‘ಚಂದ್ರಯಾನ’ ಅಭೂತಪೂರ್ವ ಯಶಸ್ಸಿನ ನಂತರ: ಸ್ವಾಮಿ ವೀರೇಶಾನಂದ ಸರಸ್ವತೀ ಅವರ ವಿಶೇಷ ಲೇಖನ: ಓದಿ

1 min read

ಸ್ವಾಮಿ ವೀರೇಶಾನಂದ ಸರಸ್ವತೀ
ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು

Sir, India is on Moon….” ಎಂದು ‘ಸೋಮ’ನ ಅಂಗಳದಲ್ಲಿ ‘ವಿಕ್ರಮ’ ಸಾಧಿಸಿದ ಐತಿಹಾಸಿಕ ಕ್ಷಣದ ವರದಿಯನ್ನು ಮನೆಯ ಹಿರಿಯನಿಗೆ ಕೊಟ್ಟದ್ದು ಇಸ್ರೋ ಅಧ್ಯಕ್ಷ ‘ಸೋಮನಾಥ’ ಎನ್ನುವುದು ನನ್ನ ಅಭಿಪ್ರಾಯದಲ್ಲಿ ಕಾಕತಾಳೀಯವಂತೂ ಅಲ್ಲ. ಅದು ಆ ‘ಸೋಮನಾಥ’ನದ್ದೇ ಕೃಪೆ. ಈ ನಮ್ಮ ವಿಜ್ಞಾನಿಗಳ ಪರಿಶ್ರಮ, ಧೈರ್ಯ, ಶ್ರದ್ಧೆ, ಜೀವಂತಿಕೆ, ಭಾವನೆಗಳಿಗೆ ಸ್ವತಃ ಪ್ರಧಾನಿಯವರೇ ಸಲ್ಯೂಟ್ ಅರ್ಪಿಸಿದ್ದು ನಮ್ಮೆಲ್ಲರ ಭಾವನೆಗಳ ಅಭಿವ್ಯಕ್ತಿಯೇ ಹೌದು. ಡಾ. ಸೋಮನಾಥರ ಈ ಪಡೆಯ ಬದ್ಧತೆ, ಕಾರ್ಯಕ್ಷಮತೆ, ಆತ್ಮವಿಶ್ವಾಸ, ರೀತಿ, ನೀತಿ ಹಾಗೂ ಇವೆಲ್ಲಕ್ಕೂ ಕಳಸವಿಟ್ಟಂತೆ ನೂರಕ್ಕೆ ನೂರರಷ್ಟು ತಮ್ಮ ಪ್ರಯತ್ನದ ಬಗ್ಗೆ ವಿಶ್ವಾಸ ಇದ್ದರೂ ಅಂತಿಮ ಯಶಸ್ಸಿನ ವಿಷಯವಾಗಿ ಭಗವತ್ಕøಪೆಗೆ ಮೊರೆ ಹೋದದ್ದು, ಅಭೂತಪೂರ್ವ ಯಶಸ್ಸಿನ ನಂತರ ಗಾಂಭೀರ್ಯದಿಂದ ಕೂಡಿದ ಅವರ ಪ್ರಬುದ್ಧವಾದ ಪ್ರತಿಕ್ರ್ರಿಯೆ ಇದೆಲ್ಲವೂ ಸಮಾಜಕ್ಕೆ ಅನೇಕ ಪಾಠಗಳನ್ನು ರವಾನಿಸುತ್ತಿದೆ.
ಮೊದಲನೆಯದಾಗಿ, ಮತ್ತೊಬ್ಬರ ಸಮಸ್ಯೆ, ಸವಾಲು ಹಾಗೂ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಅವರನ್ನು ಟೀಕಿಸುವುದು ಬುದ್ಧಿಗೇಡಿತನ. ಪರರ ಗುಣ ಅಥವಾ ಸ್ವಭಾವವನ್ನು ಗುರುತಿಸಿ ಗೌರವಿಸುವ ಯೋಗ್ಯತೆ ನಮ್ಮ ವಿಕಾಸವನ್ನೇ ಎತ್ತಿ ಹಿಡಿದಂತೆ. ‘ಪರರ ಸದ್ಗುಣಗಳು ಪರಮಾಣುವಿನಷ್ಟಿದ್ದರೂ ಪರ್ವತದಷ್ಟು ಶ್ಲಾಘಿಸು’ ಎಂದರು ನಿಜಗುಣ ಶಿವಯೋಗಿ.
ವಿಜ್ಞಾನದಲ್ಲಿ ಕನಿಷ್ಠ ಅಂಕಗಳನ್ನು ಪಡೆಯಲೂ ಹೆಣಗಾಡಿ ಸೋತವರ ವೈಜ್ಞಾನಿಕ ಮನೋಭಾವ(!?)ದ ನಿರಾಧಾರ ಟೀಕೆಗಳಿಗೆ ತಮ್ಮ ಸಾಧನೆಯ ಮೂಲಕ ಉತ್ತರಿಸುತ್ತಿರುವ ಕರ್ಮಯೋಗಿಗಳು ಈ ನಮ್ಮ ವಿಜ್ಞಾನಿಗಳು. ಆ ಮೂಲಕ ಅರ್ಥವಿಲ್ಲದ ಬಡಬಡಿಕೆಗೆ ಉತ್ತರಕೊಡುತ್ತಾ ಕೂತಲ್ಲಿ ಸಾಧನೆಗೆ ಸಮಯವೇ ಇರದು ಎಂಬ ಪಾಠವನ್ನು ಸಮಾಜಕ್ಕೆ ರವಾನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ‘ಮೂರ್ಖರೊಡನೆ ಹೆಚ್ಚು ವಾದ ಮಾಡಿದರೆ ಮೂರ್ಖರು ಯಾರು ಎಂಬ ಅನುಮಾನ ಹೆಚ್ಚುತ್ತದೆ’ ಎಂಬ ಸುಭಾಷಿತ ಸ್ಮರಣೀಯ.
ಎರಡನೆಯದಾಗಿ, ಐಐಟಿಯಂತಹ ಅತ್ಯುನ್ನತ ಶಿಕ್ಷಣವನ್ನೂ ಅತ್ಯಂತ ಸಾಧಾರಣ ಎನಿಸುವ ಖರ್ಚಿನಲ್ಲಿ ಮುಗಿಸುವವರೆಗೂ ಕಾಣದಿದ್ದ ಕುಂದು ಕೊರತೆಗಳೆಲ್ಲವೂ ಪದವಿ ಪಡೆದೊಡನೆ ನಮ್ಮ ಮಕ್ಕಳಿಗೆ ಬೃಹದಾಕಾರವಾಗಿ, ಸಹಿಸಲಸಾಧ್ಯವಾಗಿ ಕಾಣತೊಡಗಿ, ‘ಈ ದೇಶದಲ್ಲಿ ಪ್ರತಿಭೆಗೆ ಮನ್ನಣೆ ಇಲ’್ಲ ಎನ್ನುವ ಸೋಗು ಹಾಕಿ ವಿದೇಶಗಳಿಗೆ ಪಲಾಯನಗೈಯುವ ಯುವಕರಿಗೆ ನಮ್ಮ ವಿಜ್ಞಾನಿಗಳು ತಮ್ಮ ವಿಶ್ವಮಾನ್ಯ ಸಾಧನೆಯ ಮೂಲಕ ಕಲಿಸುತ್ತಿರುವ ಪಾಠ ವರ್ಣಿಸಲಸದಳ. ಯಾವ ಪರಿಸರ ಪರಿಸ್ಥತಿಗಳನ್ನು ದೂರುತ್ತಾ ಒಂದಷ್ಟು ಯುವಕರು ದೇಶ ಬಿಟ್ಟು ಹೋಗುತ್ತಿದ್ದಾರೋ ಅದೇ ಪರಿಸರ ಪರಿಸ್ಥಿತಿಗಳಲ್ಲಿ ಹೊತ್ತ ನೆಲದ ಕೀರ್ತಿಯನ್ನು ಬಾನೆತ್ತರಕ್ಕೆ……….ಚಂದಿರನವರೆಗೆ ಹೊತ್ತೊಯ್ದ ಕೀರ್ತಿ ನಮ್ಮ ಹೆಮ್ಮೆಯ ವಿಜ್ಞಾನಿಗಳದ್ದು.
ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ‘ಧರ್ಮವೆಂಬುದು ಮಾನವ ಮನಸ್ಸಿನ ಸಂವಿಧಾನಾತ್ಮಕ ಅವಶ್ಯಕತೆ. ಮಾನವನು ಎಲ್ಲೇ ಇದ್ದರೂ, ನಂಬಿಕೆಯನ್ನು ಆಶ್ರಯಿಸಿ ವೃದ್ಧಿಸಿಕೊಳ್ಳಲೇಬೇಕು. ಅಲ್ಲದೇ ತಮ್ಮಲ್ಲಿ ಸುಪ್ತವಾಗಿರುವ ಧಾರ್ಮಿಕ ಪ್ರವೃತ್ತಿಯನ್ನು ಊರ್ಜಿತಗೊಳಿಸಿಕೊಳ್ಳಲೇಬೇಕು.’ ಈ ಮಾತಿಗೆ ಪುಷ್ಠಿ ನೀಡುವಂತಿದೆ ಸುಪ್ರಸಿದ್ಧ ಚಿಂತಕ ವಾಟ್ಸ್ ಕನಿಂಗ್‍ಹ್ಯಾಮ್‍ರವರ ಅಭಿಮತ: ‘ಮಾನವ ಜನಾಂಗವು ಸ್ವಭಾವತಃ ಧಾರ್ಮಿಕಪ್ರವೃತ್ತಿಯನ್ನು ಉಳ್ಳದ್ದು. ಭೌಗೋಳಿಕವಾಗಿ ಅವನು ಎಲ್ಲೇ ಇದ್ದರೂ, ಅವನ ನಾಗರೀಕತೆಯ ಮಟ್ಟ ಅದೆಷ್ಟೇ ಇದ್ದರೂ, ಧಾರ್ಮಿಕ ನಂಬಿಕೆಗಳು ಮತ್ತು ತತ್ಸಂಬಂಧವಾದ ವಿಧಿವಿಧಾನಗಳು ಅವನಲ್ಲಿ ಮನೆ ಮಾಡಲೇಬೇಕು.’
ಇಡೀ ದೇಶದ ಮೂಲೆ ಮೂಲೆಯ ಹಳ್ಳಿಗಳ ಬಡರೈತರಿಂದ ಹಿಡಿದು ನಮ್ಮ ದೇಶದ ಮತ್ತೊಂದು ಹೆಮ್ಮೆಯಾದ ಸೈನಿಕಪಡೆಯವರೆಗೂ ಚಂದ್ರಯಾನದ ಯಶಸ್ಸಿಗಾಗಿ ಸರ್ವಶಕ್ತನಾದ ಭಗವಂತನ ಮೊರೆ ಹೋದದ್ದು ಮತ್ತು ಬೇಡಿದ ಯಶಸ್ಸು ದೊರೆತ ನಂತರ ಇಡೀ ದೇಶ ಒಂದಾಗಿ ಸಂಭ್ರಮಿಸಿದ್ದು ಎಂತಹ ನಿರ್ಲಿಪ್ತರನ್ನೂ ಭಾವುಕರನ್ನಾಗಿಸಿದ್ದು ಎಷ್ಟು ಸತ್ಯವೋ ಹಾಗೆಯೇ ನಾಲ್ಕು ವರ್ಷಗಳ ಹಿಂದೆ ಕೊನೆಯ ಕ್ಷಣದಲ್ಲಿ ಚಂದ್ರಯಾನ-2 ವಿಫಲವಾಗಿ ಅಂದಿನ ಇಸ್ರೋ ಅಧ್ಯಕ್ಷ ಶ್ರೀ ಶಿವನ್ ಅವರು ಹತಾಶರಾಗಿ ಕಂಬನಿ ತುಂಬಿಕೊಂಡಾಗ ಇಡೀ ದೇಶವಾಸಿಗಳ ಪರವಾಗಿ ಖುದ್ದು ಪ್ರಧಾನಿಯೇ ಅವರನ್ನು ತಬ್ಬಿ ‘ದೇಶ ನಿಮ್ಮೊಂದಿಗಿದೆ, ಕುಗ್ಗಬೇಡಿ ಮುನ್ನುಗ್ಗಿ’ ಎಂದು ಸಂತೈಸಿ ಆತ್ಮಸ್ಥೈರ್ಯ ತುಂಬಿ ‘ಸೋಲು ತಬ್ಬಲಿ’ ಎನ್ನುವ ಮಾತನ್ನು ಸುಳ್ಳಾಗಿಸಿದ್ದೂ ಅಷ್ಟೇ ಸತ್ಯ. ಮನೆಯ ಜನಗಳ ಮತ್ತು ಮನೆಯ ಹಿರಿಯರ ಈ ನಡೆ ‘ಲೋಕಹಿತದ ಕಾರ್ಯಕ್ಕೆ ಜಗತ್ತು ಎಂದಿಗೂ ಕೈಜೋಡಿಸುತ್ತದೆ’ ಎಂಬ ಭಾರತೀಯರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ರಾಮ, ಕೃಷ್ಣರ ಈ ನೆಲದಲ್ಲಿಯೇ ಮಂಥರೆ, ದುರ್ಯೋಧನ, ದುಶ್ಯಾಸನ, ಶಕುನಿಯರೂ ಇದ್ದರು ಮತ್ತು ಲೋಕಕಂಟಕರಾಗಿ ಸಜ್ಜನರ ಸತ್ಕಾರ್ಯಗಳಿಗೆ ತಾತ್ಕಾಲಿಕ ಹಿನ್ನಡೆ ಉಂಟುಮಾಡುವ, ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಅವರು ಮಾಡಿದರೂ ಅಂತಿಮ ಗೆಲುವು ಸರ್ವಜನಹಿತ ಬಯಸುವವರದ್ದೇ ಅಗಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಶತಮಾನಗಳ ಕಾಲ ನಿರಂತರ ದಾಳಿಗೆ ಒಳಗಾಗಿದ್ದರೂ ಅದನ್ನು ಮೆಟ್ಟಿನಿಂತು ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವ ಅಂತಃಶಕ್ತಿ ಭಾರತೀಯರದ್ದು. ಇದನ್ನೇ ವಿಶ್ವವಿಖ್ಯಾತ ಇತಿಹಾಸಜ್ಞ ಆರ್ನಾಲ್ಡ್ ಟಾಯನ್‍ಬಿ, ‘ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವು ತನ್ನನ್ನು ಜಯಿಸಿದವರನ್ನು ಜಯಿಸುತ್ತದೆ, ಆದರೆ ರಾಜಕೀಯವಾಗಿ ಅಲ್ಲ, ಆಧ್ಯಾತ್ಮಿಕವಾಗಿ’ ಎಂದದ್ದು.
ಇತ್ತೀಚೆಗೆ ಇಸ್ರೋ ಅಧ್ಯಕ್ಷರಾದ ಶ್ರೀ ಸೋಮನಾಥ್‍ರವರು, ಅಗೆದಷ್ಟೂ ಜ್ಞಾನದ ಆಳಕ್ಕೆ ಕೊಂಡೊಯ್ಯುವ ವೇದ-ಉಪನಿಷತ್ತುಗಳ ಬಗ್ಗೆ ವಿಸ್ತøತವಾಗಿ ಪ್ರಸ್ತಾಪಿಸಿದ್ದಾರೆ.
ಇಂತಹ ಭವ್ಯ ಇತಿಹಾಸವಿರುವ ನಾಡು ಎಷ್ಟು ದಿನ ನಿದ್ರಿಸಲು ಸಾಧ್ಯ? ಈಗ ನಾವು ಆಂಜನೇಯರೇ ಸರಿ!
(ಚಿತ್ರ: ಸ್ವಾಮಿ ವೀರೇಶಾನಂದ ಸರಸ್ವತಿರವರೊಂದಿಗೆ ಇಸ್ರೋ ಮುಖ್ಯಸ್ಥ ಡಾ. ಸೋಮನಾಥ್)

About The Author

You May Also Like

More From Author

+ There are no comments

Add yours