ಸಿದ್ದಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ; ಸೋಲಿ‌ನ ಬಗ್ಗೆ ಹೇಳಿದ್ದೇನು?

1 min read

ಸಿದ್ದಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ

Tumkurnews
ತುಮಕೂರು; ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲಿರುಳೆನ್ನದೆ ದುಡಿದು ನನ್ನನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರ ಆಶೀರ್ವಾದದ ಜೊತೆಗೆ, ಶ್ರೀಸಿದ್ದಗಂಗಾ ಶ್ರೀಗಳ ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ತಮ್ಮ ಕುಟುಂಬದ ಸದಸ್ಯರೊಂದಿಗೆ ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿ, ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ದಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ತಂದೆಯವರು ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ನಾನು ಕೂಡ ವಿಧಾನಸಭೆ ಪ್ರವೇಶಿಸುವ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.
ಬಿಜೆಪಿ ಸೋಲಿಗೆ ಹಲವಾರು ವಿಚಾರಗಳು ಕಾರಣವಾಗಿದ್ದು, ಅವುಗಳ ಬಗ್ಗೆ ಪಕ್ಷದ ಮುಖಂಡರು ಈಗಾಗಲೇ ಚರ್ಚೆ ನಡೆಸುತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಪಕ್ಷ ಸಂಘಟನೆ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುವುದು. ಲಿಂಗಾಯಿತ ಸಮುದಾಯ ಬಿಜೆಪಿಯಿಂದ ಕಾಂಗ್ರೆಸ್‍ಗೆ ಪಕ್ಷಾಂತರ ಅಯಿತು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಬಿ.ಎಸ್.ಯಡಿಯೂರಪ್ಪ ಇನ್ನೂ ಗಟ್ಟಿಯಾಗಿದ್ದಾರೆ. ಪಕ್ಷವನ್ನು ಸಂಘಟಿಸುವ ಶಕ್ತಿ ಇನ್ನೂ ಅವರಲ್ಲಿ ಉಳಿದಿದೆ. ಕೇವಲ ಒಂದು ಸಮುದಾಯದ ಮತಗಳಿಂದ ಚುನಾವಣೆ ಗೆಲ್ಲಲ್ಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಬಿ.ವೈ ವಿಜಯೇಂದ್ರ ಅವರ ಪತ್ನಿ ಪ್ರೇಮ, ಪುತ್ರಿಯರಾದ ಮೈತ್ರಿ, ಜಾನ್ಸಿ, ಶಾಸಕ ಜಿ.ಬಿ ಜೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಹೆಬ್ಬಾಕ, ಜಿಲ್ಲಾ ಮಾಧ್ಯಮ ಪ್ರಮುಖ ಟಿ.ಆರ್ ಸದಾಶಿವಯ್ಯ ಮತ್ತಿತರರು ಜೊತೆಗಿದ್ದರು.

About The Author

You May Also Like

More From Author

+ There are no comments

Add yours