Tumkurnews
ಗುಬ್ಬಿ; ವಿಧಾನಸಭೆ ಬಿಜೆಪಿ ಟಿಕೆಟ್ ವಂಚಿತರ ಬಂಡಾಯ ಸದ್ಯಕ್ಕೆ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದ ಹಾಗೂ 2018ರ ಪರಾಜಿತ ಅಭ್ಯರ್ಥಿ ಜಿ.ಎನ್ ಬೆಟ್ಟಸ್ವಾಮಿ ಮತ್ತು ಮತ್ತೋರ್ವ ಟಿಕೆಟ್ ವಂಚಿತ ಗ್ಯಾಸ್ ಬಾಬು ಬಂಡಾಯ ಎದ್ದಿದ್ದಾರೆ.
ಗುಬ್ಬಿ ವಿಧಾನಸಭೆ ಬಿಜೆಪಿ ಟಿಕೆಟ್ ಎಸ್.ಡಿ ದಿಲೀಪ್ ಕುಮಾರ್ ಗಿಟ್ಟಿಸಿಕೊಂಡು ಸ್ಪರ್ಧೆಗೆ ಅಣಿಯಾಗಿದ್ದಾರೆ. ಇದು ಜಿ.ಎನ್ ಬೆಟ್ಟಸ್ವಾಮಿ ಹಾಗೂ ಗ್ಯಾಸ್ ಬಾಬು ಅವರನ್ನು ಕೆರಳಿಸಿದ್ದು, ತಮ್ಮ ಮುಂದಿನ ನಡೆ ಏನು ಎಂಬುದನ್ನು ಇಂದು ನಿರ್ಧರಿಸಲಿದ್ದಾರೆ.
ಇಂದು ಸಭೆ; ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಇದೀಗ ಎಸ್.ಡಿ ದಿಲೀಪ್ ಕುಮಾರ್ ವಿರುದ್ಧ ಜಿ.ಎನ್ ಬೆಟ್ಟಸ್ವಾಮಿ ಹಾಗೂ ಗ್ಯಾಸ್ ಬಾಬು ಒಂದಾಗಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಎನ್ ಬೆಟ್ಟಸ್ವಾಮಿ ವಿರುದ್ಧವಾಗಿ ಎಸ್.ಡಿ ದಿಲೀಪ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದು ಬೆಟ್ಟಸ್ವಾಮಿ ಸೋಲಿಗೆ ಕಾರಣವಾಗಿತ್ತು. ಈ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ಬೆಟ್ಟಸ್ವಾಮಿ ಬೆಂಬಲಿಗರಿಗೆ ಈಗ ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು ಏ.14ರಂದು ಬೆಟ್ಟಸ್ವಾಮಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಸಭೆಯು ಗುಬ್ಬಿ ವಿಧಾನಸಭೆ ಚುನಾವಣೆಯ ದಿಕ್ಕನ್ನು ಬದಲಾಯಿಸುವ ಮಹತ್ವದ ಸಭೆಯಾಗಿದೆ. ಜಿ.ಎನ್ ಬೆಟ್ಟಸ್ವಾಮಿ ಅವರು ಗ್ಯಾಸ್ ಬಾಬು ಬೆಂಬಲ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಇಡೀ ಚುನಾವಣೆಯ ಫಲಿತಾಂಶ ದಿಕ್ಕೆಡಲಿದೆ. ಅಥವಾ ಈ ಅತೃಪ್ತರಿಬ್ಬರು ಯಾರಿಗಾದರೂ ಬೆಂಬಲ ಸೂಚಿಸಿದಲ್ಲಿ ಅದು ಕೂಡ ಫಲಿತಾಂಶದ ಮೇಲೆ ಪರಿಣಾಮ ಭೀರಲಿದೆ. ಹೀಗಾಗಿ ಇಂದಿನ ಬೆಟ್ಟಸ್ವಾಮಿ ಮತ್ತು ಗ್ಯಾಸ್ ಬಾಬು ನೇತೃತ್ವದ ಸಭೆಯು ಗುಬ್ಬಿ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ.
2018ರ ಫಲಿತಾಂಶ;
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್. ಆರ್ ಶ್ರೀನಿವಾಸ್ 55,572 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದರು.
ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ.ಎನ್ ಬೆಟ್ಟಸ್ವಾಮಿ 44,491 ಮತಗಳನ್ನು ಪಡೆದುಕೊಂಡು 9,081 ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಕಣದಲ್ಲಿದ್ದ ಎಸ್.ಡಿ ದಿಲೀಪ್ ಕುಮಾರ್ 30,528 ಮತಗಳನ್ನು ಪಡೆದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು.
+ There are no comments
Add yours