ಜಿಲ್ಲೆಯಾಧ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ; ಎಚ್ಚರ ವಹಿಸುವಂತೆ ಡಿಸಿ ಸೂಚನೆ
Tumkurnews
ತುಮಕೂರು; ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಸೂಚನೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್’ಗಳು, ಮುಖ್ಯಾಧಿಕಾರಿಗಳು, ಆಯುಕ್ತರು, ಪಿಡಿಓಗಳು ಮತ್ತು ಸಿಬ್ಬಂದಿ ತಮ್ಮ ಕೇಂದ್ರ ಸ್ಥಾನದಲ್ಲಿಯೇ ಲಭ್ಯವಿದ್ದು, 24/7 ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ನೀರು ಶೇಖರಣಾ ಸಾಮರ್ಥ್ಯ ಇರುವುದಿಲ್ಲ ಮತ್ತು ತೇವಾಂಶ ಹೆಚ್ಚು ಇರುವ ಕಾರಣ ಮಳೆ ನೀರು ಇಂಗದೆ ಭೂಮಿಯ ಹೊರಭಾಗದಲ್ಲಿ ಹರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾದಲ್ಲಿ ಸಮಸ್ಯೆ ಹೆಚ್ಚಳವಾಗಲಿದೆ. ಈ ಕಾರಣಗಳಿಂದಾಗಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್
ಮಳೆ ಅವಘಡಗಳಿಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಸುತ್ತಿ ಮಳೆಹಾನಿ ಸಂಬಂಧಿತ ಪ್ರಕರಣಗಳನ್ನು ಅವಲೋಕಿಸಬೇಕು ಮತ್ತು ತಹಶೀಲ್ದಾರ್’ಗಳು ತಮ್ಮ ಅಧೀನ ಸಿಬ್ಬಂದಿಗಳಿಗೆ ಜವಾಬ್ದಾರಿ ವಹಿಸಿ, ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ತಿಳಿಸಿದ ಅವರು, ಪಿಆರ್’ಇಡಿ, ಸಣ್ಣ ನೀರಾವರಿ, ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರುಗಳು ತಮ್ಮ ವ್ಯಾಪ್ತಿಯ ಕೆರೆ-ಕಟ್ಟೆಗಳು ಮತ್ತು ಇತರೆ ಜಲಕಾಯ ಪ್ರದೇಶಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಮಳೆಹಾನಿಗೆ ಸಂಬಂಧಿಸಿದಂತೆ ಆಯಾ ದಿನದ ಅಂತ್ಯಕ್ಕೆ ಪ್ರತಿ ಗ್ರಾಮವಾರು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಬೇಕು, ಎ, ಬಿ1, ಬಿ2, ಸಿ ಕೆಟಗರಿವಾರು ಮನೆಗಳ ಜಿಪಿಎಸ್ ಆಗಬೇಕು ಮತ್ತು ಕೆಟಗರಿವಾರು ಹಾನಿಯ ಬಗ್ಗೆ ಪಿಡಿಓ ಮತ್ತು ವಿಎಗಳು ಮಹಜರ್ ಮಾಡಬೇಕು ಮತ್ತು ಪರಿಹಾರ ಪಾವತಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮುಂದುವರೆದ ಮಳೆ; ಪ್ರಯಾಣಿಕರ ಸಹಿತ ಕೆರೆಯಲ್ಲಿ ಸಿಕ್ಕಿಹಾಕಿಕೊಂಡ ಬಸ್
ಮಳೆಹಾನಿಯಿಂದಾಗಿ ಸಂಪರ್ಕ ಕಡಿದುಕೊಂಡಿರುವಂತಹ ರಸ್ತೆ ಅಥವಾ ಸೇತುವೆಗಳ ಮಾಹಿತಿಯನ್ನು ಜಿ.ಪಂ, ಪಿಡಬ್ಲ್ಯೂಡಿ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಎಂದು ವಿಂಗಡಿಸಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಅಂತೆಯೇ ಮಾನವ ಜೀವಹಾನಿ ಮತ್ತು ಜಾನುವಾರು ಜೀವಹಾನಿ ಬಗ್ಗೆಯೂ ಸಹ ಮಾಹಿತಿಯನ್ನು ಕಳುಹಿಸಬೇಕು ಎಂದರು.
ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಡೋಸ್ ಮತ್ತು ಎರಡನೇ ಲಸಿಕಾಕರಣವನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳಲ್ಲಿ ನೀರು ನುಗ್ಗಿರುವ ಪ್ರಕರಣಗಳು ಇದ್ದಲ್ಲಿ ಪುರಸಭೆ, ನಗರಸಭೆ, ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣವನ್ನು ಇತ್ಯರ್ಥ ಪಡಿಸಿಬೇಕು. ಎಲ್ಲಿಯೂ ನೀರು ನಿಂತ ಪ್ರಕರಣಗಳು ವರದಿಯಾಗಬಾರದು ಎಂದು ಸೂಚಿಸಿದರು.
ಅಂತೆಯೇ ಶಾಲೆಗಳಲ್ಲಿಯೂ ಸಹ ನೀರು ನಿಂತ ಪ್ರಕರಣಗಳು ವರದಿಯಾಗಬಾರದು ಮತ್ತು ಈ ನಿಟ್ಟಿನಲ್ಲಿ ಡಿಡಿಪಿಐ, ಬಿಇಓ, ಶಾಲಾ ಮುಖ್ಯಸ್ಥರು ಕಟ್ಟೆಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ನಂತರ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಬೇಕು, ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು, ಎಲ್ಲಿಯೂ ಸಹ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
+ There are no comments
Add yours