ಕರ್ನಾಟಕ ಬಂದ್’ಗೆ ತುಮಕೂರು ಜಿಲ್ಲೆಯಲ್ಲಿ ಯಾರ್ಯಾರ ಬೆಂಬಲ: ಇಲ್ಲಿದೆ ಮಾಹಿತಿ
Tumkurnews
ತುಮಕೂರು: ಕಾವೇರಿ ನೀರಿನ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ತುಮಕೂರು ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು, ಆಟೋಚಾಲಕರು, ಹಮಾಲಿಗಳು, ಇನ್ನಿತರೆ ಸಂಘಟನೆಗಳು ಸೇರಿ ಸಭೆ ನಡೆಸಿ, ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡಪರ ಸಂಘಟನೆಗಳ ಪರವಾಗಿ ಕನ್ನಡಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ಆಟೋಚಾಲಕರು, ಕನ್ನಡಪರ ಸಂಘಟನೆಗಳ ಮುಖಂಡರು, ಟ್ಯಾಕ್ಸಿ ಡ್ರೈವರ್’ಗಳು, ಹಮಾಲಿಗಳ ಸಂಘ, ಎಪಿಎಂಸಿಯಾರ್ಡ್, ಖಾಸಗಿ ಬಸ್ ಮಾಲೀಕರ ಸಂಘ, ಲಾರಿ ಮಾಲೀಕರು, ಚಾಲಕರ ಸಂಘ, ಖಾಸಗಿ ವಿದ್ಯಾಸಂಸ್ಥೆಗಳ ಮುಖಂಡರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರ ಸಭೆ ನಡೆಸಿದ ಬಳಿಕ ಅವರು ಬಂದ್’ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಲಾಗಿದೆ.
ಕಾವೇರಿ ಕರ್ನಾಟಕದ ಜೀವನದಿ, ಕಾವೇರಿ ಕೊಳ್ಳಕ್ಕೆ ಸೇರಿದ, ಮದ್ಯಕರ್ನಾಟಕಕ್ಕೆ ಕುಡಿಯುವ ನೀರು ಒದಗಿಸುವ ಹೇಮಾವತಿಯಿಂದಲೂ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಇದರಿಂದ ಕುಡಿಯಲು ಹೇಮಾವತಿಯನ್ನೇ ನಂಬಿರುವ ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಸೆಪ್ಟಂಬರ್ 29ರಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಧನಿಯಕುಮಾರ್ ತಿಳಿಸಿದರು.
ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಅಂಗವಾಗಿ ತುಮಕೂರಿನಲ್ಲಿ ಸೆಪ್ಟಂಬರ್ 29 ರಂದು ಬೆಳಗ್ಗೆ 10 ಗಂಟೆಗೆ ನಗರದ ಬಿ.ಜಿ.ಎಸ್ ಸರ್ಕಲ್‍ನಲ್ಲಿ ಸಮಾವೇಶಗೊಳ್ಳುವ ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಟ್ಯಾಕ್ಸಿ,ಲಾರಿ, ಆಟೋ ಚಾಲಕರು, ಹೊಟೇಲ್ ಅಸೋಸಿಯೇಷನ್ ಹಾಗೂ ಇತರೆ ಸಂಘಟನೆಗಳ ಕಾರ್ಯ ಕರ್ತರು ನಗರದ ಟೌನ್‍ಹಾಲ್ ವೃತ್ತದಿಂದ ಎಂ.ಜಿ.ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ ಸಾರ್ವಜನಿಕರು,ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಧನಿಯಕುಮಾರ್ ಮನವಿ ಮಾಡಿದರು.
ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಶಂಕರ್ ಮಾತನಾಡಿ, ಕಳೆದ ಒಂದುವರೆ ತಿಂಗಳಿನಿಂದ ರಾಜ್ಯ ಸರಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಇದರಿಂದ ಹಳೆ ಮೈಸೂರು ಭಾಗಕ್ಕೆ ಸೇರಿದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯ ಸರಕಾರ ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು. ಹಾಗೆಯೇ ಕೇಂದ್ರ ಸರಕಾರ ಮದ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ವಿಜಯಸೇನೆ ಸೋಮಶೇಖರ್, ಶಂಕರ್, ರಂಜನ್, ಆಟೋ ಚಾಲಕರ ಸಂಘದ ನಟರಾಜೇಗೌಡ, ಅನಿಲ್, ಬಾಬು, ಕನ್ನಡ ಪ್ರಕಾಶ್, ಅರುಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕರ್ನಾಟಕ ಬಂದ್: ಸೆ.29ಕ್ಕೆ ತುಮಕೂರು ಬಂದ್’ಗೆ ಕರೆ
+ There are no comments
Add yours