ರತೀ ಕೆ.ಜಿ. ಬಿಡಿ ಹೂವಿಗೆ 50 ರೂ., ಎಲ್‍ಇಡಿ ಡಿಸ್‍ಪ್ಲೇ ವಾಹನ(ಸಣ್ಣದು)-5000 ರೂ., ಎಲ್‍ಇಡಿ ಡಿಸ್‍ಪ್ಲೇ ವಾಹನ(ದೊಡ್ಡದು)-8000 ರೂ., ವಾಲ್ ಮೌಂಟ್ ಫ್ಯಾನ್-400 ರೂ., ಹಣ್ಣಿನ ಬುಟ್ಟಿ(ಸಾಮಾನ್ಯ-400 ರೂ., ಸ್ಪೆಷಲ್-600 ರೂ.), ದಿನವೊಂದಕ್ಕೆ ದೀಪಾಲಂಕಾರಕ್ಕಾಗಿ ಬಳಸುವ 1 ಹಾಲೋಜನ್ ಬಲ್ಬ್-200 ರೂ., 1 ವೈಟ್ ಮರ್‍ಕ್ಯುರಿ ಲೈಟ್-300 ರೂ., 1 ಟ್ಯೂಬ್‍ಲೈಟ್-100 ರೂ., ಪ್ರತೀ 10 ಮೀ. ಡೆಕೋರೇಟಿವ್ ಬಲ್ಬ್ ಸೀರೀಸ್-250 ರೂ., 1 ಫೋಕಸ್ ವೈಟ್ ಲೈಟ್-600 ರೂ., ಪ್ರತೀ ಮೀ. ಸೀರಿಯಲ್ ಸೆಟ್ ಲೈಟ್ ಬಳಕೆಗೆ 35 ರೂ.ಗಳನ್ನು ನಿಗದಿಪಡಿಸಲಾಗಿದೆಯಲ್ಲದೆ ಡೀಜಟಲ್ ಜನರೇಟರ್ ಬಳಕೆಗಾಗಿ ಅಶ್ವಶಕ್ತಿಗನುಗುಣವಾಗಿ ಪ್ರತಿ 8 ಗಂಟೆಗೆ 2600 ರಿಂದ 4680 ರೂ.ಗಳವರೆಗೆ ದರ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ವಿಡಿಯೋಗ್ರಾಫರ್’ಗಳ ಅರ್ಹತೆಗಳೇನು? ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ
+ There are no comments
Add yours