ತುಮಕೂರನ್ನು ಉತ್ತರ ಬೆಂಗಳೂರು ಎಂದು ಘೋಷಿಸಿ: ಪರಮೇಶ್ವರ್ ಒತ್ತಾಯ
ಡಿಸಿಎಂ ಡಿ.ಕೆ ಶಿವಕುಮಾರ್ ಸಹಮತ; ಪ್ರತಿಕ್ರಿಯಿಸದ ಸಿಎಂ ಸಿದ್ದರಾಮಯ್ಯ
Tumkur news
ತುಮಕೂರು: ತುಮಕೂರನ್ನು ಉತ್ತರ ಬೆಂಗಳೂರು ಎಂದು ಘೋಷಿಸಿ ರಾಮನಗರ, ಬಿಡದಿ ಮಾದರಿಯಲ್ಲಿ ತುಮಕೂರನ್ನು ಬೆಂಗಳೂರಿಗೆ ಸರಿಸಮವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ನಾಲ್ಕನೇ ಬಾರಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆ ಆಗಬೇಕು, ಬೆಂಗಳೂರಿಗೆ ಸರಿಸಮವಾಗಿ ತುಮಕೂರಿನ ಅಭಿವೃದ್ಧಿಯಾಗಬೇಕು, ತುಮಕೂರಿಗೆ ಮೆಟ್ರೊ ರೈಲು ತರಲು ಸಿದ್ದತೆ ನಡೆದಿದ್ದು, ಮುಖ್ಯಮಂತ್ರಿಗಳು ಮೆಟ್ರೋ ಯೋಜನೆಯನ್ನು ಸಾಕಾರಗೊಳಿಸಬೇಕು, ಮುಂದೆ ತುಮಕೂರು ಬೆಂಗಳೂರಿನ ಒಂದು ಭಾಗವಾಗುತ್ತದೆ, ಅದರ ಸಾಕಾರಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಬೆಂಗಳೂರಿನ ಜನಸಂದಣಿ ನಿಯಂತ್ರಿಸಬೇಕೆಂದರೆ ಪರಮೇಶ್ವರ್ ಹೇಳಿದಂತೆ ತುಮಕೂರು ಉತ್ತರ ಬೆಂಗಳೂರು ಆಗಿ ಅಭಿವೃದ್ಧಿಯಾಗಬೇಕು ಎಂದು ಸಹಮತ ವ್ಯಕ್ತಪಡಿಸಿದರು. ಆದರೇ ಸಿಎಂ ಸಿದ್ದರಾಮಯ್ಯ ಈ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
