ಮಕ್ಕಳನ್ನು ಶಾಲಾಕಾಲೇಜಿಗೆ ಸೇರಿಸಲು ಏನೇನು ದಾಖಲೆಗಳು ಬೇಕು? ಇಲ್ಲಿದೆ ಮಾಹಿತಿ
Tumkurnews
ತುಮಕೂರು: ಇನ್ನೇನು ಕೆಲವೇ ದಿನಗಳಲ್ಲಿ ಶಾಲಾಕಾಲೇಜುಗಳು (1ರಿಂದ 12) ಆರಂಭವಾಗಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆ, ಕಾಲೇಜಿಗೆ ಸೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಯುಕ್ತ ಮಾಹಿತಿ ಇಲ್ಲಿದೆ.
ಏನೇನು ದಾಖಲೆಗಳು ಬೇಕು?: ಶಾಲಾಕಾಲೇಜುಗಳಲ್ಲಿ ಮಕ್ಕಳ ದಾಖಲಾತಿಗೆ ಕೆಲವೊಂದು ದಾಖಲೆ ಪತ್ರಗಳ ಜೆರಾಕ್ಸ್ ಪ್ರತಿಯನ್ನು ಒದಗಿಸಬೇಕಾಗುತ್ತದೆ. ಅವುಗಳ ಮಾಹಿತಿ ಇಲ್ಲಿದೆ.
* ವಿದ್ಯಾರ್ಥಿಯ ಆಧಾರ್ ಕಾರ್ಡ್: ದಾಖಲಾತಿಗೆ ಪ್ರಮುಖವಾಗಿ ಬೇಕಾಗಿರುವ ದಾಖಲೆಯೇ ಆಧಾರ್ ಕಾರ್ಡ್. ಆಧಾರ್ ಕಾರ್ಡ್’ನಲ್ಲಿರುವ ಹೆಸರು, ಪೋಷಕರ ಹೆಸರು, ವಿಳಾಸ, ಜನ್ಮ ದಿನಾಂಕದ ಮಾಹಿತಿ ಆಧಾರದ ಮೇಲೆಯೇ ಮಗುವಿನ ಅಥವಾ ವಿದ್ಯಾರ್ಥಿಯ ಶಾಲಾ ದಾಖಲೆಗಳು ರಚನೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್’ನಲ್ಲಿ ಸರಿಯಾದ ಮಾಹಿತಿ ಇರುವಂತೆ ನೋಡಿಕೊಳ್ಳುವುದು ಪೋಷಕರು ಅಥವಾ ವಿದ್ಯಾರ್ಥಿಗಳ ಜವಬ್ದಾರಿಯಾಗಿದೆ. ಆಧಾರ್ ಕಾರ್ಡ್’ನಲ್ಲಿ ಯಾವುದಾದರೂ ಬದಲಾವಣೆ, ತಿದ್ದುಪಡಿ ಮಾಡಿಸುವ ಅವಶ್ಯಕತೆ ಇದ್ದಲ್ಲಿ ಅದನ್ನು ಮಾಡಿಸಿದ ಬಳಿಕವೇ ಶಾಲಾ ದಾಖಲಾತಿ ಮಾಡಿಸುವುದು ಒಳಿತು.
* ಜಾತಿ ಪ್ರಮಾಣ ಪತ್ರ: ಶಾಲಾ ಕಾಲೇಜುಗಳ ದಾಖಲಾತಿಗೆ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಅಗತ್ಯವಿದೆ.
* ಆದಾಯ ಪ್ರಮಾಣ ಪತ್ರ: ವಿದ್ಯಾರ್ಥಿ ಇನ್ನೂ ಶಿಕ್ಷಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪೋಷಕರ ಆದಾಯವನ್ನು ವಿದ್ಯಾರ್ಥಿಯ ಆದಾಯ ಪ್ರಮಾಣಪತ್ರದಲ್ಲಿ ನಮೂದಿಸಲಾಗುತ್ತದೆ. ಶಾಲಾ ದಾಖಲಾತಿಗೆ ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ ಅಗತ್ಯವಿದೆ.
* ಫೋಟೋ ಪ್ರತಿ: ವಿದ್ಯಾರ್ಥಿಯ ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಫೋಟೋ ಬೇಕಾಗುತ್ತದೆ. 6 ಪಾಸ್ ಪೋರ್ಟ್ ಸೈಜು, 4 ಸ್ಟಾಂಪ್ ಸೈಜಿನ ಫೋಟೋ ಕೇಳುತ್ತಾರೆ.
* ಬ್ಯಾಂಕ್ ಪಾಸ್ ಪುಸ್ತಕ: ವಿದ್ಯಾರ್ಥಿಯ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕವನ್ನು ದಾಖಲಾತಿ ಸಮಯದಲ್ಲಿ ಕೆಲವೊಮ್ಮೆ ಕೇಳಲಾಗುತ್ತದೆ. ಕೆಲವು ಶಾಲಾಕಾಲೇಜುಗಳು ವಿದ್ಯಾರ್ಥಿ ವೇತನಕ್ಕೆ ಶಿಕ್ಷಣ ಸಂಸ್ಥೆಯಿಂದಲೇ ಅರ್ಜಿ ಸಲ್ಲಿಸುವುದರಿಂದ ಬ್ಯಾಂಕ್ ಖಾತೆಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
* ಬರ್ತ್ ಸರ್ಟಿಫಿಕೇಟ್: ಮೊದಲ ಬಾರಿಗೆ ಎಲ್.ಕೆ.ಜಿ ಅಥವಾ ಒಂದನೇ ತರಗತಿ ದಾಖಲಾತಿ ಮಾಡಿಸುವುದಾದರೇ ಮಗುವಿನ ಜನ್ಮ ದಿನಾಂಕ ದಾಖಲಾತಿ (ಬರ್ತ್ ಸರ್ಟಿಫಿಕೇಟ್) ಬೇಕಾಗುತ್ತದೆ.
* ಪಡಿತರ ಚೀಟಿ: ವಿದ್ಯಾರ್ಥಿಯ ಶಾಲಾ ದಾಖಲಾತಿಗೆ ಪಡಿತರ ಚೀಟಿ ಬೇಕು.
* ಪೋಷಕರ ಆಧಾರ್: ಎಲ್.ಕೆ.ಜಿ ಅಥವಾ ಒಂದನೇ ತರಗತಿಗೆ ಮಗುವಿನ ಶಾಲಾ ದಾಖಲಾತಿ ಮಾಡಿಸುವ ಸಮಯದಲ್ಲಿ ಪೋಷಕರ ಆಧಾರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಸೈಜಿನ ಫೋಟೋ ಪ್ರತಿ ಬೇಕಾಗುತ್ತದೆ.
* ಮೊಬೈಲ್ ನಂಬರ್: ಮಕ್ಕಳ ದಾಖಲಾತಿಗೆ ಪೋಷಕರ ಮೊಬೈಲ್ ನಂಬರ್ ನೀಡಬೇಕಾಗುತ್ತದೆ.
* ವರ್ಗಾವಣೆ ಪ್ರಮಾಣ ಪತ್ರ: ಪಿಯುಸಿ ಅಥವಾ ಪದವಿ ಪ್ರವೇಶಾತಿಗೆ ಹಿಂದಿನ ತರಗತಿಯ ವರ್ಗಾವಣೆ ಪ್ರಮಾಣ ಪತ್ರ ಬೇಕಾಗುತ್ತದೆ.
ಇದರೊಂದಿಗೆ ಆಯಾ ಶಿಕ್ಷಣ ಸಂಸ್ಥೆಗಳು ಕೇಳುವ ಅಗತ್ಯವಾದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
+ There are no comments
Add yours