ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ವಿಧಾನಸೌಧ ಚಲೋ: ಡಿಸಿ ಕಚೇರಿ ಎದುರು ಧರಣಿಗೆ ನಿರ್ಧಾರ
Tumkurnews
ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸದಿದ್ದರೆ ಮುಂದಿನ ವಿಧಾನಸಭೆ ಅಧಿವೇಶನ ಸಮಯದಲ್ಲಿ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೋರಾಟ ಸಮಿತಿ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.
ಇಂದು ತುಮಕೂರಿನ ಶ್ರೀ ಮುರುಘರಾಜೇಂದ್ರ ಸಭಾ ಭವನದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಸಭೆ ಸೇರಿ, ಮುಂದಿನ ಹೋರಾಟದ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಸಂದರ್ಭದಲ್ಲಿ, ಈ ನಿರ್ಣಯದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಕಳೆದ ಮೇ 30 ರಂದು ನಡೆದ ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಮನೆ ಮುಂಭಾಗದ ಧರಣಿಗೆ ಆಗಮಿಸಿ, ಬಂಧನಕ್ಕೆ ಒಳಗಾದವರು ಮತ್ತು ಸಹಕರಿಸಿದ ಎಲ್ಲರಿಗೂ ಮಾಜಿ ಸಚಿವ ಸೊಗಡು ಶಿವಣ್ಣ ಧನ್ಯವಾದಗಳನ್ನು ಅರ್ಪಿಸಿದರು.
ಶಾಂತಿಯುತ, ಸಂಘಟಿತ ಹೋರಾಟ: ಬಿ.ಸುರೇಶ್ ಗೌಡ:
ಮುಂದಿನ ದಿನಗಳಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹಂತ ಹಂತವಾಗಿ ಹೋರಾಟಕ್ಕೆ ಜಿಲ್ಲೆಯ ರೈತರು, ವಿವಿಧ ಸಂಘ-ಸಂಸ್ಥೆ- ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದು, ಲಿಂಕ್ ಕೆನಾಲ್ ಹಾದು ಹೋಗುವ ಎಲ್ಲಾ ಗ್ರಾಮ – ಪ್ರದೇಶದಲ್ಲಿನ ಜನರಿಗೆ ಅರಿವು ಮೂಡಿಸಿ, ತಾತ್ವಿಕ ಅಂತ್ಯಕ್ಕೆ ಹೋರಾಟ ಮಾಡೋಣ ಎಂದು ಶಾಸಕ ಬಿ.ಸುರೇಶ್ ಗೌಡ ಕರೆ ನೀಡಿದರು.
ರಾಜ್ಯ ಸರ್ಕಾರ ತುಮಕೂರು ಜಿಲ್ಲೆಯ ಹೋರಾಟವನ್ನು ಹತ್ತಿಕ್ಕಲು ಭಾರೀ ಯೋಜನೆ ಮಾಡಿರುವ ಹಾಗೆ ಕಾಣುತ್ತಿದೆ. ಮೊನ್ನೆ ನಡೆದ ಹೋರಾಟವನ್ನು ಪೊಲೀಸರ ಸರ್ಪಗಾವಲು ಹಾಕಿ, ಜನಪ್ರತಿನಿಧಿಗಳು , ರೈತರು, ನಾಗರೀಕರು, ವಿವಿಧ ಪಕ್ಷಗಳ ಪ್ರಮುಖರು, ಸಂಘಟನೆಗಳವರನ್ನು ಬಂಧಿಸುವ ಮೂಲಕ ತುಮಕೂರು ಜಿಲ್ಲೆಗೆ ಅವಮಾನಿಸಿದ್ದಾರೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಶಾಸಕರು ಜಿಲ್ಲೆಯ ಜನರ ರಕ್ಷಿಸುವಲ್ಲಿ ವಿಫಲವಾಗಿದ್ದಾರೆ. ಜನ ಜಾಗೃತಿ ಮೂಲಕ ಹಳ್ಳಿಗಳಲ್ಲಿ ಸಭೆ ಮಾಡುತ್ತೇವೆ. ಪೈಪ್ ಹಾಕಲು ಬಿಡದಂತೆ ಕರೆ ನೀಡಿದರಲ್ಲದೆ, ಲಿಂಕ್ ಕೆನಾಲ್ ಹಾದು ಹೋಗುವ 34.5 ಕಿ.ಮೀ ಉದ್ದದ ಹಳ್ಳಿ , ರಸ್ತೆಯಲ್ಲಿ ಮಾನವ ಸರಪಣಿ ಮಾಡುವುದು, ಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಹೋಗುವುದು ಮತ್ತು ಮುಂದಿನ ಜೂನ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶಾಂತಿಯುತ ಹೋರಾಟ ಮಾಡಲಾಗುವುದೆಂದು ಬಿ.ಸುರೇಶ್ ಗೌಡ ಸರ್ಕಾರಕ್ಕೆ ಎಚ್ಚರಿಸಿದರು.
ಗುಬ್ಬಿಯಲ್ಲಿ ಸಮಾವೇಶ, ಜಿಲ್ಲಾ ಬಂದ್ ಎಚ್ಚರಿಕೆ:
ಸರ್ಕಾರ ನಮ್ಮ ಹೋರಾಟವನ್ನು ನಿಷ್ಕ್ರಿಯ ಮಾಡಲು ನಿರ್ಧರಿಸುವ ಹಾಗೆ ಕಾಣುತ್ತಿದ್ದು, ಹಿಟ್ಲರ್ ಆಡಳಿತ ರೀತಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವರ್ತಿಸುತ್ತಿದ್ದು, ಚಾಲನ್ ಕೆಲಸ ಪೂರ್ಣಗೊಳಿಸುವುದು ಡಿಕೆಶಿ ಉದ್ದೇಶ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವಿಕ ಮಾಹಿತಿ ನೀಡಿ, ರೈತರು, ಮಹಿಳೆಯರು, ಮಕ್ಕಳನ್ನು ಹೋರಾಟಕ್ಕೆ ಸಜ್ಜುಗೊಳಿಸಿ, ಗುಬ್ಬಿಯಲ್ಲಿ 20000 ಜನ ಸೇರಿಸಿ, ಭಾರೀ ಪ್ರತಿಭಟನೆ ಮಾಡುವುದಲ್ಲದೆ, ಜಿಲ್ಲಾ ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು.
ಸರ್ಕಾರಕ್ಕೆ ಮನವಿ:
ಹೋರಾಟ ಯೋಜನಾ ಬದ್ದವಾಗಿ ನಡೆಯಬೇಕು ಮತ್ತು ಪಕ್ಕಾತೀತ, ವಿವಿಧ ಸಂಘಟನೆಗಳನ್ನೊಂದಿಗೆ ಪರಿಣಾಮಕಾರಿಯಾಗಿ ಆಗಬೇಕು ಎಂದು ಬಿಜೆಪಿಯ ಕೊರಟಗೆರೆ ಮುಖಂಡ ಅನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿ, ಹೇಮಾವತಿ ಲಿಂಕ್ ಕೆನಾಲ್ ನಿಂದ ಜಿಲ್ಲೆಗೆ ತೊಂದರೆಯಾಗುವ ಬಗ್ಗೆ ಎಲ್ಲಾ ಹೋರಾಟಗಾರರೊಂದಿಗೆ ತೆರಳಿ ಮನವಿ ಅರ್ಪಿಸೋಣ ಎಂದರು.
ಹೇಮಾವತಿ ಲಿಂಕ್ ಕಾಮಗಾರಿಯೇ ಅವೈಜ್ಞಾನಿಕ: ಸಂಪಿಗೆ ಜಗದೀಶ್:
ತುಮಕೂರು ಜಿಲ್ಲೆಗೆ ಹೇಮಾವತಿ ನಾಲಾ ವಲಯದ ಹಂಚಿಕೆ ನೀರನ್ನು ಲಿಂಕ್ ಚಾಲನ್ ಮೂಲಕ ಮಾಗಡಿ , ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದೇ ಅವೈಜ್ಞಾನಿಕ ಎಂದು ರಾಜ್ಯ ನೀರಾವರಿ ಅಡ್ವೇಜರಿ ಕಮಿಟಿ ಸದಸ್ಯ ಮತ್ತು ನವಾಮಿ ಗಂಗಾ ಯೋಜನೆಯ ಸದಸ್ಯ, ನೀರಾವರಿ ತಜ್ಞ ತುಮಕೂರು ಜಿಲ್ಲೆಯವರೇ ಆದ ಸಂಪಿಗೆ ಜಗದೀಶ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಗೆ ಕಾವೇರಿ ಬೇಸಿನ್ ನಿಂದ ಪಡೆದ 25.31 ಟಿ.ಎಂ.ಸಿ ನೀರಿನಿಂದ 251 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಲಾಭವನ್ನೇ ಈವರೆವಿಗೂ ಪೂರ್ಣ ಪಡೆಯಲು ಸಾಧ್ಯವಾಗಿಲ್ಲ. ಈ ಮಧ್ಯೆ ಹೇಮಾವತಿ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವುದೇ ಭಾರೀ ನ್ಯೂನತೆ ಯೋಜನೆ. ಒಂದು ಹನಿ ನೀರು ಬೇರೆಡೆ ತೆಗೆದುಕೊಂಡು ಹೋಗಬೇಕಾದರೆ ಸೆಂಟ್ರಲ್ ವಾಟರ್ ಕಮಿಟಿಯಿಂದ ಅನುಮತಿ ಬೇಕಿದೆ. ಕಾನೂನು, ನಿಭಂದನೆ ಉಲ್ಲಂಘಿಸಿ , ನೀರು ತೆಗೆದುಕೊಳ್ಳುವುದು ನ್ಯಾಯ ಸಮ್ಮತವಲ್ಲ ಎಂದು ಸಂಪಿಗೆ ಜಗದೀಶ್ ವಿವರಿಸಿ, ತುಮಕೂರು ಜಿಲ್ಲೆಗೆ ಹಂಚಿಕೆ ನೀರನ್ನು ನಾವು ಪಡೆದುಕೊಳ್ಳಲು ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಜನರಲ್ಲಿ ಜಾಗೃತಿ ಮೂಡಿಸಿ, ತುಮಕೂರು ಜಿಲ್ಲೆಯ ಲಕ್ಷಾಂತರ ಜನರ ಸಹಿ ಮಾಡಿಸಿ, ಸೆಂಟ್ರಲ್ ವಾಟರ್ ಕಮೀಷನ್ ಗೆ ಮನವಿ ಮಾಡಬೇಕೆಂದು ಸಂಪಿಗೆ ಜಗದೀಶ್ ಹೋರಾಟಗಾರರಿಗೆ ವಿನಂತಿಸಿದರು.
ಸಭೆ ಉದ್ದೇಶಿಸಿ ಮಾಜಿ ಶಾಸಕ ಮತ್ತು ವಕೀಲ ಹೆಚ್.ಲಿಂಗಪ್ಪ, ನಿಟ್ಟೂರ್ ಪ್ರಕಾಶ್, ಹೈಕೋರ್ಟ್ ವಕೀಲ ತುರುವೇಕೆರೆ ಜಗದೀಶ್, ಧನಿಯಾಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ, ಶಿರಾ ತಾಲ್ಲೂಕು ಅಧ್ಯಕ್ಷ ದ್ಯಾಮೇಗೌಡ, ಸಾಗರನಹಳ್ಳಿ ನಂಜೇಗೌಡ, ಹೊಸಕೋಟೆ ನಟರಾಜು, ಡಿಎಸ್ಎಸ್ ನರಸಿಂಹಯ್ಯ, ಕೊರಟಗೆರೆ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ವೆಂಕಟಾಚಲಯ್ಯ ತಮ್ಮ ಅಭಿಪ್ರಾಯ ಮಂಡಿಸಿದರು.
ಪ್ರಮುಖರ ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಕೆ.ಪಿ.ಮಹೇಶ , ಬೆಳಗುಂಬ ಪ್ರಭಾಕರ್, ಪುರವರ ಮೂರ್ತಿ, ಕೊರಟಗೆರೆ ತಾಲ್ಲೂಕಿನ ಬಿಜೆಪಿ ಅಧ್ಯಕ್ಷ ದರ್ಶನ್, ಸೊಗಡು ಕುಮಾರಸ್ವಾಮಿ, ಎಸ್.ಶಿವಪ್ರಸಾದ್, ಆಟೋ ನವೀನ್, ತರಕಾರಿ ಮಹೇಶ್, ಗೋವಿಂದರಾಜು, ಶಬ್ಬೀರ್ ಅಹಮ್ಮದ್, ರಾಚಂದ್ರರಾವ್, ಕೆ.ಹರೀಶ್, ಮದನ್ ಸಿಂಗ್, ಎನ್.ಗಣೇಶ್, ಇಮ್ರಾನ್, ವಿವೇಕ್, ರವಿಕುಮಾರ್ ಯಾದವ್ ಮುಂತಾದವರು ಉಪಸ್ಥಿತರಿದ್ದರು.
+ There are no comments
Add yours