ತುಮಕೂರಿಗೆ ಬಂದಿದ್ದ 125 ಕೋಟಿ ರೂ. ಅನುದಾನ ವಾಪಾಸ್; ಶಾಸಕರ ವೈಫಲ್ಯ ಎಂದ ರಫೀಕ್ ಅಹ್ಮದ್

1 min read

ತುಮಕೂರು.ಜೂ.20: tumkurnews.in

ತುಮಕೂರು ನಗರದ ಅಭಿವೃದ್ದಿಗೆಂದು 2018-19ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಬಿಡುಗಡೆಯಾಗಿದ್ದ 125 ಕೋಟಿ ಅನುದಾನ ಸರಕಾರಕ್ಕೆ ವಾಪಸ್ಸಾಗುವ ಸಾಧ್ಯತೆ ಇದ್ದು, ನಗರಪಾಲಿಕೆ ಆಡಳಿತ ಹಾಗೂ ಶಾಸಕರು ಈ ಅನುದಾನದ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಡಾ.ರಫೀಕ್‌ ಅಹ್ಮದ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,‌ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರದ ವೇಳೆ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್‌ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತುಮಕೂರು ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ ಮೇರೆಗೆ 125 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದರು.
ಈ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕೋವಿಡ್‌-19 ಹೆಸರಿನಲ್ಲಿ ಸರಕಾರ ಅನುದಾನವನ್ನು ತಡೆ ಹಿಡಿದಿದ್ದು, ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ಹಣಕಾಸು ಇಲಾಖೆ ಸುತ್ತೋಲೆ ಹೊರಡಿಸಿದೆ. ಪರಿಣಾಮ ಸದರಿ ಅನುದಾನ ಸರಕಾರಕ್ಕೆ ವಾಪಸ್ಸಾಗುವ ಹಂತದಲ್ಲಿದೆ. ಕೋವಿಡ್‌-19ಗೂ 2018-19ರ ಬಜೆಟ್‌ನಲ್ಲಿ ನಮೂದಾದ ಅನುದಾನಕ್ಕೂ ಸಂಬಂಧವಿಲ್ಲ. ಅಲ್ಲದೆ ಈ ಅನುದಾನದಲ್ಲಿ ತೆಗೆದುಕೊಳ್ಳಲಾದ ಕಾಮಗಾರಿಗಳು ನಗರದ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗಿತ್ತು. ಏಕಾಏಕಿ ಅನುದಾನ ವಾಪಸ್ಸಾದರೆ ಕಾಮಗಾರಿಗಳ ಗತಿ ಏನು ಎಂದು ಮಾಜಿ ಶಾಸಕರು ಪ್ರಶ್ನಿಸಿದ್ದಾರೆ.
ನಾನು ಶಾಸಕನಾಗಿದ್ದ 5 ವರ್ಷಗಳಲ್ಲಿ ಸರಕಾರದಿಂದ, ನಗರಾಭಿವೃದ್ದಿ ಇಲಾಖೆಯಿಂದ ನಗರದ ಅಭಿವೃದ್ಧಿಗೆ 350 ಕೋಟಿ ರೂ.ಗಳ ಬೃಹತ್‌ ಅನುದಾನ ತಂದು ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸಕೌರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಈ ಹಿಂದಿನ ಸರಕಾರದಲ್ಲಿ ಮಂಜೂರಾಗಿ ತಾಂತ್ರಿಕ ಕಾರಣಗಳಿಂದ ಅನುದಾನ ಬಿಡುಗಡೆಯಾಗದೆ ಇದ್ದ ವಿವಿಧ ಯೋಜನೆಗಳ ಬೆನ್ನು ಹತ್ತಿ 42 ಕೋಟಿ ರೂ. ವಿಶೇಷ ಅನುದಾನ, ನಗರೋ‍ತ್ಥಾನದ 30 ಕೋಟಿ ಹಾಗೂ ಮಹಾನಗರ ಪಾಲಿಕೆಯ 100 ಕೋಟಿ ರೂ.ಅನುದಾನಗಳಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿತ್ತು. ಬಡಾವಣೆಗಳಿಗೆ ಅಗತ್ಯವಿರುವ ಸಿ.ಸಿ.ರಸ್ತೆ, ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸ್ಮಾರ್ಟ್‌ ಸಿಟಿ ಅನುದಾನ ಹೊರತು ಪಡಿಸಿದರೆ, ಯಾವುದೇ ವಿಶೇಷ ಅನುದಾನ ತುಮಕೂರು ನಗರಕ್ಕೆ ಬಿಡುಗಡೆಯಾಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಗರಕ್ಕೆ ಅನುದಾನ ತರುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಹೆಚ್ಚಿನ ಅನುದಾನ ತರಬಹುದು ಎಂದು ಬಡಾಯಿ ಕೊಚ್ಚಿಕೊಳ್ಳುತಿದ್ದ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬಂದು ಒಂದು ವರ್ಷ ಕಳೆದರೂ ಒಂದು ನಯಾ ಪೈಸೆ ವಿಶೇಷ ಅನುದಾನ ಕೇಂದ್ರದಿಂದಾಗಲಿ, ರಾಜ್ಯ ಸರಕಾರದಿಂದಾಗಲಿ ತುಮಕೂರು ನಗರಕ್ಕೆ ಬಿಡುಗಡೆಯಾಗಿಲ್ಲ. ಇದು ಬಿಜೆಪಿ ಪಕ್ಷದ ಸುಳ್ಳು ಪ್ರಚಾರ ಎಂಬುದು ಜಿಲ್ಲೆಯ ಜನತೆಗೆ ಮನವರಿಕೆಯಾಗಲಿದೆ ಎಂದು ಮಾಜಿ ಶಾಸಕರಾದ ಡಾ.ರಫೀಕ್‌ ಅಹಮದ್‌ ತಿಳಿಸಿದ್ದಾರೆ.
ತುಮಕೂರು ನಗರ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತಿದ್ದು, ನಗರಕ್ಕೆ ಉದ್ಯೋಗ ಅರಸಿ ಬರುವವರ ಸಂಖ್ಯೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರಕಾರಗಳ ಮೇಲೆ ಒತ್ತಡ ಹಾಕಿ ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ತರಲು ಮುಂದಾಗುವಂತೆ ಡಾ.ರಫೀಕ್‌ ಅಹ್ಮದ್ ಒತ್ತಾಯಿಸಿದ್ದಾರೆ.

(tumkurnews.in ನಲ್ಲಿ ಸುದ್ದಿಗಾಗಿ 9148215339 ಸಂಖ್ಯೆಯನ್ನು ನಿಮ್ಮ ವಾಟ್ಸಾಪ್ ಗ್ರೂಪುಗಳಿಗೆ ಆ್ಯಡ್ ಮಾಡಿರಿ)

About The Author

You May Also Like

More From Author

+ There are no comments

Add yours