ಮೆ 20ರಂದು ಔಷಧಿ ವ್ಯಾಪಾರ ವಹಿವಾಟು ಬಂದ್
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಔಷಧಿ ವ್ಯಾಪಾರಿಗಳ ಮುಷ್ಕರ
Tumkur news
ತುಮಕೂರು: ಔಷಧಿ ವ್ಯಾಪಾರಿಗಳು ಎದುರಿಸುತ್ತಿರುವ ಬಿಕ್ಕಟ್ಟು, ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮೇ 20ರಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ದೇಶಾದ್ಯಂತ ಎಲ್ಲಾ ಔಷಧ ವ್ಯಾಪಾರ ಮಳಿಗೆ ಬಂದ್ ಮಾಡಲಾಗುತ್ತದೆ. ಈ ಮುಷ್ಕರ ಬೆಂಬಲಿಸಿ ಜಿಲ್ಲೆಯ ಎಲ್ಲಾ ಔಷಧಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಲು ತೀರ್ಮಾನಿಸಿದ್ದಾರೆ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್ ಪಂಡಿತ್ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಪರಿಹಾರ ಕೋರಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಕಾರಣದಿಂದ ಔಷಧಿ ವ್ಯಾಪಾರ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಆನ್ಲೈನ್ ಮೂಲಕ ಔಷಧಿ ವ್ಯಾಪಾರ ನಿಲ್ಲಿಸಬೇಕು. ಇದರಿಂದ ಎನ್.ಡಿ.ಪಿ.ಎಸ್ ಅಮಲು ಬರುವ ಔಷಧಿಗಳು ಸಾರ್ವಜನಿಕರಿಗೆ ಸಿಗದಂತೆ ಮಾಡಬಹುದು. ಈ ಸಂಬಂಧ ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್ ವ್ಯಾಪಾರ ನಿಲ್ಲಿಸಿ ದೇಶದಲ್ಲಿ ಆರೋಗ್ಯಕರ ವ್ಯಾಪಾರದ ವಾತಾವರಣ ಸೃಷ್ಠಿಸಬೇಕು. ಸ್ಪೂರಿಯಸ್, ಮಿಸ್ ಬ್ರ್ಯಾಂಡೆಡ್, ನಕಲಿ ಔಷಧಿಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ಔಷಧಿ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂದು ಜವಹರ್ ಪಂಡಿತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಔಷಧಿ ವ್ಯಾಪಾರದಲ್ಲಿ ಬಿಗಿಯಾದ ಕಾನೂನುಗಳು, ನೀತಿ ನಿಯಮಗಳ ಅತಿಯಾದ ಏರಿಕೆ, ಡಿಸೌಂಟ್ ವ್ಯಾಪಾರದಿಂದ ನಮ್ಮ ವ್ಯವಹಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಸಾಮಾಜಿಕ ಜವಾಬ್ದಾರಿ ಹೊಂದಿರುವ ಔಷಧಿ ವ್ಯಾಪಾರಿಗಳು ಔಷಧ ವ್ಯಾಪಾರ ಬಂದ್ ಮಾಡುವುದು ನಮಗೂ ನೋವಿನ ಸಂಗತಿ. ನಮ್ಮ ಮನವಿಗೆ ಸ್ಪಂದನೆ ಸಿಕ್ಕದಿದ್ದಾಗ ಬಂದ್ ಮಾಡಿ ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿಜಯ್, ಜಂಟಿ ಕಾರ್ಯದರ್ಶಿ ನಾರಾಯಣಮೂರ್ತಿ, ಸದಸ್ಯರಾದ ಗೋಪಾಲ್, ಸಿದ್ಧು, ಶ್ಯಾಮಸುಂದರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
