ಶಿರಾ ಜಿಲ್ಲಾಕೇಂದ್ರವಾಗಬೇಕೆ? ಏನಿದೆ ಅರ್ಹತೆ?
Tumkurnews
ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು ಕೇಂದ್ರವನ್ನು ಜಿಲ್ಲಾಕೇಂದ್ರ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಜಿಲ್ಲೆಯಲ್ಲಿ ಹೊಸ ಜಿಲ್ಲೆಯಾಗಲು ಪೈಪೋಟಿ ಏರ್ಪಟ್ಟಿದೆ.
ತಿಪಟೂರು, ಮಧುಗಿರಿ ಹಾಗೂ ಶಿರಾ ತಾಲ್ಲೂಕುಗಳ ನಡುವೆ ಹೊಸ ಜಿಲ್ಲೆಯಾಗಲು ಪೈಪೋಟಿ ಉಂಟಾಗಿದ್ದು, ನಾಗರೀಕರು, ಪ್ರಜ್ಞಾವಂತರು, ಉದ್ಯಮಿಗಳು ಸೇರಿದಂತೆ ವಿವಿಧ ವಲಯಗಳ ಜನರು ಜಿಲ್ಲಾ ಕೇಂದ್ರದ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಪೈಕಿ ಶಿರಾ ತಾಲ್ಲೂಕಿನ ಜನತೆ ಹೊಸ ಜಿಲ್ಲೆ ರಚನೆ ಮಾಡುವುದೇ ಆದಲ್ಲಿ ಶಿರಾವನ್ನು ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಶಿರಾವನ್ನು ಜಿಲ್ಲಾ ಕೇಂದ್ರ ಏಕೆ ಮಾಡಬೇಕು ಎಂಬ ಕಾರಣಗಳನ್ನು ಕೂಡ ಜನರು, ಜನಪ್ರತಿನಿಧಿಗಳು ನೀಡುತ್ತಿದ್ದಾರೆ. ಶಿರಾ ಜಿಲ್ಲಾಕೇಂದ್ರವಾಗಲು ಏನೇನು ಪೂರಕ ವಾತಾವಣಗಳಿವೆ ಎಂಬುದರ ಅವಲೋಕನ ಇಲ್ಲಿದೆ.
* ಶಿರಾ ನಗರದಲ್ಲಿ ಈಗಾಗಲೇ ಸುಸಜ್ಜಿತ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಾಗಲು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಶಿರಾದಲ್ಲಿ ಸುಮಾರು 20 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣವಾಗಿದ್ದು, ಜಿಲ್ಲಾ ಕೇಂದ್ರಕ್ಕೆ ಬೇಕಾಗುವಷ್ಟು ವಿಶಾಲವಾದ ಪ್ರದೇಶ ಹೊಂದಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಈ ಮಿನಿ ವಿಧಾನ ಸೌಧ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
* ಶಿರಾ ನಗರವು ಐತಿಹಾಸಿಕ ನಗರವಾಗಿದೆ. ವಿಶಾಲವಾದ ಭೌಗೋಳಿಕ ಹಿನ್ನೆಲೆ ಹೊಂದಿದ್ದು, ಐದು ತಾಲ್ಲೂಕುಗಳಿಂದ ಸುತ್ತುವರೆದಿದೆ.
* ಉತ್ತಮ ಸಾರಿಗೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 48 ಮತ್ತು 234 ಎರಡು ಹೆದ್ದಾರಿಗಳು ಶಿರಾ ನಗರದ ಮೂಲಕ ಹಾದು ಹೊಗಿವೆ.
* ಹತ್ತು ಹಲವು ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ.
* ಉತ್ತಮ ಕುಡಿಯುವ ನೀರಿನ ಸೌಲಭ್ಯ ಹೊಂದಿದೆ.
* ಪ್ರವಾಸೋದ್ಯಮಕ್ಕೆ ಪೂರಕವಾಗಿದೆ.
* ವಿಶಾಲವಾದ ನ್ಯಾಯಾಲಯ ಕಟ್ಟಡವಿದೆ.
* ಉದ್ದೇಶಿತ ತುಮಕೂರು-ದಾವಣಗೆರೆ ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
* ಶಿರಾ ನಗರದಲ್ಲಿ ಸುಮಾರು 80 ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಇದೆ. ನಗರದಲ್ಲಿ ಒಟ್ಟು 31 ವಾರ್ಡ್’ಗಳಿವೆ.
* ಶಿರಾ ತಾಲ್ಲೂಕಿನಲ್ಲಿ 3 ಲಕ್ಷ ಜನಸಂಖ್ಯೆ ಇದೆ.
* ಶಿರಾ ನಗರವು ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಹಿರಿಯೂರು ತಾಲ್ಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿದೆ.
* ಶಿರಾ ನಗರದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಐದು ಖಾಸಗಿ ಕೈಗಾರಿಕಾ ತರಬೇತಿ ಕಾಲೇಜುಗಳಿವೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಬಾಲಕಿಯರ ಪ.ಪೂ. ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಕಸ್ತೂರಬಾ ವಸತಿ ಶಾಲೆ, ಅಟಲ್‍ಬಿಹಾರಿ ವಾಜಪೇಯಿ ವಸತಿ ಶಾಲೆ ಸೇರಿ 9 ವಸತಿ ಶಾಲೆಗಳಿವೆ. ತುಮಕೂರು ವಿವಿ ಸ್ನಾತಕ ಅಧ್ಯಯನ ಕೇಂದ್ರ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳಿವೆ.
ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡಿ: ಸಿಎಂಗೆ ಬೇಡಿಕೆ ಇಟ್ಡ ಪರಮೇಶ್ವರ್!
ಶಾಸಕ ಟಿ.ಬಿ ಜಯಚಂದ್ರ ಏನಂದ್ರು?: ಶಿರಾವನ್ನು ಜಿಲ್ಲಾಕೇಂದ್ರ ಮಾಡಬೇಕು ಎಂದು ಮಾಜಿ ಸಚಿವ, ಸರ್ಕಾರದ ದೆಹಲಿ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ ಜಯಚಂದ್ರ ಒತ್ತಾಯಿಸಿದ್ದಾರೆ.
‘ಶಿರಾಗೆ ಜಿಲ್ಲಾ ಕೇಂದ್ರವಾಗುವ ಅರ್ಹತೆ ಇದೆ. ಜಿಲ್ಲಾ ಕೇಂದ್ರಕ್ಕೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಶಿರಾ ನಗರದಲ್ಲಿ ಒಟ್ಟು 3 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ರಾ.ಹೆ. 48, 234 ಮತ್ತು ಹೊಸದಾಗಿ ಶಿರಾ-ಅಮರಾವತಿ ರಾಷ್ಟ್ರೀಯ ಹೆದ್ದಾರಿ 543ಇ ಹೆದ್ದಾರಿ ಕಾಮಗಾರಿ 102 ಕೊಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದು, ಶೀಘ್ರ ಪ್ರಾರಂಭವಾಗಲಿದೆ. ಕೈಗಾರಿಕಾ ವಸಾಹತು ಪ್ರದೇಶಕ್ಕೆ ತುಮಕೂರಿನಿಂದ ಶಿರಾವರೆಗೆ 6 ಮತ್ತು 7ನೇ ಹಂತದಲ್ಲಿ 9 ಸಾವಿರ ಎಕರೆ ಭೂಮಿ ಸ್ವಾದೀನಗೊಳ್ಳಲಿದೆ. ಶಿರಾದಲ್ಲಿ ಒಂದು ಸಾವಿರ ಎಕರೆ ಕೈಗಾರಿಕಾ ವಸಾಹತುಗೆ ಭೂಮಿ ಸ್ವಾಧೀನವಾಗಿದ್ದು, ಮತ್ತೆ ಒಂದು ಸಾವಿರ ಎಕರೆ ಸ್ವಾಧೀನಕ್ಕೆ ಪ್ರಸ್ತಾವನೆ ಇದೆ. ಶೀಘ್ರದಲ್ಲಿಯೇ ಶಿರಾದಲ್ಲಿ ಸುಮಾರು 350 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಿಂಗ್ ರೋಡ್ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶಿರಾ ದೊಡ್ಡ ಕೈಗಾರಿಕಾ ನಗರಿಯಾಗಲಿದೆ. ಎಲ್ಲಾ ರೀತಿಯಲ್ಲಿಯೂ ತುಮಕೂರಿಗಿಂತ ಉತ್ತಮ ನಗರವಾಗಿ ಶಿರಾ ಅಭಿವೃದ್ಧಿಗೊಳ್ಳಲಿದೆ’ ಎಂದು
ಟಿ.ಬಿ.ಜಯಚಂದ್ರ ಹಕ್ಕೋತ್ತಾಯ ಮಂಡಿಸಿದ್ದಾರೆ.
ಸಂವಿಧಾನ ಓದು ಕಾರ್ಯಕ್ರಮ: ಯಾರು ಬೇಕಿದ್ದರೂ ಭಾಗವಹಿಸಬಹುದು: ಇಲ್ಲಿದೆ ಮಾಹಿತಿ
ಜನ ಏನಂತಾರೆ?: ಜಿಲ್ಲಾ ಕೇಂದ್ರವಾಗಲು ಶಿರಾಗೆ ಎಲ್ಲಾ ಅರ್ಹತೆ ಇದೆ. ಶಿರಾ ನಗರದ ಸುತ್ತಮುತ್ತ ಸುಮಾರು 2500 ಎಕರೆ ಸರಕಾರಿ ಜಮೀನು ಇದೆ. ಈ ಜಾಗವನ್ನು ಹೊಸ ಸರಕಾರಿ ಕಚೇರಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಗೆ ಬಳಸಿಕೊಳ್ಳಬಹುದು. ಶಿರಾ ನಗರಕ್ಕೆ ಹೇಮಾವತಿ, ಭದ್ರಮೇಲ್ದಂಡೆ, ಎತ್ತಿನಹೊಳೆ ಯೋಜನೆಯ ನೀರು ಸರಬರಾಜು ಆಗಲು ವ್ಯವಸ್ಥೆ ಮಾಡಲಾಗಿದೆ. ಶಿರಾದ 10 ಕಿ.ಮೀ. ವ್ಯಾಪ್ತಿಯಲ್ಲಿ ಮದಲೂರು ಕೆರೆ, ಚಿಕ್ಕಸಂದ್ರ ಕೆರೆ, ಕಳ್ಳಂಬೆಳ್ಳ ಕೆರೆ, ಶಿರಾ ದೊಡ್ಡ ಕೆರೆ ಸೇರಿದಂತೆ ನಾಲ್ಕು ದಿಕ್ಕುಗಳಲ್ಲೂ ಕೆರೆಗಳಿದ್ದು, ನೀರಿನ ಸಮಸ್ಯೆ ಇಲ್ಲ. ಹಾಗಾಗಿ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು.
– ಹೆಚ್.ಗುರುಮೂರ್ತಿ ಗೌಡ, ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳು, ಶಿರಾ.
**
ಮಧುಗಿರಿ V/S ತಿಪಟೂರು ಜಿಲ್ಲಾ ಕೇಂದ್ರ: ಮಹತ್ವದ ಘೋಷಣೆ ಮಾಡಿದ ಸಿಎಂ
ಶಿರಾದಲ್ಲಿ ಯುಜಿಡಿ ಕಾಮಗಾರಿ ಆಗಿದ್ದು, ಜಿಲ್ಲೆಯಲ್ಲಿ ಬೇರೆಲ್ಲೂ ಆಗಿಲ್ಲ. ರಸ್ತೆ, ಕುಡಿಯುವ ನೀರು, ಉತ್ತಮ ಭೌಗೋಳಿಕ ಪ್ರದೇಶ ಹೊಂದಿದೆ. ಶಿರಾವನ್ನು ಜಿಲ್ಲಾ ಕೇಂದ್ರ ಮಾಡಿದರೆ ಜನತೆಗೆ ಉತ್ತಮ ಆಡಳಿತ ನೀಡಲು ಎಲ್ಲಾ ರೀತಿಯಲ್ಲಿಯೂ ಅನುಕೂಲವಾಗಲಿದೆ.
– ಸಿ.ಆರ್.ಉಮೇಶ್, ಜಿ.ಪಂ ಮಾಜಿ ಸದಸ್ಯರು
(ಮಾಹಿತಿ: ಎನ್.ದೇವರಾಜ್, ಶಿರಾ)
+ There are no comments
Add yours