ಶಿವಮೊಗ್ಗ; ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ರಾಜ್ಯಕ್ಕೆ ಬರುವ ವಲಸೆ ಹಕ್ಕಿಗಳ ಪೈಕಿ ಇಂಡಿಯನ್ ಪಿಟ್ಟ(ಹನಾಲು ಗುಬ್ಬಿ) ತೀರ್ಥಹಳ್ಳಿಯಲ್ಲಿ ಕಂಡು ಬಂದಿದ್ದು, ತೀರ್ಥಹಳ್ಳಿ ತಲುಪಿದ ಚಳಿಗಾಲದ ಮೊದಲ ಅತಿಥಿಯನ್ನು ಕಂಡು ಪಕ್ಷಿ ಪ್ರಿಯರು ಪುಳಕಿತಗೊಂಡಿದ್ದಾರೆ.
ಶಿವಮೊಗ್ಗದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಡಾ.ಪ್ರಭಾಕರ್ ಗುಜ್ಜಾರಪ್ಪ ಅವರ ಕ್ಯಾಮೆರಾ ಕಣ್ಣಲ್ಲಿ ಈ ಇಂಡಿಯನ್ ಪಿಟ್ಟ ಸೆರೆ ಸಿಕ್ಕಿದ್ದು, ಪಕ್ಷಿ ಪ್ರಿಯರ ಚಳಿಗಾಲದ ಸಂಭ್ರಮವನ್ನು ಹೆಚ್ಚಿಸಿದೆ.
“ದೂರದ ಹಿಮಾಲಯದ ತಪ್ಪಲಿನಿಂದ ಪ್ರತಿ ಬಾರಿ ನವೆಂಬರ್ ಮೊದಲ ವಾರದಲ್ಲಿ ಕಳೆದ ಐದು ವರ್ಷಗಳಿಂದಲೂ ತಪ್ಪದೆ ಅದೇ ಜಾಗಕ್ಕೆ ಬರುವ ಈ ನವರಂಗ ಪಕ್ಷಿಯ ಜ್ಞಾಪಕ ಶಕ್ತಿ ಅದ್ಭುತವಾದುದು. ಇನ್ನೂ ಸುಮಾರು ಪಕ್ಷಿಗಳು ಮುಂದಿನ 4 ತಿಂಗಳುಗಳ ಕಾಲ ತೀರ್ಥಹಳ್ಳಿಯ (ಪಶ್ಚಿಮ ಘಟ್ಟ) ಪ್ರದೇಶಕ್ಕೆ ಹಿಮಾಲಯ, ಸೈಬೀರಿಯಾ, ಚೀನಾ, ಯೂರೋಪ್’ನಿಂದ ಅತಿ ಚಳಿಯನ್ನು ತಪ್ಪಿಸಿಕೊಳ್ಳಲು ವಲಸೆ ಬರುತ್ತವೆ” ಎನ್ನುತ್ತಾರೆ ಡಾ.ಪ್ರಭಾಕರ್ ಗುಜ್ಜಾರಪ್ಪ.
ಸಿಕ್ಸ್ ಓ ಕ್ಲಾಕ್ ಬರ್ಡ್; ಇಂಡಿಯನ್ ಪಿಟ್ಟ ಪಕ್ಷಿಯನ್ನು ಸಿಕ್ಸ್ ಓ ಕ್ಲಾಕ್ ಬರ್ಡ್ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆ ವೇಳೆಗೆ ಮತ್ತು ಸಂಜೆ 6 ಗಂಟೆ ವೇಳೆಗೆ ಕುರುಚಲು ಕಾಡುಗಳಲ್ಲಿ ನೆಲದ ಮೇಲೆ ಹೆಚ್ಚಾಗಿ ಕಂಡು ಬರುತ್ತವೆ. ಭಾರತ, ಬಾಂಗ್ಲಾದೇಶ, ಸಿಲೋನ್’ಗಳಲ್ಲಿ ಇವುಗಳು ನೆಲೆಸಿವೆ. ಹಿಮಾಲಯದ ಕಾಡುಗಳಲ್ಲಿ ಮರಿ ಮಾಡುವ ಇವು ಚಳಿಗಾಲ ಆರಂಭವಾಗುತ್ತಿದ್ದಂತೆ ಅಲ್ಲಿನ ವಿಪರೀತ ಚಳಿಯಿಂದ ತಪ್ಪಿಸಿಕೊಳ್ಳಲು ದಕ್ಷಿಣ ಭಾರತದ ಬೇರೆ ಬೇರೆ ಕಡೆಗೆ ವಲಸೆ ಬರುತ್ತವೆ. ತುಮಕೂರಿನ ದೇವರಾಯನದುರ್ಗ ಅರಣ್ಯದಲ್ಲಿ ಕೂಡ ಇದನ್ನು ಕಾಣಬಹುದು.
ಆಹಾರವೇನು?; ಇಂಡಿಯನ್ ಪಿಟ್ಟ ನೆಲದ ಮೇಲೆ ಕುಪ್ಪಳಿಸಿ ಕುಪ್ಪಳಿಸಿ ತನ್ನ ಚಲನೆಯನ್ನು ಮಾಡುತ್ತವೆ ಮತ್ತು ತರಗೆಲೆಗಳನ್ನು ಕೆದಕಿ ಹುಳು ಹುಪ್ಪಟೆಗಳನ್ನು ತಿನ್ನುತ್ತವೆ. ಇದರ ಧ್ವನಿ ಬಹಳ ಸೊಗಸಾಗಿದೆ.
ಅಪಾಯಕಾರಿ ಪ್ರಯಾಣ; ದುರಂತವೆಂದರೆ ಇಂಡಿಯನ್ ಪಿಟ್ಟ ಹಿಮಾಲಯದಿಂದ ವಲಸೆ ಬರುವಾಗ ಬಹಳ ಅಪಾಯಕಾರಿ ಪ್ರಯಾಣವನ್ನು ಮಾಡುತ್ತವೆ. ಚೆನ್ನೈ ಮಾರ್ಗದಲ್ಲಿ ಬಹಳ ಎತ್ತರವಾದ ಕಟ್ಟಡಗಳಿಗೆ ಡಿಕ್ಕಿಯಾಗಿ ಇವು ಗಮ್ಯ ತಲುಪುವ ಮುನ್ನವೇ ಸಾವನ್ನಪ್ಪುತ್ತಿವೆ. ಇದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ಚಳಿಗಾಲದ ಅತಿಥಿಗಳನ್ನು ಬರಮಾಡಿಕೊಳ್ಳಲು ಪಕ್ಷಿ ಪ್ರಿಯರು ಕಾತರರಾಗಿದ್ದಾರೆ.
– ಅಶೋಕ್ ಆರ್.ಪಿ
+ There are no comments
Add yours