ಕೆಎಸ್ಆರ್ಟಿಸಿ ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ
Tumkurnews.in
ತುಮಕೂರು: ಕೆಎಸ್ಆರ್ಟಿಸಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಯನ್ನು ಸಂಸ್ಥೆಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಿ ಗೌರವದಿಂದ ಬೀಳ್ಕೊಡುಗೆ ನೀಡಲಾಯಿತು.
ನಗರದಲ್ಲಿ ನಡೆದ ಸಮಾರಂಭದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಿವೃತ್ತರಾದವರನ್ನು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಮಧುಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಕೆಎಸ್ಆರ್ಟಿಸಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ನೀಡಿರುವ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.
ನಿವೃತ್ತರು ಮುಖ್ಯವಾಗಿ ಆರೋಗ್ಯದ ಕಡೆ ಗಮನ ಕೊಡಬೇಕು. ತಮ್ಮ ಹಣವನ್ನು ಜೋಪಾನವಾಗಿ ಇಟ್ಟುಕೊಂಡು ಬಳಕೆ ಮಾಡಿಕೊಳ್ಳಬೇಕು. ನಿವೃತ್ತ ನೌಕರರ ಸಮಸ್ಯೆಗಳ ನಿವಾರಣೆಗೆ ಸಂಸ್ಥೆ ಸದಾ ಸ್ಪಂದಿಸುತ್ತದೆ ಎಂದರು.
ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಂಸ್ಥೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
