ಅಪ್ರಾಪ್ತ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ತಂದೆಯ ಬಂಧನ
ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ ತಾಯಿಗೆ ಅಘಾತ ಕಾದಿತ್ತು. ತನ್ನ ಪತಿಯೇ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂದು ಗೊತ್ತಾದಾಗ ತಾಯಿಗೆ ಆಘಾತವಾಗಿದೆ. ಒಂದು ಸಣ್ಣ ಪ್ರೇಮ ಪ್ರಕರಣ ಮಗಳ ಜೀವವನ್ನೇ ಕಸಿದಿದೆ.
Tumkur news
ತುಮಕೂರು: ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತಿಮ್ಮರಾಯಪ್ಪ ಬಂಧಿತ ಆರೋಪಿ.
ಘಟನೆ ಹಿನ್ನೆಲೆ: ಶಿರಾ ತಾಲ್ಲೂಕು ನಿಂಬೆ ಮರದಹಳ್ಳಿಯ ಮೇಘನ(17) ಎಂಬಾಕೆಯು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಾಯಿ ತಿಂಗಳ ಹಿಂದೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಬಾಲಕಿಯ ತಂದೆ ತಲೆ ಮರೆಸಿಕೊಂಡಿದ್ದನು. ಆತನ ಪತ್ತೆಗೆ ತೀವ್ರ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಗಳು ಮೇಘನ ತನ್ನ ತಾಯಿ ಕಡೆಯ ಸಂಬಂಧಿಯೋರ್ವನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು, ಮಗಳು ಚಿಕ್ಕವಳಾದ್ದರಿಂದ ತಂದೆ ತಿಮ್ಮರಾಯಪ್ಪ ಮಗಳ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ತಂದೆ-ಮಗಳ ನಡುವೆ ಮನೆಯಲ್ಲಿ ಅನೇಕ ಬಾರಿ ಜಗಳಗಳು ನಡೆದಿದ್ದವು. ಏಪ್ರಿಲ್ 16ರಂದು ಕೂಡ ಜಗಳವಾಗಿದ್ದು, ಮಗಳು ಮಾತು ಕೇಳುತ್ತಿಲ್ಲ ಎಂದು ಕೋಪಗೊಂಡ ತಂದೆ ತಿಮ್ಮರಾಯಪ್ಪ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತನ್ನ ಜಮೀನಿನ ಪಕ್ಕದ ಸರ್ಕಾರಿ ಹಳ್ಳದಲ್ಲಿ ಶವವನ್ನು ಹೂತು ಹಾಕಿದ್ದಾನೆ. ಈ ನಡುವೆ ಮಗಳು ಕಾಣೆಯಾಗಿದ್ದಾಳೆಂದು ತಾಯಿ ನಾಪತ್ತೆ ದೂರು ದಾಖಲಿಸಿದ್ದಳು. ಭರ್ತಿ ತಿಂಗಳ ಬಳಿಕ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ಭೇದಿಸಿದ್ದು, ಮೇ 18ರಂದು ಮಧುಗಿರಿ ಉಪ ವಿಭಾಗಾಧಿಕಾರಿ ಹಾಗೂ ಶಿರಾ ತಹಸೀಲ್ದಾರ್ ನೇತೃತ್ವದಲ್ಲಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
