Tumkurnews
ತುಮಕೂರು; ಕರ್ನಾಟಕ ಸ್ಟೇಟ್ ವಕ್ಫ್ ಬೋರ್ಡ್ ಹಾಗೂ ಕುಣಿಗಲ್ ಸೆಂಟ್ರಲ್ ಮಜ್ಲಿಸೆಶೂರ ಕಮಿಟಿಯಲ್ಲಿ ಅವ್ಯವಹಾರ ನಡೆದಿದ್ದು, ರಾತ್ರೋ ರಾತ್ರಿ ಅಂಗಡಿ ಮಳಿಗೆಗಳನ್ನು ಅಧ್ಯಕ್ಷರು ಅನಧಿಕೃತವಾಗಿ ಮನಬಂದವರಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಕುಣಿಗಲ್‍ನ ನೊಂದ ಮುಸ್ಲಿಂ ಸಮುದಾಯದವರು ನಗರದ ವಕ್ಭ್ ಬೋರ್ಡ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಇಲ್ಲಿನ ವಕ್ಫ್ ಬೋರ್ಡ್ ಕಚೇರಿ ಮುಂದೆ ಜಮಾಯಿಸಿದ ಕುಣಿಗಲ್‍ನ ನೊಂದ ಮುಸ್ಲಿಂರು ಕುಣಿಗಲ್ ಮಜ್ಲಿಸೆಶೂರ ಕಮಿಟಿಯಲ್ಲಿ ತಮಗೆ ಅನ್ಯಾಯವಾಗಿದ್ದು, ಕೋಟಿಗಟ್ಟಲೆ ಲೂಟಿ ನಡೆದಿದೆ ಎಂದು ದೂರಿದರು.
ಕುಣಿಗಲ್ ಕಮಿಟಿಯಲ್ಲಿ ಅವ್ಯವಹಾರ ನಡೆಸಿರುವ ಅಧ್ಯಕ್ಷರು ಹಾಗೂ ಅಧಿಕಾರಿಗಳ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಉಬೇದುಲ್ಲಾ, ಕುಣಿಗಲ್ ಮಜ್ಲಿಸೆಶೂರ ಕಮಿಟಿಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಸೇರಿಕೊಂಡು ಅನಧಿಕೃತವಾಗಿ ರಾತ್ರೋರಾತ್ರಿ ಅಂಗಡಿ ಮಳಿಗೆಗಳಿವೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಕೋಟಿಗಟ್ಟಲೆ ಅವ್ಯವಹಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಬೋರ್ಡ್ ಕಾನೂನಿನ ಪ್ರಕಾರ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಅಂಗಡಿ ಮಳಿಗೆಗಳನ್ನು ಹರಾಜು ಮಾಡಬೇಕು. ಆದರೆ ಕಮಿಟಿಯ ಅಧ್ಯಕ್ಷರು ಮತ್ತು ಅಧಿಕಾರಿಗಳು ಈ ಕೆಲಸವನ್ನು ಮಾಡದೇ ರಾತ್ರೋರಾತ್ರಿ ಕದ್ದು ಮುಚ್ಚಿ ಹರಾಜು ಮಾಡಿ ಹಣ ವಸೂಲಿ ಮಾಡಿಕೊಂಡು ಅವರಿಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು ಬಂದು ದಾಖಲಾತಿ ಪರಿಶೀಲಿಸಿ, ಇದು ಅನಧಿಕೃತವಾಗಿ ಕೊಟ್ಟಿದ್ದಾರೆ ಎಂದು ಹೇಳಿ ಬಂದ್ ಮಾಡಿಸಿದರು. ಅಧಿಕಾರಿಗಳ ಮಾತಿಗೆ ಒಪ್ಪಿಗೆ ಸೂಚಿಸಿ ಬಂದ್ ಮಾಡಿದೆವು. ಆದರೆ ಇದುವರೆಗೂ ನಮಗೆ ಕಮಿಟಿ ಅಂಗಡಿಗಳನ್ನು ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ವಕ್ಫ್ ನ್ಯಾಯಮಂಡಳಿಗೆ ಒಳಪಟ್ಟಿರುವ ವಾಣಿಜ್ಯ ಮಳಿಗೆಯನ್ನು ಪುನಃ ತೆರೆಯಲು ಪ್ರಯತ್ನಿಸುತ್ತಿದ್ದು, ಯಾವುದೇ ನ್ಯಾಯಾಲಯದ ನಿರ್ದೇಶನವಿಲ್ಲದೆ ಈ ಅಕ್ರಮ ಕಾರ್ಯಕ್ಕೂ ಕುಣಿಗಲ್ ಕಮಿಟಿ ಅಧ್ಯಕ್ಷರನ್ನು ಬೆಂಬಲಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಂಗಳೂರಿನ ವಕ್ಫ್ ನ್ಯಾಯ ಮಂಡಳಿ ಹಲವು ಪ್ರಕರಣಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದಾಗ ವಕ್ಫ್ ಮಂಡಳಿಯ ಅಂಗಡಿಗಳನ್ನು ಸೀಲ್ ಮಾಡಿದ ನಂತರವೂ, ಕಾನೂನು ಬಾಹಿರ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲೂ ವಕ್ಫ್ ಬೋರ್ಡ್ ವಿಫಲವಾಗಿದೆ ಎಂದು ದೂರಿದ ಪ್ರತಿಭಟನಾಕಾರರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕುಣಿಗಲ್‍ನ ಅಜುಂ, ಅಬ್ದುಲ್ ಬಾಷಿಕ್, ಇದಾಯತ್ ಉಲ್ಲಾಖಾನ್, ರಜೀಯಾಬೇಗಂ, ಸಿದರುಲ್ಲಾಖಾನ್, ಭಾಷಾ ಖಾನ್, ಸಾಮೀರ್ ಪಾಷ ಮತ್ತಿತರರು ಪಾಲ್ಗೊಂಡಿದ್ದರು.
+ There are no comments
Add yours