ಆಗ್ನೇಯ ಶಿಕ್ಷಕರ ಕ್ಷೇತ್ರ: ಡಿ.ಟಿ ಶ್ರೀನಿವಾಸ್ ಗೆಲುವಿಗಾಗಿ ಶ್ರಮಿಸಿ: ಡಾ.ಜಿ ಪರಮೇಶ್ವರ್

1 min read

ಡಿ.ಟಿ ಶ್ರೀನಿವಾಸ್ ಗೆಲುವಿಗಾಗಿ ಶ್ರಮಿಸಿ: ಡಾ.ಜಿ ಪರಮೇಶ್ವರ್

Www.tumkurnews.in
ತುಮಕೂರು: ವಿಧಾನಸಭೆಯಂತೆ, ವಿಧಾನಪರಿಷತ್ತಿನಲ್ಲಿಯೂ ಬಹುಮತ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಆರು ಕ್ಷೇತ್ರಗಳಲ್ಲಿ, ಆರರಲ್ಲಿಯೂ ಗೆಲುವು ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಪಕ್ಷದ ಮುಖಂಡರು, ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರ ರೂಪಿಸುವ ಮಸೂದೆಗಳು ಯಾವುದೇ ಅಡೆ ತಡೆಯಿಲ್ಲದೆ ಮೇಲ್ಮನೆಯಲ್ಲಿ ಪಾಸಾಗಿ ಜಾರಿಗೆ ಬರಬೇಕೆಂದರೆ ವಿಧಾನಪರಿಷತ್‍ನಲ್ಲಿಯೂ ಪಕ್ಷ ಬಹುಮತ ಪಡೆದರೆ ಹೆಚ್ಚಿನ ಅನುಕೂಲವಾಗುತ್ತದೆ. ಹಾಗಾಗಿ ಸರಕಾರ ಆರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲು ಪ್ರಯತ್ನ ನಡಸಲಿದೆ ಎಂದರು.
ತುಮಕೂರು, ಚಿತ್ರದುರ್ಗ, ದಾವಣಗೆರೆಯ ಕೆಲ ಭಾಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 23,815 ಮತದಾರರಿದ್ದು, ಸರಕಾರ ಎನ್.ಪಿ.ಎಸ್‍ನಿಂದ ಓಪಿಎಸ್‍ಗೆ ಬದಲಾವಣೆ, 7ನೇ ವೇತನ ಆಯೋಗ ಸಮಿತಿ ರಚನೆ ಮಾಡಿದೆ. ಶಿಕ್ಷಕರ ಯೋಗಕ್ಷೇಮವನ್ನು ಸರಕಾರ ಬಯಸುತ್ತದೆ. ಹಾಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಶಿಕ್ಷಕರ ಮನವೊಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಮತ ಹಾಕುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಸರಕಾರ ಗಟ್ಟಿಯಾವುದರ ಜೊತೆಗೆ, ಶಿಕ್ಷಕರು ಸಹ ಬಲಗೊಳ್ಳಲು ಸಹಕರಿಸಬೇಕು,
ರಾಜಕೀಯ ವಿಶ್ಲೇಷಕರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲಿದೆ ಎಂಬ ಮಾಹಿತಿ ಇದೆ. ಸಂವಿಧಾನ ಉಳಿದರೆ ಮಾತ್ರ ನಾವು ನೀವು ಎಲ್ಲರೂ ಸವಲತ್ತುಗಳನ್ನು ಕೇಳಲು ಸಾಧ್ಯ. ಇದುವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿಲ್ಲ. ಈ ಬಾರಿ ನಮ್ಮ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಶಿಕ್ಷಕರಾಗಿ ಕ್ಷೇತ್ರದ ಸಮಸ್ಯೆಯನ್ನು ಅರಿತವರಾಗಿದ್ದು, ತಮ್ಮದೇ ರೀತಿಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅವರಿಗೆ ಬೆಂಬಲವಾಗಿ ಪಕ್ಷ ನಿಂತಿದೆ. ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆಯಲಿದೆ. ಇದಕ್ಕೆ ನೀವೆಲ್ಲರೂ ಕೈಜೋಡಿಸಬೇಕು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಯೂರು ಜಯಕುಮಾರ್ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ರಾಜ್ಯದಲ್ಲಿದ್ದ ಸಂವಿಧಾನ ವಿರೋಧಿ ಸರಕಾರವನ್ನು ಕಿತ್ತೊಗೆದು, ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದೆ. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನುಮೇಗೌಡ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಜೂನ್ 03ರಂದು ನಡೆಯುವ ವಿಧಾನಪರಿಷತ್ ಚುನಾವಣೆ ಯಲ್ಲಿಯೂ ಸಹ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು, ಶಿಕ್ಷಕರ ಮನವೊಲಿಸಿ, ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಮತ ಹಾಕುವಂತೆ ಪ್ರೇರೇಪಿಸಬೇಕು. ಆ ಮೂಲಕ ವಿಧಾನಪರಿಷತ್ತಿನಲ್ಲಿಯೂ ಪಕ್ಷ ಬಹುಮತ ಪಡೆಯಲು ಸಹಕರಿಸಬೇಕು ಎಂದು ಕೋರಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಶಿಕ್ಷಕರ ಮನವೊಲಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಸಾಕಷ್ಟು ಸಾಧನೆ ಇದೆ. ಈಗಾಗಲೇ ಪಕ್ಷದ ಪ್ರಾಣಾಳಿಕೆ ಓಪಿಎಸ್ ಜಾರಿಗೆ ತರುವ ಭರವಸೆ ನೀಡಿದೆ. ಆ ನಿಟ್ಟಿನಲ್ಲಿ ಮುಂದಾಗಿದೆ. ಅಲ್ಲದೆ ಖಾಸಗಿ ಶಾಲಾ ಶಿಕ್ಷಕ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮವನ್ನು ಕೈಗೊಂಡಿದೆ. 6ನೇ ವೇತನ ಆಯೋಗದ ಶಿಫಾರಸ್ಸಗಳನ್ನು ಯಥಾವತ್ತು ಜಾರಿಗೆ ತಂದಿದೆ. 7ನೇ ವೇತನ ಆಯೋಗದ ಸಮಿತಿ ನೇಮಿಸಿದ್ದು, ವರದಿ ಬಂದ ತಕ್ಷಣ ಅಗತ್ಯ ಕ್ರಮ ವಹಿಸಲು ಮುಂದಾಗಿದೆ. ಜಿಲ್ಲೆಯಲ್ಲಿ ಸುಮಾರು 7618 ಮತದಾರರಿದ್ದು, ಇವರ ಮನವೊಲಿಸುವ ಮೂಲಕ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಿದರೆ ಗೆಲುವು ಸುಲಭವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಒಂದು ವರ್ಷದಲ್ಲಿ ಮೂರು ಚುನಾವಣೆಗಳನ್ನು ಎದುರಿಸಬೇಕಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಜಿ.ಪಂ,ತಾ.ಪಂ, ನಗರಪಾಲಿಕೆ ಚುನಾವಣೆಗಳು ಸಹ ಬರಲಿವೆ. ಕಾರ್ಯಕರ್ತರು ಮೈಮರೆಯದೆ ಪಕ್ಷದ ಸಾಧನೆಗಳನ್ನು ಜನತೆಗೆ ತಿಳಿಸಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಪ್ರೇರೆಪಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಒಳ್ಳೆಯ ಅಭ್ಯರ್ಥಿಯಾಗಿದ್ದು, ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದರು.
ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡಿದ್ದೀರಿ ಇದಕ್ಕಾಗಿ ನಿಮಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದೇವೆ. ಫಲಿತಾಂಶ ಭಗವಂತನಿಗೆ ಬಿಟ್ಟಿದ್ದು, ಲೋಕಸಭಾ ಚುನಾವಣೆಯ ರೀತಿಯೇ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ನಾವೆಲ್ಲರೂ ಶಕ್ತಿ ಮೀರಿ ಡಿ.ಟಿ.ಶ್ರೀನಿವಾಸ್ ಗೆಲುವಿಗೆ ಶ್ರಮಿಸೋಣ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿದರು. ವೇದಿಕೆಯಲ್ಲಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಸ್.ಆರ್.ಶ್ರೀನಿವಾಸ್, ವಿ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ವೇಣುಗೋಪಾಲ್, ಎಸ್.ಷಫಿ ಅಹಮದ್, ಹೆಚ್.ಸಿ. ಹನುಮಂತಯ್ಯ, ಆರ್.ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours