ಮೂರು ವರ್ಷಗಳ ನಂತರ ಬೆಳಕಿಗೆ ಬಂದ ಕೊಲೆ ಪ್ರಕರಣ!; ಐವರು ಬಂಧನ
Tumkurnews
ತುಮಕೂರು; ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಮೂರು ವರ್ಷಗಳ ಬಳಿಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಐವರ ಬಂಧನವಾಗಿದೆ.
ಪಾವಗಡ ತಾಲ್ಲೂಕು ಪಿ.ಎನ್ ಪೇಟೆ ಗ್ರಾಮದ ಸುಬ್ಬರಾಯಪ್ಪ ಎಂಬುವರ ಪುತ್ರ ನಾಗೇಂದ್ರ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರೊಪ್ಪ ಗ್ರಾಮದ ಅನಿಲ್ ಕುಮಾರ್, ಸತೀಶ, ಕೆಂಗುರಿ, ಶಂಕರ ಹಾಗೂ ಸೂರಿ ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮ ಪಂಚಾಯತ್ ಕಚೇರಿ ಸ್ಫೋಟಿಸಲು ಯತ್ನ; ಬೆಚ್ಚಿ ಬಿದ್ದ ತುಮಕೂರು ಜಿಲ್ಲೆ; ವಿಡಿಯೋ
ಪ್ರಕರಣದ ವಿವರ; ಪಿ.ಎನ್ ಪೇಟೆ ಗ್ರಾಮದ ದಲಿತ( ಆದಿ ಕರ್ನಾಟಕ) ಸಮುದಾಯಕ್ಕೆ ಸೇರಿದ ನಾಗೇಂದ್ರನಿಗೆ ಈಗಾಗಲೇ ವಿವಾಹವಾಗಿದ್ದು, ಈತ ರೊಪ್ಪ ಗ್ರಾಮದ ಗೊಲ್ಲ ಸಮುದಾಯದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು.
ಈ ವಿಚಾರ ತಿಳಿದ ಯುವತಿಯ ಅಣ್ಣ ಅನಿಲ್ ಕುಮಾರನು ತನ್ನ ತಂಗಿಯಿಂದ ದೂರ ಇರುವಂತೆ ನಾಗೇಂದ್ರನಿಗೆ ತಿಳಿ ಹೇಳಿದ್ದನು. ಆದರೆ ಈ ಮಾತು ಕೇಳದ ನಾಗೇಂದ್ರ ತಾನು ಪ್ರೀತಿಸುತ್ತಿದ್ದ ಅನಿಲ್ ಕುಮಾರನ ತಂಗಿಯೊಂದಿಗೆ ಮದುವೆಯಾಗುವ ಉದ್ದೇಶದಿಂದ ಪರಾರಿಯಾಗಿದ್ದನು. ಈ ಬಗ್ಗೆ 2019ರ ಡಿಸೆಂಬರ್ ನಲ್ಲಿ ಅನಿಲ್ ಕುಮಾರ್ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಬಳಿಕ ಪರಾರಿಯಾಗಿದ್ದ ಜೋಡಿಯನ್ನು ಪತ್ತೆ ಮಾಡಿ ಕರೆತಂದಿದ್ದ ಪೊಲೀಸರು ಇಬ್ಬರಿಗೂ ತಿಳಿ ಹೇಳಿ ಅವರವರ ಮನೆಗೆ ಕಳುಹಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ನಾಗೇಂದ್ರನ ಗರ್ಭಿಣಿ ಪತ್ನಿ ಶೋಭಾ ಬಾಣಂತನಕ್ಕೆಂದು ಬಿ.ಕೆ ಹಳ್ಳಿಯಲ್ಲಿನ ತವರಿಗೆ ಹೋಗಿದ್ದಳು, ನಾಗೇಂದ್ರ ಕೂಡ ಪತ್ನಿಯೊಂದಿಗೆ ತೆರಳಿದ್ದನು. ಆದರೆ 2019ರ ಡಿಸೆಂಬರ್ 25ರಂದು ತನ್ನ ಮೊದಲ ಮಗಳ ಹುಟ್ಟು ಹಬ್ಬಕ್ಕೆ ಬಟ್ಟೆ ತರಲು ಮನೆಯಿಂದ ಹೊರ ಬಂದಿದ್ದ ನಾಗೇಂದ್ರ ನಾಪತ್ತೆಯಾಗಿದ್ದನು.
ಮುಖ್ಯಮಂತ್ರಿ ರೈತ ವಿದ್ಯಾನಿಧಿಗೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಪತ್ನಿಯಿಂದ ದೂರು; ಪತಿ ನಾಪತ್ತೆಯಾಗಿರುವ ಬಗ್ಗೆ 2020ರ ಜನವರಿ 4ರಂದು ನಾಗೇಂದ್ರನ ಪತ್ನಿ ಶೋಭಾ ತಿರುಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು, ಪ್ರಕರಣ ಪಾವಗಡ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿತ್ತಾದರೂ ನಾಗೇಂದ್ರನ ಸುಳಿವನ್ನು ಪೊಲೀಸರು ಪತ್ತೆ ಮಾಡಿರಲಿಲ್ಲ.
ಬಾಯಿ ಬಿಟ್ಟ ಸ್ನೇಹಿತರು; ನಾಪತ್ತೆಯಾದ ನಾಗೇಂದ್ರನನ್ನು ಆತ ಪ್ರೀತಿಸುತ್ತಿದ್ದ ಯುವತಿಯ ಮನೆಯವರು ಕೊಲೆ ಮಾಡಿರುವ ಶಂಕೆ ನಾಗೇಂದ್ರನ ಮನೆಯವರಿಗೆ ಇತ್ತಾದರೂ ಯಾವುದೇ ಸಾಕ್ಷಿ ಇಲ್ಲದ ಕಾರಣ ಪೊಲೀಸ್ ದೂರು ನೀಡಿರಲಿಲ್ಲ. ಆದರೆ ಇತ್ತೀಚಿಗೆ ನಾಗೇಂದ್ರನ ಅಣ್ಣ ಶಿವಕುಮಾರನು ರೊಪ್ಪ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಹರಟುತ್ತಿದ್ದಾಗ ತನ್ನ ತಮ್ಮ ನಾಪತ್ತೆಯಾಗಿ ವರ್ಷಗಳು ಕಳೆದರೂ ಪತ್ತೆಯಾಗದಿರುವ ಬಗ್ಗೆ ನೋವು ತೋಡಿಕೊಂಡಿದ್ದಾನೆ. ಆಗ ಸ್ನೇಹಿತರು ನಾಗೇಂದ್ರನನ್ನು ಅನಿಲ್ ಕುಮಾರ್ ಮತ್ತಾತನ ಸಹಚರರು ಸೇರಿ 2019ರ ಡಿಸೆಂಬರ್ 25ರಂದು ರಾತ್ರಿ 9 ಗಂಟೆ ಸಮಯದಲ್ಲಿ ಕೊಲೆ ಮಾಡಿ ಮುಚ್ಚಿ ಹಾಕಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಈ ವಿಚಾರವನ್ನು ಶಿವಕುಮಾರ್ ಕೂಡಲೇ ಮನೆಯಲ್ಲಿ ತಿಳಿಸಿದ್ದು, ನಾಗೇಂದ್ರನ ತಂದೆ ಸುಬ್ಬರಾಯಪ್ಪ ಅವರು 2022ರ ಸೆಪ್ಟೆಂಬರ್ 22ರಂದು ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
(ಚಿತ್ರ; ಕೊಲೆಯಾದ ನಾಗೇಂದ್ರ)
ವರದಿ; ಇಮ್ರಾನ್ ಉಲ್ಲಾ, ಪಾವಗಡ
+ There are no comments
Add yours