Tumkurnews
ತುಮಕೂರು; ಜಿಲ್ಲೆಯ ಉಪ ವಿಭಾಗ ಮಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಸ್ಥಳ ಹುಡುಕಾಟ ಆರಂಭಿಸಿದೆ.
ಈ ಕುರಿತು ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಧುಗಿರಿ, ತಿಪಟೂರು, ಶಿರಾ, ಗುಬ್ಬಿ ಸೇರಿದಂತೆ ಉಪವಿಭಾಗೀಯ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಪಟ್ಟಣಗಳಿಗೆ ಸಮೀಪವಿರುವಂತೆ 1-2 ಎಕರೆ ಜಮೀನನ್ನು ಹೆಲಿಪ್ಯಾಡ್ ನಿರ್ಮಾಣ ಸಂಬಂಧ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್’ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಉಳಿದಂತೆ ಸ್ಮಶಾನ ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಆರ್‍ಟಿಸಿ ಪ್ರಕಾರವೇ ಜಮೀನು ಲಭ್ಯವಿದ್ದಲ್ಲಿ ಸ್ಕೆಚ್ ಮಾಡಿ ಭೂಮಿ ಹಸ್ತಾಂತರಕ್ಕೆ ಕ್ರಮವಹಿಸಬೇಕು, ಆರ್‍ಟಿಸಿಗಿಂತ ವ್ಯತ್ಯಾಸವಿರುವ ಜಮೀನು ಇದ್ದಲ್ಲಿ ಸ್ಕೆಚ್‍ಗೆ ಮರು ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದಂತಹ ಅರ್ಜಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲಿ ನಿಗದಿತ ಸಮಯದೊಳಗೆ ಇತ್ಯರ್ಥಗೊಳಿಸಬೇಕು ಮತ್ತು ಇತರೆ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳಾದಲ್ಲಿ ಅ ಇಲಾಖೆಗೆ ವರ್ಗಾಯಿಸಿ ಸೂಕ್ತ ಹಿಂಬರಹ ನೀಡಬೇಕು ಎಂದು ತಹಶೀಲ್ದಾರ್’ಗಳಿಗೆ ತಿಳಿಸಿದರು.
ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಂಬಂಧಿಸಿದಂತೆ ನಿವೇಶನ ಹಸ್ತಾಂತರ ಪ್ರಕ್ರಿಯೆ ಮಾರ್ಚ್ 31 ರೊಳಗಾಗಿ ಗುರಿ ಮುಟ್ಟಬೇಕಿದ್ದು ಎಲ್ಲಾ ಇಓ, ಪಿಡಿಓ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಮಳೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ 810 ಮನೆಗಳ ಪೈಕಿ 279 ಮನೆಗಳು ತಳಪಾಯ ಹಂತದಲ್ಲಿದ್ದು, ಲಿಂಟಲ್ ಹಂತದವೆಗೂ ತರಬೇಕು ಮತ್ತು 44 ಮನೆಗಳು ಚಾವಣಿ ಹಂತದವರೆಗೂ ತರಬೇಕು ಮತ್ತು ಈಗಾಗಲೇ ಪರಿಹಾರವಾಗಿ 1 ಲಕ್ಷ ಪಡೆದಿರುವ ಸಂತ್ರಸ್ತರು ಇನ್ನೂ ಮನೆ ನಿರ್ಮಾಣ ಮಾಡದಿದ್ದಲ್ಲಿ ಅವರಿಗೆ ನೋಟೀಸ್ ನೀಡಿ ಮನೆ ಕಟ್ಟಲು ಪ್ರಾರಂಭಿಸುವಂತೆ ಸೂಚನೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ವಿದ್ಯಾಕುಮಾರಿ ಅವರು ಪಿಡಿಓಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಮತಗಟ್ಟೆಗಳನ್ನು ವೀಕ್ಷಿಸಲಿದ್ದು, ಈ ಸಂಬಂಧ ರೂಟ್ ಮ್ಯಾಪ್ ಸಿದ್ದಮಾಡಿಟ್ಟುಕೊಳ್ಳುವಂತೆ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಗಮನಿಸಿದಂತೆ ಕ್ರಿಟಿಕಲ್ ಮತ್ತು ವಲ್‍ನರಬಲ್ ಮತಗಟ್ಟೆಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಮತ್ತು ಜ.25ರ ರಾಷ್ರ್ಟೀಯ ಮತದಾರರ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಚರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಎಇಆರ್’ಓ, ಇಅರ್’ಓ ಗಳಿಗೆ ಸೂಚಿಸಿದರು.
+ There are no comments
Add yours