ತುಮಕೂರು: ಮಳೆ ಅನಾಹುತ ತಡೆಯಲು ಅಲರ್ಟ್: ಸಹಾಯವಾಣಿ ಸ್ಥಾಪನೆ

1 min read

ಮಳೆಯ ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಸನೃದ್ದರಾಗಿ: ಶುಭ ಕಲ್ಯಾಣ್

Tumakurunews
ತುಮಕೂರು: ಮುಂಗಾರು ಮಳೆಯಿಂದ ಸಂಭವಿಸಬಹುದಾದ ವಿವಿಧ ರೀತಿಯ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಯಾವುದೇ ಜೀವಹಾನಿಯಾಗದ ರೀತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸನೃದ್ದರಾಗಿರುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ನಿರ್ದೇಶನ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪೆರೆನ್ಸ್ ಸಭಾಂಗಣದಲ್ಲಿ ನಡೆದ ‘ಮುಂಗಾರು-2024 ಪೂರ್ವಸಿದ್ದತೆ ಹಾಗೂ ಬರ ನಿರ್ವಹಣೆ ಮತ್ತು ಕಂದಾಯ ವಿಷಯಗಳಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾದ್ಯಂತ ಆಗಿರುವ ಮಳೆಯ ಪ್ರಮಾಣ, ಅದರಿಂದ ಆದ ಹಾನಿ, ಬರ ನಿರ್ವಹಣೆ, ಮೊದಲಾದ ವಿಷಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಗಾರು ಮಳೆ ಹಾಗೂ ಚಂಡಮಾರುತ ಪರಿಣಾಮಗಳನ್ನು ತಗ್ಗಿಸಲು ಕ್ಯೆಗೊಳ್ಳಬಹುದಾದ ಕ್ರಮಗಳ ಕುರಿತು ನೀಡಿರುವ ಸಲಹೆ ಸೂಚನೆಗಳ ರೀತ್ಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಉಂಟಾದ ಘಟನೆಗಳಿಗೆ ಅನುಗುಣವಾಗಿ ಸಮಸ್ಯೆಗೆ ಒಳಗಾದ ಸ್ಥಳಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಸಿದ್ಧತೆ ಮಾಡಿಕೊಳ್ಳದೆ ನಿರ್ಲಕ್ಷ ವಹಿಸುವಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ತಿಪಟೂರು ತಾಲ್ಲೂಕಿನ ಹೆಚ್ ಭೈರಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 8 ಮಿ.ಮಿ ಮಳೆಯಾಗಿದ್ದು, ಹೆಚ್ ಭೈರಾಪುರ ರಸ್ತೆ, ಮೇಲ್ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕರಿಗೆ ತೊಂದರೆ ಆಗಿರುವ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ, ಮುಂದೆ ಇಂತಹ ಘಟನೆ ಸಂಭವಿಸದ ರೀತಿ ಕ್ಯೆಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ತಾಲ್ಲೂಕು ತಹಸೀಲ್ದಾರ್’ಗೆ ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ ಮಾತನಾಡಿ, ತುಮಕೂರು ನಗರದ ಶಾಂತಿನಗರ, ಎಸ್ ಮಾಲ್ ಮೊದಲಾದ ಸ್ಥಳಗಳಲ್ಲಿ ಮಳೆ ಬಂದಂಥ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿದ್ದು, ತಕ್ಷಣ ಬಗೆಹರಿಸಲಾಗಿದೆ ಎಂದು ತಿಳಿಸಿದರು.

ತ್ವರಿತ ವರಧಿಗೆ ಸೂಚನೆ: ಸಿರಾ ತಾಲೋಕ್ ವ್ಯಾಪ್ತಿಯಲ್ಲಿ 6 ಹೇಕ್ಟರ್ ಬೆಳೆ ಹಾನಿಯಾಗಿರುವ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಹಾಗೂ ತೋಟಗಾರಿಗೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ ತಮ್ಮ ತಂಡಗಳೊಂದಿಗೆ, ಮಳೆಯಿಂದ ಹಾನಿಯಾಗಿರುವ ಬಗ್ಗೆ ಹಾನಿಗೊಳಗಾದ ರೈತರ ತೋಟಗಾರಿಕೆ, ಕೃಷಿ ಬೆಳೆಗಳ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಇಂದೇ ವರದಿ ಸಲ್ಲಿಸುವಂತೆ ಸೂಚಿಸಿದರು.
ತ್ಯಾಜ್ಯ ತೆರವು: ಜಿಲ್ಲೆಯಲ್ಲಿರುವ ಕೆರೆಗಳ ಆವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸೋರಿಕೆ ಇದ್ದಲ್ಲಿ ಅದನ್ನು ತಡೆಗಟ್ಟಲು ಸಣ್ಣ ನೀರಾವರಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೆರೆಗಳು, ಚರಂಡಿ, ಕಾಲುವೆಗಳಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿದು ಹೋಗಲು ಕ್ರಮವಹಿಸಬೇಕು. ಯಾವುದೇ ದುರಸ್ಥಿ ಇದ್ದಲ್ಲಿ ಅವುಗಳನ್ನು ಸಕಾಲದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು.
ಕೂಡಲೇ ಘಟನಾ ಸ್ಥಳಕ್ಕೆ ತೆರಳಿ: ಪ್ರಾಕೃತಿಕ ವಿಕೋಪ ಸಂಭವಿಸಿದ ಘಟನಾ ಸ್ಥಳಕ್ಕೆ ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ತೆರಳಿ, ಸಾರ್ವಜನಿಕ ಜೀವ, ಆಸ್ತಿ ಹಾನಿಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ರಸ್ತೆ, ಸೇತುವೆಗಳು ಹಾನಿಯಾದಲ್ಲಿ, ಕೂಡಲೆ ರಸ್ತೆ ಸಂಪರ್ಕ ಪುನರ್‌ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸಂಬಂಧಿಸಿದ ಇಲಾಖಾ ನೌಕರರು ಸನ್ನದ್ದರಾಗಿದ್ದು, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಅರಣ್ಯ, ಬೆಸ್ಕಾಂ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಮನೆ ದುರಸ್ತಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಮಳೆಯಿಂದಾಗಿ ಸೋರುತ್ತಿದ್ದರೆ, ಅದನ್ನು ದುರಸ್ಥಿಗೊಳಿಸಬೇಕು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಅಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವರಿಕೆ ಮಾಡಿ, ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡಬೇಕು. ಮಳೆಯಿಂದ ಮನೆಗಳಿಗೆ ಹಾನಿಯಾದಲ್ಲಿ ಕೂಡಲೇ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ವರದಿ ನೀಡಿ ಸಂತ್ರಸ್ತರಿಗೆ ಮಾರ್ಗಸೂಚಿಯ ಅನುಸಾರ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮವಹಿಸಬೇಕು.
ಗುಬ್ಬಿ ತಾಲ್ಲೂಕು ಹಂದಿಜೋಗಿ ಜನಾಂಗದವರು ವಾಸಿಸುವಂತಹ ಸ್ಥಳದಲ್ಲಿನ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಭೇಟಿ ನೀಡಿ, ಅಗತ್ಯ ಕ್ರಮಗಳ ಕೈಗೊಂಡು ವರದಿ ನೀಡಲು ಸೂಚಿಸಿದರು, ಪ್ರವಾಹ ಉಂಟಾಗುವ ಸ್ಥಳಗಳ ಸಂತ್ರಸ್ಥರಿಗೆ ಸೂಕ್ತ ರಕ್ಷಣೆಗೆ ಕಾಳಜಿ, ಗಂಜಿ ಕೇಂದ್ರಗಳನ್ನು ತೆರೆಯಬೇಕಿದ್ದು, ಅಧಿಕಾರಿಗಳು ಸೂಕ್ತ ಸ್ಥಳಗಳನ್ನು ಗುರುತಿಸಿ ಕಾಳಜಿ, ಗಂಜಿ ಕೇಂದ್ರಗಳನ್ನು ತೆರೆಯುವಂತೆ ತಿಳಿಸಿದರು. ಜಿಲ್ಲಾ ಯೋಜನಾ ನಿರ್ದೇಶಕ ಅಂಜಿನಪ್ಪ ಅವರಿಗೆ ಮಳೆಯಿಂದ ಮನೆಗಳಿಗೆ ಆಗಿರುವ ಹಾನಿಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದರು.
ಸಹಾಯವಾಣಿ: ಮಳೆಯಿಂದ ಸಂಭವಿಸುವ ಹಾನಿ ಹಾಗೂ ಪ್ರಾಕೃತಿಕ ವಿಕೋಪದ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಸಂಬಂಧಿಸಿದವರು ತುಮಕೂರು ಜಿಲ್ಲೆ: 0816-2213400, 7304975519, ಉಚಿತ ಸಹಾಯವಾಣಿ:155304 ಸಂರ್ಪಕಿಸಬಹುದಾಗಿದೆ
ವಿದ್ಯುತ್ ಅವಘಡಗಳು ಸಂಭವಿಸದಂತೆ ಕ್ರಮವಹಿಸಿ: ಮಧುಗಿರಿ ತಾಲ್ಲೂಕಿನಲ್ಲಿ 19 ವಿದ್ಯುತ್ ಕಂಬಗಳು, ಸಿರಾದಲ್ಲಿ 2, ಕೊರಟಗೆರೆಯಲ್ಲಿ 2 ಸೇರಿದಂತೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಉರುಳಿದ ಬಿದ್ದ ವಿದ್ಯುತ್ ಕಂಬಗಳ ಬಗ್ಗೆ ಮಾಹಿತಿ ಪಡೆದ ಅವರು ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದರೆ ಬೆಸ್ಕಾಂ ಅಧಿಕಾರಿಗಳು ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಪರಿಶೀಲಿಸಿ ಕೂಡಲೇ ತೆರವುಗೊಳಿಸಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಕ್ರಮವಹಿಸಬೇಕು. ವಿದ್ಯುತ್ ತಂತಿಗಳಿಗೆ ಆವರಿಸಿಕೊಂಡಿರುವ ಅಪಾಯಕಾರಿ ಮರಗಳ ರೆಂಬೆಕೊಂಬೆಗಳನ್ನು ತೆರವುಗೊಳಿಸಿ, ವ್ಯತ್ಯಯ, ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ ವಿದ್ಯುತ್ ತಂತಿಯಿಂದ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ: ಸಿರಾ ನಗರದ ವಾರ್ಡ್ ಸಂಖ್ಯೆ 21 ಮತ್ತು 25, ತಿಪಟೂರು ನಗರದ ಬಸ್ ನಿಲ್ದಾಣ, ರೈಲ್ವೆ ಅಂಡರ್ ಪಾಸ್, ತುರುವೇಕೆರೆ ನಗರದ ವಾರ್ಡ್ ಸಂಖ್ಯೆ 6 ಮೊದಲಾದ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಮಳೆಯಿಂದ ಸಮಸ್ಯೆ ಉಂಟಾದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಪರಿಶೀಲಿಸಿ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ರಸ್ತೆಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ರಾಷ್ಟ್ರೀಯ ಹಾಗೂ ರಾಜ್ಯ, ಜಿಲ್ಲಾ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಟಾಸ್ಕ್ ಪೋರ್ಸ ಸಭೆ: ಬರನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಪ್ರತಿ ತಾಲ್ಲೂಕು ಹಂತದಲ್ಲಿ ತಹಶೀಲ್ದಾರರು ಸಭೆಗಳನ್ನು ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು.

ಬಿತ್ತನೆ ಪ್ರದೇಶ: ಜಿಲ್ಲೆಯಲ್ಲಿ 3 ಲಕ್ಷದ 20 ಸಾವಿರ ಹೆಕ್ಟೆರ್ ಬಿತ್ತನೆ ಪ್ರದೇಶವಿದ್ದು, ಪ್ರಸ್ತುತದವರೆಗೂ 369 ಹೆಕ್ಟರ್ ವ್ಯಾಪ್ತಿಯಲ್ಲಿ ಬಿತ್ತನೆಯಾಗಿದ್ದು, ಇಂದಿನಿಂದ ರೈತರಿಗೆ ನೆಲಗಡಲೆ ಮತ್ತು ರಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಎಲ್ಲಾ ಅಗತ್ಯ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಸಂಗ್ರಹವಿದ್ದು ಯಾವುದೇ ಸಮಸ್ಯೆ ಕಂಡು ಬಂದಿರುವುದಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿದರು.
ಡಿ.ಡಿ.ಎಲ್.ಆರ್ ನಿರಂಜನ್ ಎಂ.ಎನ್, ಜಿಲ್ಲೆಯ ಎಲ್ಲಾ ಉಪವಿಭಾಗಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours