ನನ್ನದೇನಿದ್ದರೂ ಸಹಮತ, ಭಿನ್ನಮತವಲ್ಲ: ಶಾಸಕ ಜ್ಯೋತಿಗಣೇಶ್ ಸ್ಪಷ್ಟನೆ

1 min read

ತುಮಕೂರು, ಜೂ.19: tumkurnews.in

ರಾಜ್ಯ ಸರಕಾರದ ವಿರುದ್ಧದ ಭಿನ್ನಮತೀಯ ಚಟುವಟಿಕೆಗಳಲ್ಲಿ ತಾವು ಪಾಲ್ಗೊಂಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿ ಸತ್ಯಕ್ಕೆ ದೂರವಾದದ್ದು ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂದು ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕನಸು ಕಂಡವರಲ್ಲಿ ನಾನು ಒಬ್ಬ ಎಂದು ತಿಳಿಸಿದ್ದಾರೆ.
ಮುಂದುವರೆದು, ‘ಸುಭದ್ರ ಸರ್ಕಾರ ಸಮರ್ಥ ಆಡಳಿತ ನೀಡುತ್ತಿರುವ ರಾಜ್ಯದ ಬಿಜೆಪಿ ಸರ್ಕಾರದ ಶಾಸಕನಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಶ್ರಮ ವಹಿಸುತ್ತಿದ್ದೇನೆ.
ಹಲವು ಸುದ್ದಿ ಮಾಧ್ಯಮಗಳಲ್ಲಿ ಬಿಜೆಪಿ ಶಾಸಕರು ಸರ್ಕಾರಕ್ಕೆ ತೊಡಕ್ಕಾಗುವ ರೀತಿಯಲ್ಲಿ ಭಿನ್ನಮತವನ್ನು ನಡೆಸಲು ಸಭೆ ಸೇರಿದ್ದಾರೆಂದು ದೃಶ್ಯ ಮಾಧ್ಯಮಗಳಲ್ಲಿ ನನ್ನ ಹೆಸರು ಪ್ರಸಾರವಾಗಿದ್ದು, ಈ ವರದಿಯು ಸತ್ಯಕ್ಕೆ ದೂರವಾದಂತಹ ವರದಿಯಾಗಿದೆ” ಎಂದು ಆರೋಪವನ್ನು ನಿರಾಕರಿದ್ದಾರೆ.
‘ರಾಜ್ಯದ ವಿವಿಧ ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಡುವ ನಾವು 18 ಜನ ಬಿಜೆಪಿ ಶಾಸಕರು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ತುಮಕೂರು ಮಹಾನಗರಪಾಲಿಕೆಯೂ ಸೇರಿದಂತೆ ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ ಮಂಜೂರಾಗಿದ್ದ 125 ಕೋಟಿ ರೂ.ಗಳ ಅನುದಾನವನ್ನು ಕೋವಿಡ್-19 ಪರಿಣಾಮವಾಗಿ ವಾಪಸ್ಸು ಪಡೆಯಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಕಾಮಗಾರಿಗಳ ಕಾರ್ಯಕ್ರಮ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆಯನ್ನು ಪಡೆದಿದ್ದು, ಟೆಂಡರ್ ಕರೆಯುವ ಪ್ರಕ್ರಿಯೆಯಷ್ಟೆ ಬಾಕಿ ಇತ್ತು. ಆದರೆ ಕರೋನ ವೈರಸ್ ಮಹಾಮಾರಿಯಿಂದ ಲಾಕ್‍ಡೌನ್ ಪರಿಣಾಮವಾಗಿ ಅನುದಾನವನ್ನು ವಾಪಸ್ಸು ಪಡೆಯಲಾಗಿದೆ. ನಮ್ಮ ಕ್ಷೇತ್ರದ ನಾಗರೀಕರಿಗೆ ರಸ್ತೆ ಮತ್ತು ಚರಂಡಿಗಳು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಶೀಘ್ರವಾಗಿ ಆಗುತ್ತದೆ ಎಂದು ಆಶ್ವಾಸನೆ ನೀಡಿದ್ದ ನಮಗೆ ಅನುದಾನ ವಾಪಸ್ಸಾದ ಕಾರಣ ಸರ್ಕಾರದ ಈ ನಿರ್ಧಾರದಿಂದ ದಿಕ್ಕೆ ತೋಚದಂತಾಗಿದೆ. ಈ ಕಾರಣದಿಂದ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಶ್ರೀ ನಳೀನ್ ಕುಮಾರ್ ಕಟೀಲ್ ರವರು ಪ್ರತಿನಿಧಿಸುವ ಮಂಗಳೂರು ಮಹಾನಗರಪಾಲಿಕೆ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿನಿಧಿಸುವ ವಿಜಯಪುರ ಮಹಾನಗರಪಾಲಿಕೆಗಳು ಒಳಗೊಂಡಂತೆ ಕರ್ನಾಟಕ ರಾಜ್ಯದ ಮಹಾನಗರಪಾಲಿಕೆಗಳಿಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿ ಮಂಜೂರಾಗಿದ್ದ ಅನುದಾನವನ್ನು ಹಿಂಪಡೆದಿರುವ ಬಗ್ಗೆ ಈಗಾಗಲೇ ಮಾನ್ಯ ನಗರಭಿವೃದ್ದಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗಿತ್ತು. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರ ಗಮನಕ್ಕೆ ತಂದು ಅನುದಾನವನ್ನು ಮರು ಮಂಜೂರು ಮಾಡುವಂತೆ ಮನವಿ ಮಾಡಲು ನಾವೆಲ್ಲಾ ಶಾಸಕರು ನಮ್ಮ ನಮ್ಮ ಮತಕ್ಷೇತ್ರಗಳ ಅಭಿವೃದ್ಧಿಯ ದೃಷ್ಟಿಯಿಂದ ಸಭೆಯನ್ನು ಸೇರಿದ್ದೆವು. ಯಾವುದೇ ಕಾರಣಕ್ಕೂ ಭಿನ್ನಮತವಾಗಲಿ, ಸರ್ಕಾರಕ್ಕೆ ತೊಂದರೆ ಕೊಡುವ ಕೆಲಸವನ್ನು ನಾವು ಮಾಡುವುದಿಲ್ಲ. ನಮ್ಮ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಜನಪರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ನಮ್ಮದು ಬಿಜೆಪಿ ಸರ್ಕಾರಕ್ಕೆ ಸಹಮತವಷ್ಟೆ ಭಿನ್ನಮತವಲ್ಲ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours