ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಈಜು ಬಾರದೆ ಮುಳುಗಿ ಸಾವು
Tumkur news
ಚಿಕ್ಕನಾಯಕನಹಳ್ಳಿ: ಅಣ್ಣ ಮತ್ತು ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ದಸೂಡಿಯಲ್ಲಿ ಶನಿವಾರ ನಡೆದಿದೆ.
ದಸೂಡಿ ಸಮೀಪದ ಗಿಲ್ಯಾನಾಯ್ಕನ ತಾಂಡ್ಯದ ರಾಜನಾಯಕ ಎಂಬುವರ ದ್ವಿತೀಯ ಪುತ್ರ ಗೌತಮ್(17) ಸಾವನ್ನಪ್ಪಿದ ದುರ್ದೈವಿ. ಈತ ತನ್ನ ಅಣ್ಣ ಯೋಗೀಶ್ ಹಾಗೂ ಸ್ನೇಹಿತರಾದ ಗುರು, ಮಹೇಶ್, ಹೇಮಂತ್, ದಯಾನಂದ್ ಅವರೊಂದಿಗೆ ಶನಿವಾರ ಮಧ್ಯಾಹ್ನ ದಸೂಡಿ ಸಮೀಪದ ದೇವಮರಡಿ ಕೆರೆಯಲ್ಲಿ ಈಜಾಡಲು ಹೋಗಿದ್ದಾನೆ. ಆದರೆ ಈಜು ಬಾರದ ಕಾರಣ ಗೌತಮ್ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಈ ವಿಷಯವನ್ನು ಅಣ್ಣ ಮತ್ತು ಸ್ನೇಹಿತರೆಲ್ಲರೂ ಗೌತಮ್ ತಂದೆ ರಾಜನಾಯ್ಕ ಅವರಿಗೆ ಬಂದು ತಿಳಿಸಿದ್ದಾರೆ. ತಕ್ಷಣ ಕೆರೆಯ ಬಳಿಗೆ ಎಲ್ಲರೂ ತೆರಳಿ ಹುಡುಕಿದರೂ ಗೌತಮ್ ಸಿಗಲಿಲ್ಲ. ಅಗ್ನಿ ಶಾಮಕ ದಳದವರನ್ನು ಕರೆಸಿ ಹುಡುಕಿದರೂ ಸಿಗಲಿಲ್ಲ. ಮರುದಿನ ಅಂದರೆ ಭಾನುವಾರ ಬೆಳಗ್ಗೆ ಕೆರೆಯಲ್ಲಿ ಮೃತದೇಹ ತೆಲುತ್ತಿದ್ದು ಸ್ಥಳಿಯರ ಸಹಾಯದಿಂದ ಹೊರತೆಗೆಯಲಾಯಿತು.
ಮೃತ ಗೌತಮ್ ತಿಪಟೂರಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
