ನನ್ನ ಸಾವಿಗೆ ಪರಮೇಶ್ವರ್, ಟಿ.ಬಿ ಜಯಚಂದ್ರ ಕಾರಣ: ಮಹಿಳೆ ಬೆದರಿಕೆ
ಜನತಾದರ್ಶನದಲ್ಲಿ ಹುಸಿ ಭರವಸೆ; ಸಚಿವ ಪರಮೇಶ್ವರ್ ವಿರುದ್ಧ ಮಹಿಳೆ ಆಕ್ರೋಶ
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ; ಮನೆ ನೀಡಲು ಮಹಿಳೆ ಪಟ್ಟು
Tumkur news
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಜನಸಂಪರ್ಕ ಸಭೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿರುವ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಸಿರಾ ನಿವಾಸಿಯಾಗಿರುವ ಮಹಿಳೆ ರಾಜಿಯಾ ಅಸ್ಲಾ ಪಾಷಾ ಎಂಬಾಕೆ, “ನಾನು ಇಬ್ಬರು ಚಿಕ್ಕ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು, ಪತಿ ಇಲ್ಲದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಕಳೆದ ಏಪ್ರಿಲ್ 8ರಂದು ತುಮಕೂರು ನಗರದ ಗ್ರಂಥಾಲಯ ಸಭಾಂಗಣದಲ್ಲಿ ನಡೆದಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ತಮಗೆ ಹಾಗೂ ಇಬ್ಬರು ಮಕ್ಕಳಿಗೆ ದಯಾ ಮರಣ ನೀಡುವಂತೆ ಮನವಿ ಮಾಡಿದ್ದೆ. ಆಗ ಸಚಿವ ಜಿ.ಪರಮೇಶ್ವರ್ ನೆರವಿನ ಭರವಸೆ ನೀಡಿದ್ದರು. ಮನೆ ನಿರ್ಮಿಸಿ ಕೊಡುವುದಾಗಿ ಮತ್ತು ಮನೆ ಬಾಡಿಗೆ ಕಟ್ಟಲು ಹಣ ನೀಡುವುದಾಗಿ ಹೇಳಿದ್ದರು. ಆದರೇ ಈವರೆಗೆ ಮನೆ ನೀಡಿಲ್ಲ, ಬಾಡಿಗೆ ಕಟ್ಟಲು ಹಣವನ್ನೂ ಕೊಟ್ಟಿಲ್ಲ’ ಎಂದು ಮಹಿಳೆ ದೂರಿದ್ದಾರೆ.
ಜನಸಂಪರ್ಕ ಸಭೆ ನಡೆದು ತಿಂಗಳು ಕಳೆದರೂ ಗೃಹ ಸಚಿವರಿಂದ ಯಾವುದೇ ನೆರವು ದೊರೆತಿಲ್ಲ. ಈ ಬಗ್ಗೆ ವಿಚಾರಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾಗ ಐ.ಬಿಗೆ ಬರಲು ಹೇಳಿದ್ದರು. ಅಲ್ಲದೇ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ ದೂರವಾಣಿ ಕರೆ ಮಾಡಿ ಐ.ಬಿಗೆ ಬರಲು ಹೇಳಿದ್ದರು. ಅಲ್ಲಿಗೆ ಹೋದಾಗ ೩ ಸಾವಿರ ಹಣ ನೀಡಿ 6 ತಿಂಗಳ ಬಾಡಿಗೆ ಹಣ ಪಡೆದಿರುವುದಾಗಿ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದರು. ನಾನು ನಿರಾಕರಿಸಿದಾಗ ಕೊರಟಗೆರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಹಾಗೂ ನಾಗಣ್ಣ ಬಾಯಿಗೆ ಬಂದಂತೆ ಬೈದು ಕಳುಹಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.
ಮೇ 20ರಂದು ತುಮಕೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಾರೆ, ಆ ದಿನ ಸಾಧನಾ ಸಮಾವೇಶದಲ್ಲಿ 1.50 ಲಕ್ಷ ಜನರಿಗೆ ಹಕ್ಕುಪತ್ರ ನೀಡುವುದಾಗಿ ಸಚಿವ ಪರಮೇಶ್ವರ್ ಹೇಳಿದ್ದಾರೆ. ಆ 1.50 ಲಕ್ಷ ಜನರ ಪೈಕಿ ನನಗೂ ಒಂದು ಮನೆ ಕೊಡಬಹುದಿತ್ತು. ಸಚಿವರು ಕೊಟ್ಟ ಭರವಸೆಯನ್ನು ಈಡೇರಿಸದೇ ಇದ್ದಲ್ಲಿ ಮೇ 20ರಂದು ತುಮಕೂರು ಅಮಾನಿಕೆರೆಗೆ ಹಾರಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನ ಸಾವಿಗೆ ಸಚಿವ ಪರಮೇಶ್ವರ್, ಶಿರಾ ಶಾಸಕ ಟಿ.ಬಿ ಜಯಚಂದ್ರ, ಜಿಲ್ಲಾಧಿಕಾರಿ ಕಾರಣ ಎಂದು ಮಹಿಳೆ ಹೇಳಿದ್ದಾರೆ.
Tumkur: Parameshwara, T.B. Jayachandra are responsible for my death: Woman threatens
ಕೋಟ್:
ಮಹಿಳೆ ಮಾಡಿರುವ ಆರೋಪಗಳು ಸುಳ್ಳು. ಬಾಡಿಗೆ ಕಟ್ಟಲು 30 ಸಾವಿರ ರೂ. ಕೊಡಲು ಮುಂದಾಗಿದ್ದೆವು, ಅವರು ಹಣ ನಿರಾಕರಿಸಿ ತಕ್ಷಣವೇ ಮನೆ ನೀಡುವಂತೆ, ಉದ್ಯೋಗ ಕೊಡಿಸುವಂತೆ ಬೇಡಿಕೆ ಇಟ್ಟಿದ್ದರು. ಈಗ ಸಮಸ್ಯೆ ಬಗೆ ಹರಿಸಿದ್ದೇವೆ.
-ಕೆ.ನಾಗಣ್ಣ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ.
