Tumkurnews
ತುಮಕೂರು; ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆಗಳು ತುಂಬಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡು ಸಂಬಂಧಿಸಿದ ಇಲಾಖೆಗಳು, ತಮ್ಮ ವ್ಯಾಪ್ತಿಯ ಕೆರೆಗಳ ಸರಹದ್ದನ್ನು ಗುರುತಿಸಿ, ಒತ್ತುವರಿ ಇದ್ದಲ್ಲಿ ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಮತ್ತು ಈ ಸಂಬಂಧ ಜಿಲ್ಲಾ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲಾಧಿಕಾರಿಗಳ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ನಡೆದ ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಕಾರ್ಯಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಜಲಮೂಲಗಳ ನೀರಿನ ಗುಣಮಟ್ಟ ವಿಶ್ಲೇಷಣೆಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಕೆರೆಗಳ ಒತ್ತುವರಿ ಹಾಗೂ ಮಾಲಿನ್ಯ ತಡೆಗಟ್ಟಿ ಕೆರೆಗಳನ್ನು ಪುನಶ್ಚೇತನಗೊಳಿಸಿರುವ ಸಂಬಂಧ ಕೆರೆಗಳ ಉಸ್ತುವಾರಿ ಇಲಾಖೆಗಳು ವರದಿ ಸಲ್ಲಿಸಬೇಕು, ಕೆರೆ ಒತ್ತುವರಿ ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಕೆರೆಗಳ ಸರ್ವೆ ಕಾರ್ಯವು ಈಗಾಗಲೇ ಪ್ರಗತಿಯಲ್ಲಿದ್ದು, ಆಯಾ ಇಲಾಖೆಗಳು ಸಹ ಕೆರೆಗಳ ಗಡಿ ಗುರುತಿಸಿ ಕೆರೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲೆಯ ಒಟ್ಟು 2061 ಕೆರೆಗಳ ಪೈಕಿ ಈವರೆಗೆ 768 ಕೆರೆಗಳ ಸರ್ವೇಕಾರ್ಯ ನಡೆಸಲಾಗಿದ್ದು, 1293 ಕೆರೆಗಳ ಅಳತೆ ಕಾರ್ಯ ಬಾಕಿ ಇರುತ್ತದೆ. ಈಗಾಗಲೇ ಸರ್ವೇಕಾರ್ಯ ನಡೆಸಿ ಒತ್ತುವರಿ ಎಂದು ಗುರುತಿಸಲಾಗಿರುವ ಕೆರೆಗಳ ನಕ್ಷೆಗಳನ್ನು ಸಿದ್ಧಪಡಿಸಿ ಕಂದಾಯ ಇಲಾಖೆ, ಉಸ್ತುವಾರಿ ಇಲಾಖೆ ಮತ್ತು ಅವಶ್ಯಕತೆ ಇದ್ದಲ್ಲಿ ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಒತ್ತುವರಿ ತೆರವುಗೊಳಿಸಿ ಉಸ್ತುವಾರಿ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ನಗರದ ಮರಳೂರು ಅಮಾನಿಕೆರೆಗೆ ತ್ಯಾಜ್ಯ ನೀರನ್ನು ಹರಿಬಿಡುತ್ತಿರುವ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತರು, ತ್ಯಾಜ್ಯ ನೀರನ್ನು ತಡೆಯಲು ಪೈಪ್‍ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಛೇಂಬರ್ ನಿರ್ಮಾಣ ಕಾಮಗಾರಿಯು ಬಾಕಿ ಇರುತ್ತದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ತ್ಯಾಜ್ಯ ನೀರು ಕೆರೆಗೆ ಹರಿಯುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.
ತುಮಕೂರು ನಗರದ ಅಮಾನಿಕೆರೆ ಬಫರ್ ಜೋನ್‍ನಲ್ಲಿ ಅನಧೀಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ತೆರವುಗೊಳಿಸುವ ಸಂಬಂಧ ಮಾತನಾಡಿದ ಪಾಲಿಕೆ ಆಯುಕ್ತರು, ಬಫರ್ ಜೋನ್‍ನಲ್ಲಿ ನಿರ್ಮಾಣ ಮಾಡಿರುವ ಎರಡು ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಪೂರಕ ಕ್ರಮ ಕೈಗೊಳ್ಳಲಾಗಿದೆ. ಆದರೆ ಎರಡೂ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿ ಬಾಕಿ ಇರುತ್ತದೆ ಎಂದು ವಿವರಿಸಿದರು.
ಮುಂದುವರೆದ ಮಳೆ; ಪ್ರಯಾಣಿಕರ ಸಹಿತ ಕೆರೆಯಲ್ಲಿ ಸಿಕ್ಕಿಹಾಕಿಕೊಂಡ ಬಸ್
ತುಮಕೂರು ನಗರದ ಡಿಸಿ ಬಂಗಲೆ ಮತ್ತು ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಹೊಂದಿಕೊಂಡಿರುವ ಸರ್ವೇ ನಂ. 8ರಲ್ಲಿನ ಸರ್ಕಾರಿ ಕೆರೆಯು ನಿರ್ವಹಣೆ ಕೊರತೆಯಿಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವುದರಿಂದ ಈ ಕೆರೆಯನ್ನು ಪುನಶ್ಚೇತನಗೊಳಿಸಲು ಸೂಚಿಸಲಾಗಿದ್ದು, ಪುನಶ್ಚೇತನ ಕಾಮಗಾರಿ ಕೈಗೊಳ್ಳುವ ಮೊದಲು ಕೆರೆಯ ಗಡಿಗಳನ್ನು ಗುರುತಿಸಿ ಕೆರೆಯ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಭೂ ದಾಖಲೆಗಳ ಉಪನಿರ್ದೇಶಕರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಾಧಿಕಾರದ ಸದಸ್ಯೆ ನೂರುನ್ನೀಸ, ಜಿಲ್ಲಾ ಪಂಚಾಯತ್ ಸಿಇಒ ಡಾ. ಕೆ.ವಿದ್ಯಾಕುಮಾರಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ 50 ಕೋಟಿ ರೂ. ನಷ್ಟ; ಸಚಿವ ಗೋವಿಂದ ಕಾರಜೋಳ
+ There are no comments
Add yours