ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಶಾಂತಿಯುತ ಮತದಾನ
Tumkurnews.in
ತುಮಕೂರು: ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನವು ಜಿಲ್ಲೆಯ 80 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ನಡೆಯಿತು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ಐದು ಜಿಲ್ಲೆಗಳನ್ನೊಳಗೊಂಡಿರುವ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಎಲ್ಲಾ ಮತಗಟ್ಟೆಗಳಲ್ಲೂ ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಪದವೀಧರ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ತುಮಕೂರು ಜಿಲ್ಲೆಯಲ್ಲಿ 28720 ಪುರುಷ ಹಾಗೂ 21340 ಮಹಿಳಾ ಮತದಾರರು ಸೇರಿ ಒಟ್ಟು 50060 ಮತದಾರರಿದ್ದು, ಈ ಪದವೀಧರ ಮತದಾರರು ಅತ್ಯುತ್ಸಾಹದಿಂದಲೇ ಮತಗಟ್ಟೆಗಳಿಗೆ ಮತದಾನ ಮಾಡಲು ತೆರಳುತ್ತಿದ್ದದ್ದು ಜಿಲ್ಲೆಯಾದ್ಯಂತ ಕಂಡು ಬಂದಿತು. ಹಾಗೆಯೇ ಇದೇ ಮೊದಲ ಬಾರಿಗೆ ಮತ ಪಟ್ಟಿಗೆ ಸೇರಿರುವ ಯುವ ಪದವೀಧರ ಮತದಾರರ ಉತ್ಸಾಹ ಹೇಳತೀರದಾಗಿತ್ತು.
ಜಿಲ್ಲೆಯ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿರುವ ಒಟ್ಟು 80 ಮತಗಟ್ಟೆಗಳ ಸಮೀಪ ಕಾಂಗ್ರೆಸ್ ಮತ್ತು ಎನ್.ಡಿ.ಎ ಕಾರ್ಯಕರ್ತರು ಪೆಂಡಾಲ್ಗಳನ್ನು ಹಾಕಿಕೊಂಡು ಕುಳಿತು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಜಿಲ್ಲೆಯಲ್ಲಿ ಸ್ಥಾಪಿಸಿರುವ 80 ಮತಗಟ್ಟೆಗಳಲ್ಲೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರ: ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸಿದ್ದಗಂಗಾ ಕಾಲೇಜಿನ ಮತಗಟ್ಟೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ ಚಲಾಯಿಸಿದರು.
