Tumkurnews
ತುಮಕೂರು; ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಬಗ್ಗೆ ದೂರು ಬಂದಲ್ಲಿ ತಕ್ಷಣ ಗ್ರಾಮಪಂಚಾಯಿತಿ ಅಧಿಕಾರಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತ್ಯಾಜ್ಯ ಅಥವಾ ರಾಸಾಯನಿಕಗಳು ಶುದ್ಧನೀರಿನ ಮೂಲಗಳಿಗೆ ಸೇರದಂತೆ ತಡೆಯುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಡೆಂಗ್ಯೂ ಪ್ರಕರಣಗಳು ಹೆಚ್ಚಳಗೊಳ್ಳದಂತೆ ಫಾಗಿಂಗ್, ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಸ್ವಚ್ಚತೆ ಕಾಪಾಡಿಕೊಳ್ಳುವಿಕೆ ಮುಂತಾದವುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಿಕೆ ಸೇರಿದಂತೆ ಅಗತ್ಯ ಮುನ್ನಚ್ಚಕೆ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವುದೇ ಸಕ್ರೀಯ ಕೋವಿಡ್ ಪ್ರಕರಣಗಳು ಇಲ್ಲದಿದ್ದರೂ ಸಹ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ನೀಡುವಿಕೆಗೆ ಆದ್ಯತೆ ನೀಡಬೇಕು. ಜಿಲ್ಲೆಗೆ 14 ಸಾವಿರ ಕೋವಿಶೀಲ್ಡ್ ಲಸಿಕೆ ಬರಲಿದ್ದು, ಈಗಾಗಲೇ 41 ಸಾವಿರದಷ್ಟು ದಾಸ್ತಾನು ಇರುವಂತಹ ಕೋವ್ಯಾಕ್ಸಿನ್ ಲಸಿಕೆಗಳನ್ನು ಅರ್ಹರಿಗೆ ನೀಡಬೇಕು ಮತ್ತು ತಾಲ್ಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಲಸಿಕೆಗಳ ದಾಸ್ತಾನು ಪಡೆಯಬೇಕು ಎಂದು ಸೂಚಿಸಿದರು.
ತಿಂಗಳ ಮೊದಲನೇ ಶನಿವಾರ ಸ್ವಚ್ಛತಾ ದಿವಸ ಎಂದು ಪರಿಗಣಿಸಲಾಗಿದ್ದು, ಸರ್ಕಾರಿ ಕಚೇರಿ ಮುಖ್ಯಸ್ಥರು ತಮ್ಮ ತಮ್ಮ ಕಚೇರಿ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು.
ಅಭಾ ಕಾರ್ಡ್ ಪ್ರಗತಿ ಅಶಾದಾಯಕವಾಗಿರುವುದಿಲ್ಲ ಮತ್ತು ಯುಡಿಐಡಿ ಕಾರ್ಡ್ ಜನರೇಟಿಂಗ್ ಕಾರ್ಯ ಬಾಕಿಯಿದೆ. ಎಲ್ಲರೂ ಈ ನಿಟ್ಟಿನಲ್ಲಿ ಲಕ್ಷ್ಯ ಕೊಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
+ There are no comments
Add yours