ಸೂಕ್ಷ್ಮ ಹನಿ ನೀರಾವರಿ ಘಟಕ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
Tumkurnews
ತುಮಕೂರು; ತೋಟಗಾರಿಕಾ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕ(ಅಡಿಕೆ ಬೆಳೆ ಹೊರತುಪಡಿಸಿ)ಗಳಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.
ಈ ಸೌಲಭ್ಯಕ್ಕಾಗಿ ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರೆಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುವುದು.
ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಇತರೆ ವರ್ಗದ ರೈತರಿಗೆ ಶೇ.75 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತ(ಆರ್‍ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ)ರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುವುದು. ನಂತರದ 3 ಹೆಕ್ಟೇರ್ ಪ್ರದೇಶದವರೆಗೆ ಎಲ್ಲಾ ವರ್ಗದ ರೈತರಿಗೆ ಶೇ.45ರಷ್ಟು ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ ನೀರಾವರಿ ಪದ್ಧತಿ ಹಾಳಾಗಿದ್ದಲ್ಲಿ, ಘಟಕ ಕಾರ್ಯ ನಿರ್ವಹಿಸದೇ ಇದ್ದಲ್ಲಿ 7 ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಂಡಲ್ಲಿ ಸಹಾಯಧನ ನೀಡಲಾಗುವುದು. ಅಲ್ಲದೆ, ವಿಕಲಚೇತನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ, ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಸಹಾಯಧನ ವಿತರಿಸಲಾಗುವುದು.
ಫಲಾನುಭವಿಗಳು ತೋಟಗಾರಿಕಾ ಇಲಾಖೆಯಿಂದ ಅನುಮೋದನೆಗೊಂಡಿರುವ ಕಂಪನಿಗಳಿಂದ ಮಾತ್ರ ಹನಿ ನೀರಾವರಿ ಘಟಕಗಳನ್ನು ಅಳವಡಿಕೊಳ್ಳಬೇಕು. ಈ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ಸಮರ್ಪಕ ಬಳಕೆಯೊಂದಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ರೈತರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ.
ಆಸಕ್ತ ರೈತ ಫಲಾನುಭವಿಗಳು ಆಯಾ ತಾಲ್ಲೂಕಿನ ತೋಟಗಾರಿಕಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ಮಟ್ಟದ ತೋಟಗಾರಿಕಾ ಅಧಿಕಾರಿಗಳನ್ನು ಅಥವಾ ದೂ.ವಾ.ಸಂ. ತುಮಕೂರು: 0816-2279705, ಗುಬ್ಬಿ: 08131-222659, ಕುಣಿಗಲ್: 08132-221981, ತಿಪಟೂರು: 08134-251424, ಚಿ.ನಾ.ಹಳ್ಳಿ: 08133-267457, ತುರುವೇಕೆರೆ: 08139-288350, ಶಿರಾ: 08135-295530, ಕೊರಟಗೆರೆ: 08138-232920, ಮಧುಗಿರಿ: 08137-282417 ಹಾಗೂ ಪಾವಗಡ: 08136-244064ನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಘು ತಿಳಿಸಿದ್ದಾರೆ.
+ There are no comments
Add yours