ಕರ್ತವ್ಯ ಲೋಪ: ದೊಡ್ಡಗುಣಿ ಗ್ರಾ.ಪಂ ಪಿಡಿಒ ರಂಗಸ್ವಾಮಿ ಅಮಾನತ್ತು
Tumkurnews
ತುಮಕೂರು; ಮತಗಟ್ಟೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಗುಬ್ಬಿ ತಾಲ್ಲೂಕು ದೊಡ್ಡಗುಣಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ರಂಗಸ್ವಾಮಿ ಅವರನ್ನು ಜಿಪಂ ಸಿಇಒ ಡಾ: ಕೆ. ವಿದ್ಯಾಕುಮಾರಿ ಅವರು ಅಮಾನತ್ತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.
ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ರ್ಯಾಂಪ್, ಶೌಚಾಲಯ, ವಿದ್ಯುತ್, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಹಾಗೂ ಯಾವ ಮೂಲಭೂತ ಸೌಕರ್ಯ ಇಲ್ಲವೋ ಅಂತಹ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವಾರು ಬಾರಿ ಸೂಚಿಸಲಾಗಿತ್ತು. ಹೀಗಿದ್ದರೂ ಏಪ್ರಿಲ್ 19ರಂದು ಖುದ್ದು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೇಲ್ಕಂಡ ಸೌಲಭ್ಯಗಳನ್ನು ಪೂರೈಸುವಲ್ಲಿ ವಿಫಲರಾಗಿ ಕರ್ತವ್ಯಲೋಪವೆಸಗಿರುವುದರಿಂದ ಅಮಾನತ್ತು ಮಾಡಿ ಆದೇಶಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಮುಂದುವರೆದು, ದೊಡ್ಡಗುಣಿ ಗ್ರಾಮಪಂಚಾಯತಿಯಲ್ಲಿ 2017 ರಿಂದ 2021ನೇ ಸಾಲಿನವರೆಗೆ ವಸೂಲಾದ ತೆರಿಗೆ ಮೊತ್ತದಲ್ಲಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಗಳಿಗೆ ಶೇ.25ರಷ್ಟು ಅನುದಾನವನ್ನು ಮೀಸಲಿಡದೆ ಕರ್ತವ್ಯ ಲೋಪವನ್ನು ಎಸಗಿರುತ್ತಾರೆ.
ರಂಗಸ್ವಾಮಿ ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ, ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನೌಕರರಿಗೆ ಕೆಸಿಎಸ್‍ಆರ್ 1958ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಾವತಿಸಲಾಗುವುದು. ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಅವರು ಸೂಚಿಸಿದ್ದಾರೆ.
+ There are no comments
Add yours