ಹೆಣ್ಣಿನ ಧ್ವನಿಗೆ ಮನಸೋತು 41 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ!
ತುಮಕೂರು ಜಿಲ್ಲೆಯ ಹುಡುಗನ ಖತರ್ನಾಕ್ ಕ್ರೈಂ ಸ್ಟೋರಿ
Tumkurnews.in
ಬೆಂಗಳೂರು/ರಾಮನಗರ; ಹುಡುಗಿ ಧ್ವನಿಯಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲಾಕ್‌ಮೇಲ್ ಮಾಡಿ 41 ಲಕ್ಷ ರೂ.ಗಳನ್ನು ವಂಚಿಸಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕ ರವಿಕುಮಾರ್ (24) ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಮೂಲದವನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದನು. ಈತನನ್ನು ಟವರ್ ಲೊಕೇಶನ್ ಆಧರಿಸಿ ರಾಮನಗರ ಪೊಲೀಸರು ಬೆಂಗಳೂರಿನ ದಾಸರಹಳ್ಳಿಯ ಪಿಜಿಯೊಂದರಲ್ಲಿ ಬಂಧಿಸಿದ್ದಾರೆ.
ಹುಡುಗಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದ ರವಿಕುಮಾರ್, ತನ್ನ ಬಲೆಗೆ ಬೀಳುವ ಪುರುಷರ ಮೊಬೈಲ್ ನಂಬರ್ ಪಡೆದು ಹೆಣ್ಣಿನ ಧ್ವನಿಯಲ್ಲಿ ಮಾತನಾಡುತ್ತಿದ್ದನು. ಬಳಿಕ ಸ್ನೇಹ ಸಂಪಾದಿಸಿ ನಾನಾ ಕಾರಣಗಳನ್ನು ಹೇಳಿ ಹಣ ಪಡೆಯುತ್ತಿದ್ದನ್ನು. ಇಂತದ್ದೇ ಪ್ರಕರಣವೊಂದರಲ್ಲಿ ವಂಚನೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ರಾಮನಗರ ಸಿಇಎನ್(ಸೈಬರ್ ಅಪರಾಧ) ಠಾಣೆ ಪೊಲೀಸರು ರವಿಕುಮಾರ್’ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೆಕ್ನಿಕಲ್ಲಿ ಟ್ಯಾಲೆಂಟ್!; ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಗ್ಗೇರಿಯ ರವಿಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದನು. ಪಿಯುಸಿವರೆಗೆ ಓದಿಕೊಂಡಿದ್ದ ಆತ ಖಾಸಗಿ ಡೇಟಾ ಬೇಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ತಂತ್ರಜ್ಞಾನ ಬಳಕೆಯಲ್ಲಿ ನಿಪುಣನಾಗಿದ್ದ ಆತನಿಗೆ ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಇತ್ತು. ಇದನ್ನೇ ಬಂಡವಾಳ ಮಾಡಿಕೊಂಡ ರವಿಕುಮಾರ್ ತನ್ನ ಪ್ರತಿಭೆಯನ್ನು ಮತ್ತೊಬ್ಬರಿಗೆ ಮೋಸ ಮಾಡಲು ಬಳಸಿಕೊಂಡು ಇದೀಗ ಕಂಬಿ ಎಣಿಸುತ್ತಿದ್ದಾನೆ.
ಗೀತಾ ಸೆಕ್ಸಿ ಹೆಸರಲ್ಲಿ ಅಕೌಂಟ್; ರವಿಕುಮಾರ್ ಸೋಶಿಯಲ್ ಮೀಡಿಯಾಗಳಲ್ಲಿ ಗೀತಾ ಸೆಕ್ಸಿ ಎಂಬ ಖಾತೆ ಹೊಂದಿದ್ದನು. ಗೂಗಲ್’ನಲ್ಲಿ ಸಿಗುವ ಸುಂದರ ಯುವತಿಯರ ಫೋಟೋಗಳನ್ನು ತನ್ನ ಗೀತಾ ಸೆಕ್ಸಿ ಎಂಬ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಮಿಕಗಳನ್ನು ಸೆಳೆಯುತ್ತಿದ್ದನು. ಶ್ರೀಮಂತರಂತೆ ಕಾಣುವ ಪುರುಷರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಸ್ನೇಹ ಸಂಪಾದಿಸುತ್ತಿದ್ದನು. ಬಳಿಕ ಯುವಕರೊಂದಿಗೆ ಲೈಂಗಿಕತೆಯ ಬಗ್ಗೆ ಚಾಟ್ ಮಾಡಿ ಅವರನ್ನು ತನ್ನ ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು. ಮೊಬೈಲ್ ನಂಬರ್ ಪಡೆದು ಹೆಣ್ಣಿನಂತೆ ಮಾತನಾಡಿ ಅವರನ್ನು ನಂಬಿಸುತ್ತಿದ್ದನು. ಬಳಿಕ ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪೀಕುತ್ತಿದ್ದನು.
41 ಲಕ್ಷ ಕಳೆದುಕೊಂಡ ವ್ಯಕ್ತಿ!; ರವಿಕುಮಾರನ ಬಲೆಗೆ ಬಿದ್ದಿದ್ದ ಹಾರೋಹಳ್ಳಿಯ ರಾಜೇಶ್ ಎಂಬುವವರನ್ನು ಮದುವೆಯಾಗುವುದಾಗಿಯೂ ನಂಬಿಸಿದ್ದನು. ಈತನ ಮಾತನ್ನು ನಂಬಿದ್ದ ರಾಜೇಶ್, ಆತ ಕೇಳಿದಾಗಲೆಲ್ಲ ಹಂತಹಂತವಾಗಿ ಡಿಜಿಟಲ್ ಪೇ ಮುಖಾಂತರ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಭೇಟಿಯಾಗಲು ನಿರಾಕರಿಸುತ್ತಿದ್ದರಿಂದ ಅನುಮಾನಗೊಂಡು ಹಣ ನೀಡಲು ನಿರಾಕರಿದ್ದಾರೆ. ಆಗ ರವಿಕುಮಾರನು ರಾಜೇಶ್’ರ ಫೋಟೋ ಎಡಿಟ್ ಮಾಡಿ ಅಶ್ಲೀಲಗೊಳಿಸಿ ಅವರ ವಾಟ್ಸಾಪ್’ಗೆ ಕಳುಹಿಸಿ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ. ಇದರಿಂದ ರೋಸಿಹೋದ ರಾಜೇಶ್, ಕೊನೆಗೆ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಆರೋಪಿ ರವಿಕುಮಾರ್ @ ಗೀತಾ ಸೆಕ್ಸಿಯನ್ನು ಬಂಧಿಸಿ, ಆತನ ಆಟಕ್ಕೆ ಕಡಿವಾಣ ಹಾಕಿದ್ದಾರೆ.
ನೀವೂ ಹುಷಾರ್!; ರವಿಕುಮಾರ್ ತೋಡಿದ್ದ ಖಡ್ಡಾಗೆ ಬಿದ್ದಿದ್ದ ರಾಜೇಶ್ ಕೇವಲ 6 ತಿಂಗಳಲ್ಲಿ 41 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಯಾವುದೇ ಅಪರಿಚಿತ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.
(ಚಿತ್ರ; ಆರೋಪಿ ರವಿಕುಮಾರ್ @ ಗೀತಾ ಸೆಕ್ಸಿ)
+ There are no comments
Add yours