ರಾಜ್ಯದಲ್ಲಿ ಮೆಡಿಕಲ್ ಸೀಟು ಶುಲ್ಕ ಶೇ.10 ಹೆಚ್ಚಳ! ಯಾವುದಕ್ಕೆಲ್ಲಾ ಅನ್ವಯ? ಇಲ್ಲಿದೆ ಮಾಹಿತಿ

1 min read

 

ರಾಜ್ಯದಲ್ಲಿ ಮೆಡಿಕಲ್ ಸೀಟು ಶುಲ್ಕ ಶೇ.10 ಹೆಚ್ಚಳ! ಯಾವುದಕ್ಕೆಲ್ಲಾ ಅನ್ವಯ? ಇಲ್ಲಿದೆ ಸಂಪೂರ್ಣ ಮಾಹಿತಿ

Tumkurnews.in
ಬೆಂಗಳೂರು; ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್ ಈಗ ಮತ್ತಷ್ಟು ದುಬಾರಿಯಾಗಿದೆ. ವೈದ್ಯ ಕೋರ್ಸ್’ಗಳಲ್ಲಿನ ಖಾಸಗಿ ಕೋಟಾ ಶುಲ್ಕ ಶೇ.10ರಷ್ಟು ಹೆಚ್ಚಳವಾಗಿದೆ.
ರಾಜ್ಯದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಶೇ.10 ರಷ್ಟು ಹೆಚ್ಚಳ ಮಾಡಲು ಸರ್ಕಾರ ಅನುಮತಿಸಿದೆ. ಈ ಅನುಮತಿ ಆದೇಶವು ಅಲ್ಪಸಂಖ್ಯಾತ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ-ದಂತ ವೈದ್ಯಕೀಯ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ.
ಸರ್ಕಾರಿ ಕೋಟಾ ಕಥೆ ಏನು?; ಅದೃಷ್ಟವಶಾತ್ ಯಾವುದೇ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಯಾವುದೇ ಶುಲ್ಕ ಹೆಚ್ಚಳ ಮಾಡಿಲ್ಲ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಹಿಂದಿನ ವರ್ಷಗಳಂತೆ ಈ ವರ್ಷವೂ ಆಗಿರುವ ಒಪ್ಪಂದದಂತೆ 2023-24 ನೇ ಸಾಲಿನ ಶುಲ್ಕ ನಿಗದಿ ಕುರಿತು ಇತ್ತೀಚೆಗೆ ಆದೇಶ ಮಾಡಲಾಗಿದೆ. ಅದರಂತೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ (ಕೆಪಿಸಿಎಫ್)ಸದಸ್ಯ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕದಲ್ಲಿ ಮಾತ್ರ ಶೇ.10 ಏರಿಕೆ ಮಾಡಲಾಗಿದೆ.
ಶುಲ್ಕ ಎಷ್ಟಾಗುತ್ತದೆ?; ಶುಲ್ಕ ಹೆಚ್ಚಳದಿಂದಾಗಿ ಕಳೆದ ಸಾಲಿನಲ್ಲಿ 9,81,956 ರೂ. ಇದ್ದ ಖಾಸಗಿ ಕೋಟಾದ ವೈದ್ಯಕೀಯ ಸೀಟುಗಳ ಶುಲ್ಕ ಈಗ 10,80,152 ರೂ.ಗೆ ಏರಿಕೆಯಾಗಿದೆ. ಅದೇ ರೀತಿ 6,66,023 ರೂ. ಇದ್ದ ಖಾಸಗಿ ಕೋಟಾದ ದಂತ ವೈದ್ಯಕೀಯ ಕೋರ್ಸುಗಳ ಶುಲ್ಕ ಈಗ 7,32,625 ರೂ.ಗೆ ಏರಿಕೆಯಾಗಿದೆ.
ಶೇ.20ಕ್ಕೆ ಬೇಡಿಕೆ ಇತ್ತು!; ಹಿಂದಿನ ವರ್ಷ ಖಾಸಗಿ ಕೋಟಾ ಸೀಟುಗಳ ಶುಲ್ಕವನ್ನು ಏರಿಕೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷ ಶೇ.20 ರಷ್ಟು ಶುಲ್ಕ ಹೆಚ್ಚಳಕ್ಕೆ ಕಾಲೇಜುಗಳ ಬೇಡಿಕೆ ಇತ್ತು. ಆದರೆ ಸರ್ಕಾರ ಶೇ.10ರಷ್ಟು ಶುಲ್ಕ ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ನೀಡಿದೆ.
ಸರ್ಕಾರಿ ಕೋಟಾ ಶುಲ್ಕ ಏರಿಕೆ ಮಾಡಿಲ್ಲ: ಸರ್ಕಾರಿ ಕಾಲೇಜುಗಳಲ್ಲಿನ ಸೀಟುಗಳು ಹಾಗೂ ಇನ್ನುಳಿದ ಎಲ್ಲಾ ಮಾದರಿ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳ ಶುಲ್ಕದಲ್ಲಿ ಯಥಾಸ್ಥಿತಿ ಇರಲಿದೆ. ಅದರಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳಿಗೆ ಕಳೆದ ಸಾಲಿನಂತೆ 50 ಸಾವಿರ ರೂ.ಮತ್ತು ದಂತ ವೈದ್ಯಕೀಯ ಸೀಟುಗಳಿಗೆ 40 ಸಾವಿರ ರೂ. ಇರಲಿದೆ. ಇತರೆ ಖಾಸಗಿ ಕಾಲೇಜುಗಳು ಮತ್ತು ಖಾಸಗಿ ವಿವಿಗಳಲ್ಲಿನ ಸರ್ಕಾರಿ ಕೋಟಾದ ವೈದ್ಯ ಸೀಟುಗಳಿಗೆ 1,28,746 ರೂ. ಮತ್ತು ದಂತ ವೈದ್ಯ ಸೀಟುಗಳಿಗೆ 83,358 ರೂ. ಶುಲ್ಕ ಯಥಾ ಸ್ಥಿತಿಯಲ್ಲಿರುತ್ತದೆ.
ಖಾಸಗಿ ವಿವಿಗಳಿಗೆ ಅನ್ವಯಿಸಲ್ಲ; ರಾಜ್ಯ ಸರ್ಕಾರದೊಂದಿಗೆ ಯಾವುದೇ ಒಡಂಬಡಿಕೆಗೆ ಒಳಪಡದ ವಿವಿಧ ಖಾಸಗಿ ವಿಶ್ವವಿದ್ಯಾಲಯಗಳ ಖಾಸಗಿ ಕೋಟಾ ಸೀಟುಗಳ ಶುಲ್ಕವನ್ನು ಆಯಾ ವಿವಿಗಳು ನಿಗದಿಪಡಿಸಿ ನೀಡಿರುವಂತೆ ಸರ್ಕಾರ ಪ್ರಕಟಿಸಿದೆ. ಹಾಗಾಗಿ ಬೆಂಗಳೂರಿನ ಡಾ.ಚಂದ್ರಮ್ಮ ದಯಾನಂದಸಾಗರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್‌ನಲ್ಲಿ (ಸಿಡಿಎಸ್‍ಎನ್‍ಇಆರ್) ಖಾಸಗಿ ಕೋಟಾ ಸೀಟಿಗೆ 20 ಲಕ್ಷ ರೂ., ಎನ್‍ಆರ್ ಐ ಹಾಗೂ ಇತರೆ ಕೋಟಾ ಸೀಟಿಗೆ 40 ಲಕ್ಷ ರೂ. ಶುಲ್ಕ, ಬೆಂಗಳೂರಿನ ಸೇಂಟ್ ಜಾನ್ಸ್ ವಿವಿಯ ಖಾಸಗಿ ಕೋಟಾ ಸೀಟುಗಳಿಗೆ 7.76 ಲಕ್ಷ ರೂ. ಶುಲ್ಕ, ನಾಗಮಂಗಲದ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಎಂಎಸ್)ನ ಖಾಸಗಿ ಕೋಟಾ ಸೀಟುಗಳ ಶುಲ್ಕ 20 ಲಕ್ಷ ರೂ. ಎನ್ ಆರ್ ಐ ಹಾಗೂ ಇತರೆ ಕೋಟಾ ಸೀಟಿಗೆ 36 ಲಕ್ಷ ರೂ. ಶುಲ್ಕ, ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಮೆಡಿಕಲ್ ನಲ್ಲಿ(ಎಸ್‍ಡಿಎಂ)ಖಾಸಗಿ ಕೋಟಾ ಸೀಟಿಗೆ 20 ಲಕ್ಷ ರೂ., ಎನ್ ಆರ್ ಐ ಹಾಗೂ ಇತರೆ ಕೋಟಾಗೆ 30 ಲಕ್ಷ ರೂ. ಶುಲ್ಕ, ಕಲಬುರಗಿಯ ಖಾಜಾ ಬಂದನವಾಜ್ ವಿಶ್ವವಿದ್ಯಾಲಯದಲ್ಲಿ ಖಾಸಗಿ ಕೋಟಾ ಸೀಟಿಗೆ 16.14 ಲಕ್ಷ ರೂ., ಎನ್ ಆರ್ ಐ ಮತ್ತು ಇತರೆ ಕೋಟಾ ಸೀಟಿಗೆ 32 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ. ಉಳಿದಂತೆ ಈ ವಿವಿಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕ ಇತರೆ ಖಾಸಗಿ ವಿವಿಗಳಂತೆ 1,28,746 ರೂ. ಇರಲಿದೆ.

About The Author

You May Also Like

More From Author

+ There are no comments

Add yours