Tumkurnews
ತುಮಕೂರು; ಸರ್ಕಾರಿ ಶಾಲಾ ಶಿಕ್ಷಕಿಯೋರ್ವಳು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ತುಮಕೂರು ತಾಲೂಕು ಚಿಕ್ಕಸಾರಂಗಿ ಪ್ರಾಥಮಿಕ ಶಾಲೆ ಶಿಕ್ಷಕಿ ಗಂಗಲಕ್ಷ್ಮಮ್ಮ ಎಂಬುವರು ಮದ್ಯಪಾನ ಮಾಡಿ ಶಾಲೆಗೆ ಬಂದು ಗ್ರಾಮಸ್ಥರು ಹಾಗೂ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈಕೆ ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಮದ್ಯಪಾನ ವ್ಯಸನಕ್ಕೆ ದಾಸರಾಗಿದ್ದಾರೆ ಎನ್ನಲಾಗಿದ್ದು, ಪ್ರತಿನಿತ್ಯ ಮದ್ಯಪಾನ ಮಾಡಿಕೊಂಡು ಶಾಲೆಗೆ ಬರುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮದ್ಯಪಾನ ಮಾಡಿ ಪಾಠ ಮಾಡುವುದು, ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು, ಸಹೋದ್ಯೋಗಿಗಳ ಜೊತೆ ಜಗಳ ಮಾಡುವುದು ಮಾಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿತ್ತು. ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮರಿಗೆ ತಪ್ಪು ತಿದ್ದಿಕೊಳ್ಳುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಶಿಕ್ಷಕಿ ಬದಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಶಿಕ್ಷಕಿಯ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸಿಕ್ಕಿಬಿದ್ದ ಶಿಕ್ಷಕಿ; ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಶಿಕ್ಷಕಿಯ ಟೇಬಲ್ ನ ಡ್ರಾವರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದು, ಬಿಇಒ ಡ್ರಾವರ್ ಓಪನ್ ಮಾಡಲು ಹೋದಾಗ ಶಿಕ್ಷಕಿ ಪ್ರತಿರೋಧ ಒಡ್ಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೇಬಲನ್ನು ಹೊರಕ್ಕೆ ತಂದು ಡ್ರಾವರ್ ಬೀಗ ಮುರಿದಿದ್ದಾರೆ. ಆಗ ಡ್ರಾವರಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್ ಗಳು ಪತ್ತೆಯಾಗಿವೆ.
ಆತ್ಮಹತ್ಯೆ ನಾಟಕ; ಮದ್ಯದ ಬಾಟಲ್ ಪತ್ತೆಯಾಗುತಿದ್ದಂತೆ ಕೊಠಡಿ ಬೀಗಹಾಕೊಂಡ ಶಿಕ್ಷಕಿ ಗಂಗಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಆಡಿದ್ದಾಳೆ. ಬಳಿಕ ಪೊಲೀಸರು ಬಂದು ಶಿಕ್ಷಕಿಯನ್ನು ಸಮಾಧಾನಿಸಿ, ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿಕ್ಷಕಿ ಅಮಾನತು; ಸದರಿ ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಅಮಾನತು ಮಾಡಲಾಗಿದೆ ಎಂದು ಬಿ.ಇ.ಒ ಹನುಮಾನಾಯಕ್ ತಿಳಿಸಿದ್ದಾರೆ.
+ There are no comments
Add yours