ಸಿದ್ದಗಂಗಾಮಠದ ಸನಿವಾಸ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: ಸಚಿವ ಈಶ್ವರ ಖಂಡ್ರೆ ಭಾಗಿ

ಜಿಲ್ಲಾ ಸುದ್ದಿ ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಸಿದ್ದಗಂಗಾಮಠದ ಸನಿವಾಸ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಶಿಕ್ಷಕ ವೃತ್ತಿ ಎಲ್ಲ ಹುದ್ದೆಗಳಿಗಿಂತಲೂ ಮಿಗಿಲಾದ್ದು: ಈಶ್ವರ ಖಂಡ್ರೆ

ವಿದ್ಯಾರ್ಥಿಗಳಿಗೆ ವಿದ್ಯೆಯಷ್ಟೇ ಅಲ್ಲ, ಬುದ್ಧಿವಂತಿಕೆಯನ್ನೂ ಶಿಕ್ಷಕರು ಕಲಿಸಬೇಕು: ಈಶ್ವರ ಖಂಡ್ರೆ

Tumkurnews.in
ತುಮಕೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸಿದರಷ್ಟೇ ಸಾಲದು, ಅವರನ್ನು ಬುದ್ಧಿವಂತರನ್ನಾಗಿ ಮಾಡುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ತುಮಕೂರು ಸಿದ್ದಗಂಗಾಮಠದ ಸನಿವಾಸ ವಿದ್ಯಾಸಂಸ್ಥೆಯಲ್ಲಿಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಸೇರಿಸುವ ಜವಾಬ್ದಾರಿ ತಂದೆ-ತಾಯಿಯದಾದರೆ, ಶಾಲೆಗೆ ಸೇರಿದ ಮಕ್ಕಳಿಗೆ ವಿದ್ಯೆಯ ಜೊತೆಗೆ, ಚಾರಿತ್ರ್ಯಕ್ಕೆ ಆದ್ಯತೆ ನೀಡಿ, ನೈತಿಕತೆ ಮೌಲ್ಯ ತಿಳಿಸಿ, ಪ್ರಾಯೋಗಿಕ ಶಿಕ್ಷಣದೊಂದಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲುವಂತೆ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡಬೇಕಾದ್ದು ಶಿಕ್ಷಕರ ಕರ್ತವ್ಯ ಎಂದರು.
ಕಲ್ಪತರುವಿನ ನಾಡು, ಹರಿಹರ ಕ್ಷೇತ್ರ ಎಂದೇ ಖ್ಯಾತವಾದ ತುಮಕೂರು ಜಿಲ್ಲೆಯ ಪರಮಪವಿತ್ರವಾದ ಪುಣ್ಯ ಕ್ಷೇತ್ರ ಸಿದ್ಧಗಂಗೆ. ನಡೆದಾಡುವ ದೇವರಾಗಿದ್ದ, ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಪರಿಶ್ರಮ ಮತ್ತು ಪಾದಸ್ಪರ್ಶದಿಂದ ಪುನೀತವಾದ ಈ ಪುಣ್ಯಭೂಮಿಯಲ್ಲಿರುವ ಸಿದ್ದಗಂಗಾಮಠದ ಸನಿವಾಸ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ನಿಜಕ್ಕೂ ಪುಣ್ಯವಂತರು. ಲೌಕಿಕ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರವನ್ನೂ ನೀವು ಕಲಿಯುತ್ತಿದ್ದೀರಿ, ನಿಮಗಿರುವ ಶಿಸ್ತನ್ನು ಬೇರೆ ಎಲ್ಲಿಯೂ ಕಾಣಸು ಸಾಧ್ಯವಿಲ್ಲ ಎಂದರು.
ಡಾ.ಶಿವಕುಮಾರ ಸ್ವಾಮಿಗಳ ಸೇವೆಯ ಸ್ಮರಣೆ: ಮಠದಿಂದ ಸ್ವಾಮಿಯಲ್ಲ, ಸ್ವಾಮಿಯಿಂದಲೇ ಮಠ ಎಂದು ಈ ಜಗತ್ತಿಗೆ ತೋರಿಸಿಕೊಟ್ಟವರು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳು ಎಂದ ಈಶ್ವರ ಖಂಡ್ರೆ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ಮಹಾಪುರುಷರು ಎಂದರು.
ಕೆಲವರು ತಮ್ಮ ತಮ್ಮ ಜೀವಿತ ಕಾಲದಲ್ಲಿ ಕೇವಲ ಬದುಕಿರುತ್ತಾರೆ. ಆದರೆ ಮತ್ತೆ ಕೆಲವರು ತಾವು ಬದುಕಿದ್ದ ಕಾಲವನ್ನೇ ಬದಲಾಯಿಸುತ್ತಾರೆ. ಅಂತಹ ಮಹಾಪುರುಷರಲ್ಲಿ ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿ ಅವರೂ ಒಬ್ಬರಾಗಿದ್ದಾರೆ.
ತಮ್ಮ ಸೇವಾಕೈಂಕರ್ಯ, ಚಿಂತನೆ, ಸಂಸ್ಥೆ ಮತ್ತು ಸೇವಾ ಪರಂಪರೆಗೆ ಬುನಾದಿ ಹಾಕಿದ ಅವರು, ಹೊತ್ತಿದ ಒಲೆ ಆರದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಮತ್ತು ಅರಿವು ನೀಡುವ ಮೂಲಕ ಅಮರರಾಗಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ಸಹೋದರತ್ವ, ಸಹಬಾಳ್ವೆ, ಸಹಿಷ್ಣತೆ, ಸ್ವಾಭಿಮಾನವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಜ್ಞಾನದೇಗುಲ ಸಿದ್ದಗಂಗಾಮಠದ ಶಾಲೆಗಳಾಗಿದ್ದು, ಶ್ರೀಸಿದ್ದಲಿಂಗಸ್ವಾಮೀಜಿಯವರು ತಮ್ಮ ಪೂಜ್ಯ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಯಶಸ್ವಿಯಾಗಿ ಸಾಗುತ್ತಾ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದರು.
ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂದು ಹೇಳುವ ದೇಶ ನಮ್ಮದು. ಜನ್ಮ ಕೊಟ್ಟ ತಾಯಿಗೆ. ಜನ್ಮದಾತ ತಂದೆಯ ನಂತರದ ಸ್ಥಾನ ಗುರುಗಳಿಗೆ ನೀಡಲಾಗಿದೆ. ಗುರುಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿ, ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದರು.
ಗುರುಶಿಷ್ಯರ ಬಾಂಧವ್ಯಕ್ಕೆ ರಾಧಾಕೃಷ್ಣನ್ ಮಾದರಿ:
ಸರ್ವಪಲ್ಲಿ ರಾಧಾಕೃಷ್ಣನ್ ಅವರು 1918ರಿಂದ1921ರವರೆಗೆ ಮೂರು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಮೈಸೂರು ವಿಶ್ವವಿದ್ಯಾಲಯ ಬಿಟ್ಟು, 1921ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಹೋಗುವಾಗ ಅವರ ವಿದ್ಯಾರ್ಥಿಗಳು ಅವರು ಪ್ರಯಾಣಿಸುತ್ತಿದ್ದ ರೈಲು ಬೋಗಿಗೆ ಹೂವಿನಿಂದ ಅಲಂಕಾರ ಮಾಡಿ, ಕುದುರೆಗಾಡಿಗೂ ಅಲಂಕಾರ ಮಾಡಿ, ತಮ್ಮ ಗುರುಗಳನ್ನು ಕುದುರೆಗಾಡಿಯಲ್ಲಿ ಕೂರಿಸಿ, ಕುದುರೆ ಬದಲಿಗೆ ತಾವೇ ಗಾಡಿಯನ್ನು ಎಳೆದುಕೊಂಡು ರೈಲು ನಿಲ್ದಾಣದವರೆಗೆ ಕರೆತಂದು ಜಯಘೋಷ ಮಾಡಿ ಬೀಳ್ಕೊಟ್ಟಿದ್ದರು ಎಂದು ಕೇಳಿದ್ದೇನೆ. ಇದು ಗುರು-ಶಿಷ್ಯ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ರಾಧಾಕೃಷ್ಣನ್ ಅವರು ರಾಷ್ಟ್ರಪತಿಗಳಾಗಿದ್ದರೂ ತಾವೊಬ್ಬ ಶಿಕ್ಷಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಬೇಕೆಂದು ಬಯಸಿದ್ದರು. ಅದೇ ರೀತಿ ಭಾರತದ ಖ್ಯಾತ ವಿಜ್ಞಾನಿ, ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಹಾಗೂ ರಾಷ್ಟ್ರಪತಿಗಳಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೂ ಸಹ ತಮ್ಮನ್ನು ಜನ ಶಿಕ್ಷಕ ಎಂದು ಗುರುತಿಸಬೇಕು ಎನ್ನುತ್ತಿದ್ದರು. ಗುರುವಿನ ಹುದ್ದೆಯ ಹಿರಿಮೆ ಎಲ್ಲ ಹುದ್ದೆಗಿಂತ ಮಿಗಿಲಾದ್ದು ಎಂದರು.
ಉತ್ತಮ, ಸುಸಂಸ್ಕೃತ ಮತ್ತು ಸುಶಿಕ್ಷತ ಸಮಾಜದ ನಿರ್ಮಾಣದಲ್ಲಿ, ಗುರುವಿನ ಪಾತ್ರ ಹಿರಿದಾದ್ದು. ಹೀಗಾಗಿಯೇ ಶಿಕ್ಷಕರ ದಿನವನ್ನು ಆಚರಿಸುವ ಮೂಲಕ ತಮಗೆ ವಿದ್ಯೆ ಬುದ್ಧಿ ಕಲಿಸಿ, ಬಾಲ್ಯದಲ್ಲಿ ಮಾಡಿದ ತಪ್ಪನ್ನು ತಿದ್ದಿ, ಅಕ್ಷರ ಕಲಿಸಿ, ಜೀವನಕ್ಕೆ ಮಾರ್ಗದರ್ಶನ ನೀಡುವ ತಮ್ಮೆಲ್ಲ ಶಿಕ್ಷಕರನ್ನು ಸ್ಮರಿಸಿ ಅವರಿಗೆ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಹೇಳುವ ದಿನ ಇದಾಗಿದೆ, ಶಿಕ್ಷಕರೂ ತಮ್ಮ ಜವಾಬ್ದಾರಿ ಅರಿತು ಉತ್ತಮ ಶಿಕ್ಷಕರಾಗಲು ಪ್ರೇರೇಪಿಸುವ ದಿನವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಮಕ್ಕಳನ್ನು ಸರ್ವಧರ್ಮ ಸಹಿಷ್ಣುವಾಗಿಸುವ ಜವಾಬ್ದಾರಿ ಶಿಕ್ಷಕರದ್ದು: ಇಂದು ದೇಶ ಕವಲು ದಾರಿಯಲ್ಲಿದೆ. ದೇಶದಲ್ಲಿ ಜಾತಿ, ಧರ್ಮದ ವಿಷಜ್ವಾಲೆ ವ್ಯಾಪಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳಲ್ಲಿ ಸೌಹಾರ್ದ, ಸದ್ಗುಣ, ಸಹಿಷ್ಣುತೆಯನ್ನು ತುಂಬಿ, ಎಲ್ಲರೂ ಸೋದರತ್ವದೊಂದಿಗೆ ಬಾಳುವ ಮೌಲ್ಯಯುತ ಶಿಕ್ಷಣವನ್ನು ನೀಡುವ ಗುರುತರ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದರು.
ಹಣ ಕಳೆದರೆ ಮತ್ತೆ ಗಳಿಸಬಹುದು, ಆರೋಗ್ಯ ಹೋದರೆ ನಮಗೆ ಸ್ವಲ್ಪನಷ್ಟವಾಗುತ್ತದೆ. ಆದರೆ ಚಾರಿತ್ರ್ಯ ಹೋದರೆ ಸರ್ವನಾಶವಾಗುತ್ತವೆ. ಹೀಗಾಗಿ ಶಿಕ್ಷಕರು ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿ ಮಾಡಬೇಕು ಎಂದರು.
ನಮ್ಮೆಲ್ಲರ ಮೊದಲ ಗುರು ತಾಯಿ:
ನಮಗೆ ಅಂಬೆಗಾಲಿಡುವುದರಿಂದ ಹಿಡಿದು, ಕೈಹಿಡಿದು ನಡೆಸುವವರೆಗೆ, ನಮಗೆ ಊಟ ಮಾಡಿಸುವುದರಿಂದ ಹಿಡಿದು ನಿದ್ರೆ ಮಾಡಿಸುವವರೆಗೆ, ಅ.. ಆ ಇ.. ಈ ತಿದ್ದಿಸುವುದರಿಂದ ಹಿಡಿದು ನಾವು ಪದವಿ ಪೂರೈಸುವವರೆಗೆ ನಮಗೆ ಸದಾ ನಿರಂತರವಾಗಿ ಕಲಿಸುವ ತಾಯಿಯೇ ಮೊದಲ ಗುರು ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಎಲ್ಲ ಮಕ್ಕಳಿಗೂ ಸರ್ಕಾರವೇ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ವೀರಶೈವ, ಲಿಂಗಾಯತ ಮಠ ಮಾನ್ಯಗಳ ಕೊಡುಗೆ ಅಪಾರವಾದ್ದು.
ಸಿದ್ದಗಂಗಾಮಠದಲ್ಲಿ ಯಾವುದೇ ಜಾತಿ, ಮತ, ಪಂಥ, ಭಾಷೆಯ ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲಾಗಿದೆ. ಆಶ್ರಯ, ಅನ್ನ, ಅರಿವು ಎಂಬ ತ್ರಿವಿಧ ದಾಸೋಹದಿಂದ ಮಕ್ಕಳಲ್ಲಿ ಜ್ಞಾನದ ದೀವಿಗೆ ಹಚ್ಚಿದೆ. ಈ ಸನಿವಾಸ ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಪಠ್ಯಕ್ರಮವನ್ನಷ್ಟೇ ಅಲ್ಲ, ಸಂಸ್ಕಾರ, ಸಂಸ್ಕೃತಿ ಕಲಿಸಲಾಗುತ್ತಿದೆ. ಹೀಗಾಗಿಯೇ ಈ ಮಠದ ಶಾಲೆಗಳಲ್ಲಿ ಓದಿದ ಯಾವುದೇ ವಿದ್ಯಾರ್ಥಿ ತನ್ನ ಬದುಕಿನಲ್ಲಿ ವಿಫಲನಾಗಿಲ್ಲ. ಯಶಸ್ಸಿನ ಒಂದೊಂದೇ ಮೆಟ್ಟಿಲೇರಿ ಮಹಾನ್ ಸಾಧಕರಾಗಿದ್ದಾರೆ.
ಸಿದ್ದಗಂಗಾ ಮಠದ ಶಾಲೆಯಲ್ಲಿ ಓದಿದ ನೂರಾರು ಅಧಿಕಾರಿಗಳು ಈ ರಾಜ್ಯದಲ್ಲಿದ್ದಾರೆ. ಸಾವಿರಾರು ವೈದ್ಯರು, ಎಂಜಿನಿಯರುಗಳು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಮಠ ಈ ನಾಡಿನ ಶೈಕ್ಷಣಿಕ ವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಈ ಕಾರ್ಯದಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೂ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿದ್ದಗಂಗಾಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕರುಗಳಾದ ಬಿ. ಸುರೇಶ್ ಗೌಡ, ಜಿ.ಬಿ ಜ್ಯೋತಿ ಗಣೇಶ್, ಮತ್ತಿತರರು ಪಾಲ್ಗೊಂಡಿದ್ದರು.

ತುಮಕೂರು: ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಆದೇಶ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *