ಪಾವಗಡ: ಜನಸ್ಪಂದನ ಕಾರ್ಯಕ್ರಮಗಳು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು

1 min read

 

ಜನಸ್ಪಂದನ ಕಾರ್ಯಕ್ರಮಗಳು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಕಾರ್ಯದರ್ಶಿಗಳ ಸೂಚನೆ

Tumkurnews
ತುಮಕೂರು: ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾವಗಡ ಪಟ್ಟಣದ ಎಸ್‍ಎಸ್‍ಕೆ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನಸ್ಪಂದನ ಕಾರ್ಯಕ್ರಮವು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು. ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತ ಅಹವಾಲು ಅರ್ಜಿಗಳನ್ನು ಆದಷ್ಟು ಬೇಗ ಬಗೆಹರಿಸುವ ಮೂಲಕ ವಿಲೇವಾರಿ ಮಾಡಬೇಕು. ಕಾನೂನು ತೊಡಕು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಬಾಕಿಯಿಟ್ಟುಕೊಳ್ಳಬಾರದು ಎಂದು ನಿರ್ದೇಶನ ನೀಡಿದರು. ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಜನರು ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಆರೋಗ್ಯ ಸರಿಯಿಲ್ಲ, ಪ್ರಭಾರದಲ್ಲಿದ್ದೇನೆ ಎಂದು ಅಧಿಕಾರಿಗಳು ನೆಪ ಹೇಳದೆ ಸಮಯ ಬಿದ್ದಾಗ ಹಗಲಿರುಳು ಕೆಲಸ ಮಾಡಬೇಕು, ಕರ್ತವ್ಯ ನಿರ್ಲಕ್ಷ್ಯತೆ ತೋರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವುದು ಮೊದಲ ಎಚ್ಚರಿಕೆ ಸಂದೇಶ. ಆದರೂ ಅಧಿಕಾರಿಗಳು ತಮ್ಮ ನಡೆಯನ್ನು ಸುಧಾರಿಸಿಕೊಳ್ಳದಿದ್ದರೆ ನೇರವಾಗಿ ಸೇವೆಯಿಂದ ವಜಾಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜನಸ್ಪಂದನ ಕಾರ್ಯಕ್ರಮವು ಹೆಸರಿಗಷ್ಟೆ ನಡೆಯಬಾರದು. ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸಿ ಪರಿಹರಿಸಿದಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಸಾರ್ಥಕವಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳನ್ನು ನಿಗಧಿತ ಅವಧಿಯೊಳಗೆ ಪರಿಹರಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಉದ್ದೇಶ. ಉದ್ದೇಶ ಕಾರ್ಯಗತವಾಗದಿದ್ದಲ್ಲಿ ಇಂತಹ 100 ಕಾರ್ಯಕ್ರಮಗಳನ್ನು ಏರ್ಪಡಿಸಿದರೂ ಯಾವುದೇ ಪ್ರಯೋಜನವಿಲ್ಲವೆಂದರು.
ಈ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅಹವಾಲು ಅರ್ಜಿಗಳಿಗೆ ಹಿಂಬರಹ ನೀಡಿ ಸುಮ್ಮನೆ ಕೂರದೆ ಶೇ.100ರಷ್ಟು ವಿಲೇವಾರಿ ಮಾಡಬೇಕು. ಲೋಕಸಭಾ ಚುನಾವಣೆಗೂ ಮುನ್ನ ಪಾವಗಡ ತಾಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಳೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದ ಸಾರ್ವಜನಿಕರ ಅಹವಾಲುಗಳು ಬಾಕಿಯಿದ್ದಲ್ಲಿ ಆದ್ಯತೆ ಮೇಲೆ ವಿಲೇವಾರಿ ಮಾಡಬೇಕು ಎಂದು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಜನರ ಸಮಸ್ಯೆಗಳ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ಇರುವ ಅಧಿಕಾರಿಗಳು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಬೇಕಾಬಿಟ್ಟಿ ಕೆಲಸ ಮಾಡುವ ಅಧಿಕಾರಿಗಳನ್ನು ಮುಲಾಜಿಲ್ಲದೆ ಸೇವೆಯಿಂದ ವಜಾ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮಂತ್ರಿಗಳು ನಡೆಸಿದ ಸಭೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಸರ್ಕಾರದ ಆಶೋತ್ತರಗಳಂತೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕೆಂದು ಎಚ್ಚರಿಕೆ ನೀಡಿದರು.
ಸಕಾಲ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪೌತಿ ಖಾತೆ, 3& 9 ವ್ಯತ್ಯಾಸ, ಮತ್ತಿತರ ಕಂದಾಯ ವಿಷಯಗಳಡಿ ಸೌಲಭ್ಯ ಕೋರಿ ಬಂದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವ ಅಧಿಕಾರಿ, ನೌಕರರು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ಶಾಲೆ, ಕಾಲೇಜು ವಿದ್ಯಾರ್ಥಿ ನಿಲಯಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆ ಸೇರಿದಂತೆ ಪಾವಗಡ ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ತಾಲೂಕಿನ ವಾಡಿಕೆ ಮಳೆ 126 ಮಿ.ಮೀ. ಇದ್ದು, ಈ ಬಾರಿ 172 ಮಿ.ಮೀ. ವಾಸ್ತವಿಕ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. ತಾಲ್ಲೂಕಿನಲ್ಲಿ ಶೇಂಗಾ ಹಾಗೂ ರಾಗಿ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಅಗತ್ಯಕ್ಕನುಗುಣವಾಗಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ರೈತ ಬಾಂಧವರು ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ರೈತರ ಜಮೀನುಗಳಿಗೆ ಭೇಟಿ ನೀಡಿ ಬಿತ್ತನೆ ಬೀಜ ವಿತರಣೆಯಾಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆಯಬೇಕು. ಕೊರತೆಯಿದ್ದಲ್ಲಿ ಕೂಡಲೇ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ದಾಸ್ತಾನು ಹಾಗೂ ವ್ಯತ್ಯಾಸಗಳುಂಟಾದಲ್ಲಿ ರೈತರು ನೇರವಾಗಿ ತಮಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಕಳೆದ ವರ್ಷ ಬರಪರಿಸ್ಥಿತಿಯಿಂದ ನಷ್ಟ ಹೊಂದಿದ್ದ ಪಾವಗಡ ತಾಲೂಕು ರೈತರ ಖಾತೆಗೆ 5.49 ಕೋಟಿ ರೂ.ಗಳ ಪರಿಹಾರ ಸೇರಿ ಜಿಲ್ಲೆಯಲ್ಲಿ ಒಟ್ಟು 107 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನು 39000 ರೈತರ ಆಧಾರ್ ಸೀಡಿಂಗ್ ಬಾಕಿ ಉಳಿದಿದೆ. ರೈತರು ಬ್ಯಾಂಕ್‍ಗಳಿಗೆ ಭೇಟಿ ನೀಡಿ ತಮ್ಮ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಇಲ್ಲದಿದ್ದರೆ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆಯಾಗಬೇಕಾದ ಸರ್ಕಾರದ ಆರ್ಥಿಕ ಸವಲತ್ತನ್ನು ಜಮೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರಲ್ಲದೆ ಪಾವಗಡ ತಾಲ್ಲೂಕಿನಲ್ಲಿ 18.39 ಕೋಟಿ ರೂ. ಸೇರಿ ಜಿಲ್ಲೆಯಲ್ಲಿ ಒಟ್ಟು 67.80 ಕೋಟಿ ರೂ.ಗಳ ವಿಮಾ ಹಣ ರೈತರ ಖಾತೆಗೆ ಸಂದಾಯವಾಗಿದೆ. ರೈತರು ಶೇ.2ರಷ್ಟು ಪ್ರೀಮಿಯಂ ಹಣ ಪಾವತಿ ಮಾಡುವ ಮೂಲಕ ಬೆಳೆವಿಮಾ ಸೌಲಭ್ಯ ಪಡೆಯಬಹುದು. ಉಳಿದ ಶೇ 98ರಷ್ಟು ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಾವತಿ ಮಾಡಲಾಗುವುದು. ಕಳೆದ 2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಸಂಬಂಧಿಸಿದಂತೆ ಪಾವಗಡ ತಾಲೂಕಿನ 6655 ರೈತರು ಮಾತ್ರ ವಿಮಾ ಸೌಲಭ್ಯ ಪಡೆದಿದ್ದಾರೆ. ಯಾವ ಸಮಯದಲ್ಲಿ ಅನಾವೃಷ್ಟಿ, ಅತಿವೃಷ್ಟಿ, ಪ್ರಕೃತಿ ವಿಕೋಪಗಳು ಘಟಿಸುತ್ತವೆಯೋ ತಿಳಿಯಲಾಗದು. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ಬೆಳೆವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ, ಪಾವಗಡ ತಾಲೂಕಿನಲ್ಲಿರುವ ನಾಗಲಮಡಿಕೆ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಸವಲತ್ತು ಕೋರಿ ಬರುವ ತಾಲ್ಲೂಕಿನ ರೈತರನ್ನು ಅಧಿಕಾರಿಗಳು ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ಕೂಲಿ -ನಾಲಿ ಮಾಡುವ ಜನರು ಕೂಲಿ ಕೆಲಸ ಬಿಟ್ಟು ಬಂದರೆ ಅವರ ಒಂದು ದಿನದ ಕೂಲಿ ನಷ್ಟವಾಗುತ್ತದೆ. ಅಧಿಕಾರಿಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮೇಲೆ ಬಡವರ ಕೆಲಸಗಳನ್ನು ಮಾಡಿಕೊಡಬೇಕು. ಗ್ರಾಮ ಪಂಚಾಯತಿ ಪಿಡಿಓಗಳು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಿಡಿಓಗಳು ಹಾಗೂ ಕಂದಾಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರಿಂದ ದೂರುಗಳು ಬರುವುದು ನಿಲ್ಲುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇಂದು ಬೆಳಿಗ್ಗೆ ಪಾವಗಡ ತಾಲ್ಲೂಕಿನ ಎಲ್ಲ ಇಲಾಖೆಗಳ ಸ್ಥಿತಿ-ಗತಿಗಳ ಬಗ್ಗೆ ಹಾಗೂ ವಿವಿಧ ಗ್ರಾಮಗಳ ರಸ್ತೆ, ವಸತಿ ನಿಲಯ, ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತಾಲೂಕು ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿ ನ್ಯೂನ್ಯತೆಗಳನ್ನು ಪರಿಹರಿಸಬೇಕು. ಯಾವುದೇ ಗಂಭೀರ ಪರಿಣಾಮಗಳಿಗೆ ಆಸ್ಪದ ನೀಡಬಾರದು. ಮುಂದಿನ ದಿನಗಳಲ್ಲಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬಾಕಿ ಕಡತಗಳನ್ನು ಪರಿಶೀಲಿಸಲಾಗುವುದು. ಸಕಾರಣವಿಲ್ಲದೆ ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡಿರುವುದು ಕಂಡು ಬಂದರೆ ಸ್ಥಳದಲ್ಲೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು. ಜಲಜೀವನ್ ಮಿಷನ್ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಲೋಪ ಉಂಟಾಗಬಾರದು. ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಾದೇಶ ಪಡೆದು ಕೂಲಿ ನಿರ್ವಹಿಸಿದವರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕು. ನರೇಗಾ ಕೂಲಿ ಕಾರ್ಮಿಕರಿಂದ ವೇತನ ಪಾವತಿ ವಿಳಂಬದ ಬಗ್ಗೆ ದೂರು ಬಂದಲ್ಲಿ ಸ್ಥಳ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿಯೇ ಹೆಚ್ಚಿನ ಸಮಯ ಕಳೆಯದೆ ತಮ್ಮ ವ್ಯಾಪ್ತಿಯ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಹಾಗೂ ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ, ನೌಕರರ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಬೇಕು. ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳ ಪೈಕಿ ಕಾನೂನು ತೊಡಕಿರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅರ್ಜಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ತಪ್ಪಿದಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ಈಗಾಗಲೇ ಬೇಜವಾಬ್ದಾರಿ ತೋರಿದ 4 ಪಿಡಿಓಗಳನ್ನು ಅಮಾನತ್ತುಗೊಳಿಸಲಾಗಿದ್ದು, ಮತ್ತೊಮ್ಮೆ ಅಮಾನತ್ತು ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆ, ಚರಂಡಿ, ಅಂಗನವಾಡಿ ಸೇರಿದಂತೆ ಮತ್ತಿತರ ನಿರ್ಮಾಣ ಕಾಮಗಾರಿಗಳಿಗಾಗಿ ಜಿಲ್ಲೆಯ ಪ್ರತಿ ತಾಲ್ಲೂಕಿಗೂ ತಲಾ 20 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಜನಸೇವೆ ಮಾಡಲು ದೊರೆತಿರುವ ಅವಕಾಶವನ್ನು ಯಾವ ಅಧಿಕಾರಿಗಳೂ ದುರುಪಯೋಗ ಪಡಿಸಿಕೊಳ್ಳಬಾರದು. ಮುಂದಿನ ಒಂದು ವಾರದೊಳಗಾಗಿ ಪ್ರತಿ ಪಂಚಾಯತಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ಆಂದೋಲನವನ್ನು ಏರ್ಪಡಿಸಬೇಕು ಎಂದು ಸೂಚಿಸಿದರು.

ನಟ ದರ್ಶನ್’ಗೆ ಪೊಲೀಸ್ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ: ಪೊಲೀಸರು ಎಳೆದೊಯ್ಯುತ್ತಿರುವ ವಿಡಿಯೋ
ಜನಸ್ಪಂದನ ಕಾರ್ಯಕ್ರಮಗಳು ಕೇವಲ ಬಾಯಿ ಮಾತಿನಲ್ಲಿ, ಕಾಗದ ಪತ್ರಗಳಲ್ಲಿ ಉಳಿಯುವಂತಾಗಬಾರದು. ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಪ್ರಗತಿಯಲ್ಲಿರುವ ಜಲ್‍ಜೀವನ್ ಮಿಷನ್ ಕಾಮಗಾರಿ ಸೇರಿದಂತೆ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಸ್ವಚ್ಛತೆಗೆ ಸಂಬಂಧಿಸಿದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರು ಶುಕ್ರವಾರ ನಡೆಸಿದ ಸಭೆಯಲ್ಲಿ ಸೂಚನೆಗಳನ್ನು ನೀಡಿದ್ದು, ಸಚಿವರುಗಳ ಸೂಚನೆಯಂತೆ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಂ, ತಹಶೀಲ್ದಾರ್ ವರದರಾಜು, ಪುರಸಭೆ ಸದಸ್ಯ ಜಿ. ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜನಸ್ಪಂದನದಲ್ಲಿ 96 ಅಹವಾಲು ಅರ್ಜಿ ಸ್ವೀಕಾರ: ಪಾವಗಡದಲ್ಲಿ ನಡೆದ ಇಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 96 ಅಹವಾಲು ಅರ್ಜಿಗಳು ಸ್ವೀಕರಿಸಲಾಗಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ 5 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 53, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-16, ಕೃಷಿ-6, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ-2, ಬೆಸ್ಕಾಂ-3, ಪಾವಗಡ ಪುರಸಭೆ-9, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ-4 ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಭೂಮಾಪನ ಇಲಾಖೆಗೆ ಸಂಬಂಧಿಸಿದಂತೆ ತಲಾ 1 ಸೇರಿ ಒಟ್ಟು 96 ಅರ್ಜಿಗಳು ಸ್ವೀಕೃತವಾಗಿವೆ.

About The Author

You May Also Like

More From Author

+ There are no comments

Add yours