ಗೃಹಲಕ್ಷ್ಮಿ ಯೋಜನೆ- ಅರ್ಹ ಯಜಮಾನಿ ಮಹಿಳೆಯರ ಖಾತೆಗೆ ಇಂದು ನೇರ ನಗದು ವರ್ಗಾವಣೆ
Tumkurnews
ತುಮಕೂರು: ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 5.80ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದು, ಕುಟುಂಬದ ಯಜಮಾನಿ ಮಹಿಳೆಗೆ ಮಾಸಿಕ 2,000 ರೂ.ಗಳಂತೆ ಜಿಲ್ಲೆಯ ಅರ್ಹ ಫಲಾನುಭವಿಗಳ ಖಾತೆಗಿಂದು ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.
‘ಚಂದ್ರಯಾನ’ ಅಭೂತಪೂರ್ವ ಯಶಸ್ಸಿನ ನಂತರ: ಸ್ವಾಮಿ ವೀರೇಶಾನಂದ ಸರಸ್ವತೀ ಅವರ ವಿಶೇಷ ಲೇಖನ: ಓದಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಮೈಸೂರಿನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದ ಅವರು, ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗಿಂದು ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಜಮೆ ಮಾಡಲಾಗಿದ್ದು, ಉಳಿದ ಫಲಾನುಭವಿಗಳಿಗೆ ಹಂತ ಹಂತವಾಗಿ ಇಂದು ಸಂಜೆ ಒಳಗಾಗಿ ಡಿಬಿಟಿ ಮೂಲಕ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ ಶೇ.87ರಷ್ಟು ಕುಟುಂಬದ ಯಜಮಾನಿ ಮಹಿಳೆಯರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಇನ್ನುಳಿದ ಶೇ.13ರಷ್ಟು ಮಹಿಳೆಯರನ್ನು ಯೋಜನೆಯಡಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವ ಫಲಾನುಭವಿಗಳು ನೋಂದಣಿಯಾಗದಿದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವಂತೆ ಅವರಿಗೆ ಅರಿವು ಮೂಡಿಸಬೇಕೆಂದು ಸೂಚಿಸಲಾಗಿದೆ ಎಂದ ಅವರು, ಯಾವ ಫಲಾನುಭವಿ ಖಾತೆ ಹೊಂದಿರುವುದಿಲ್ಲವೋ ಅವರಿಗೆ ಹತ್ತಿರದ ಬ್ಯಾಂಕ್‍ಗಳಲ್ಲಿ ಖಾತೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಫ್ಯಾಷನ್ ಡಿಸೈನರ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಪ್ರತಿ ಮಹಿಳೆಯರು ಈ ಯೋಜನೆಯಡಿ ಅರ್ಹ ಫಲಾನುಭವಿಗಳಾಗಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ದೊರಕುವಂತೆ ಮಾಡಿ ಬಡತನ ತೊಲಗಿಸಲು ಹಾಗೂ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒಂದು ಉತ್ತಮ ಯೋಜನೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೋಂದಣಿ ಕೇಂದ್ರಗಳಲ್ಲಿ ಯಾವುದೇ ಲೋಪಗಳು ಬಾರದಿರುವ ರೀತಿ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದರು.
ಒಂದು ವೇಳೆ ಅರ್ಹ ಫಲಾನುಭವಿಗಳು ಸದರಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಲು ಆಗದೇ ಇರುವಂತಹ ಸಂದರ್ಭದಲ್ಲಿ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರ ಮೂಲಕ ಅರ್ಜಿಗಳನ್ನು ಫಲಾನುಭವಿಗಳ ಮನೆಯ ಬಾಗಿಲಿನಲ್ಲಿಯೇ ನೋಂದಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
ಸರ್ಕಾರ ಜಾರಿಗೆ ತಂದಿರುವ ಉಳಿದ ಮೂರು ಯೋಜನೆಗಳಾದ ಅನ್ನಭಾಗ್ಯ, ಶಕ್ತಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಅಂಗನವಾಡಿ ಹಾಗೂ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿಇಓ ಅವರು ನೀಲನಕ್ಷೆಯನ್ನು ತಯಾರಿಸಿದ್ದು, ಆದ್ಯತೆ ಮೇರೆಗೆ ಸಿಎಸ್‍ಆರ್ ಅನುದಾನದಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಪ್ರಭಾವತಿ, ಉಪಮೇಯರ್ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ, ಉಪವಿಭಾಗಾಧಿಕಾರಿ ಗೌರವ್‍ಕುಮಾರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಧಿಕಾರಿ ಪವಿತ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಲೋಕಾಯುಕ್ತ ದಾಳಿ; ಲಂಚ ಸಮೇತ ಸಿಕ್ಕಿಬಿದ್ದ ಜೈಲು ಅಧೀಕ್ಷಕ
+ There are no comments
Add yours