ಶಿಕ್ಷಕರ ನೇಮಕಾತಿ ಹಗರಣ; ತುಮಕೂರು ಜಿಲ್ಲೆಯ 10 ಶಿಕ್ಷಕರ ಬಂಧನ

1 min read

 

Tumkurnews
ತುಮಕೂರು; ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 10 ಸೇರಿದಂತೆ 11 ಮಂದಿ ಶಿಕ್ಷಕರುಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಪ್ರಸಕ್ತ ಸಾಲಿನ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ‌ ಕೂಡ ನಡುಕ ಹುಟ್ಟಿಸಿದೆ.
ಬಂಧಿತ ಎಲ್ಲಾ ಶಿಕ್ಷಕರುಗಳನ್ನು ಅವರು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗಲೇ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷರ ಬಂಧನದ ಕುರಿತು ಈವರೆಗೆ ಡಿಡಿಪಿಐ ಕಚೇರಿಗೆ ಸಿಐಡಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.
2012-13 ಹಾಗೂ 2014-15 ನೇ ಸಾಲಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಕುರಿತು ಸಿಐಡಿ ತನಿಖೆ ನಡೆಯುತ್ತಿದ್ದು, ಶಿಕ್ಷಣ ಸಚಿವ‌ ಬಿ.ಸಿ ನಾಗೇಶ್ ತವರು ಜಿಲ್ಲೆಯಲ್ಲೇ 10 ಶಿಕ್ಷಕರು ಬಂಧನಕ್ಕೊಳಗಾಗಿರುವುದು‌ ಶಿಕ್ಷಕರ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಯಾರ್ಯಾರ ಬಂಧನ?; ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶಮೀನಾಜ್ ಬಾನು(34), ಕಮಲಾಪುರ ಶಾಲೆಯ ಶಿಕ್ಷಕ ನವೀನ್ ಹನುಮನಗೌಡ(35), ಕುಣಿಗಲ್ ತಾಲ್ಲೂಕು ಕೊಡವತ್ತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ರಾಜೇಶ್ವರಿ ಜಗ್ಗಿ(35),
ನಾಗಸಂದ್ರ ಪ್ರೌಢ ಶಾಲೆಯ ಶಿಕ್ಷಕಿ ನಾಗರತ್ನ(42), ಅಮೃತೂರು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಬಿ.ಎನ್ ನವೀನ್ ಕುಮಾರ್(38), ಹೊಳಗೇರಿಪುರ ಶಾಲೆ ಶಿಕ್ಷಕ ಆರ್.ಹರೀಶ್ (37), ತಿಪಟೂರು ತಾಲೂಕಿನ ಅಲ್ಬೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕಮಲಾ(35),
ತುರುವೇಕೆರೆ ತಾಲೂಕು ಹುಲಿಕಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಎಚ್.ದಿನೇಶ(38), ಹುಲಿಕೆರೆ ಶಾಲೆಯ ಶಿಕ್ಷಕ ಬಿ.ಎಂ ಪ್ರಸನ್ನ(42), ಗುಬ್ಬಿ ತಾಲೂಕು ಕೆ.ಮತ್ತಿಘಟ್ಟ ಶಾಲೆಯ ಶಿಕ್ಷಕ ಎಸ್.ದೇವೇಂದ್ರ ನಾಯ್ಕ ಹಾಗೂ ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದ ಮಹೇಶ ಶ್ರೀಮಂತ ಸೊಸಲಾಡಿ(38) ಬಂಧಿತರು.
2014-15 ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ದೂರು ಸಲ್ಲಿಸಿತ್ತು, ಇದಲ್ಲದೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ(ಪ್ರೌಢ) ಕೂಡ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಕೆಲ‌ ದಿನಗಳ‌ ಹಿಂದಷ್ಟೇ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಆದೇಶಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ‌ ನಡೆಸುತ್ತಿರುವ ಸಿಐಡಿ ಪೊಲೀಸರು ಜಿಲ್ಲೆಯಲ್ಲಿ 10 ಶಿಕ್ಷಕರನ್ನು ವಶಕ್ಕೆ ಪಡೆದಿರುವುದು‌ ಅಕ್ರಮದಲ್ಲಿ ಭಾಗಿಯಾಗಿರುವ ಇನ್ನಷ್ಟು ಶಿಕ್ಷಕರಲ್ಲಿ ಆತಂಕ‌ ಸೃಷ್ಟಿಸಿದೆ. ಇದಲ್ಲದೇ ಇತ್ತೀಚೆಗಷ್ಟೇ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಎದೆಯಲ್ಲಿ ತಮ್ಮ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದರೇ ಗತಿ ಏನು ಎಂಬ ಆತಂಕ ಸೃಷ್ಟಿಯಾಗಿದೆ.

ಕುಡಿದು ಟೈಟಾಗಿ ಶಾಲೆಗೆ ಬರುವ ಶಿಕ್ಷಕಿ!; ವಿಡಿಯೋ

About The Author

You May Also Like

More From Author

+ There are no comments

Add yours