ಚುನಾವಣೆ ಕರ್ತವ್ಯ ತಪ್ಪಿಸಿಕೊಳ್ಳಲು ನಕಲಿ ಆಹ್ವಾನ ಪತ್ರಿಕೆ ಮೊರೆ!; ಅಧಿಕಾರಿಗಳಿಗೆ ಡಿಸಿ ವಾರ್ನಿಂಗ್

1 min read

ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ; ಡಿಸಿ

Tumkurnews
ತುಮಕೂರು; ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿಗಳನ್ನಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್ ಪಾಟೀಲ ಎಚ್ಚರಿಕೆ ನೀಡಿದರು.
ಎನ್.ಐ.ಸಿ ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಮದುವೆ, ಮತ್ತಿತರ ಸಮಾರಂಭಗಳಿರುವುದರಿಂದ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂದಿದೆ. ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡುವ ಮುದ್ರಕರು ಸೂಕ್ತ ದಾಖಲೆ ಪಡೆಯದೇ ಪತ್ರಿಕೆಗಳನ್ನು ಮುದ್ರಣ ಮಾಡಬಾರದು, ಚುನಾವಣಾ ದಿನ ಹಾಗೂ ಹಿಂದಿನ ದಿನದಂದು ಸಮಾರಂಭವಿರುವ ಬಗ್ಗೆ ಸುಳ್ಳು ಆಹ್ವಾನ ಪತ್ರಿಕೆ ನೀಡಿದ ಚುನಾವಣಾ ಕರ್ತವ್ಯ ನಿಯೋಜಿತರನ್ನು ಆರ್.ಪಿ ಕಾಯ್ದೆ 134ರನ್ವಯ ಅಮಾನತ್ತುಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪಿಆರ್’ಓ ಹಾಗೂ ಎಪಿಆರ್’ಓ ಸೇರಿದಂತೆ ಒಟ್ಟು 8622 ಅಧಿಕಾರಿ, ಸಿಬ್ಬಂದಿಗಳಿಗೆ ಏಪ್ರಿಲ್ 11ರಂದು ತರಬೇತಿ ಆಯೋಜಿಸಲಾಗಿದ್ದು, ನಿಯೋಜಿತ ಸಿಬ್ಬಂದಿಗಳು ಗೈರು ಹಾಜರಾಗದೇ ತಪ್ಪದೇ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ಪ್ರತಿ ವಿಧಾಸಭಾ ಕ್ಷೇತ್ರಗಳಲ್ಲಿ ಮಹಿಳಾ ಅಧಿಕಾರಿಗಳೇ ಇರುವ ತಲಾ 5ರಂತೆ ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ 154 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ, ದ್ವಿತಿಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ತೆರಳಿರುವ ಪಿಆರ್’ಓ ಹಾಗೂ ಎಪಿಆರ್’ಓಗಳು ಇಲಾಖಾ ಮುಖ್ಯಸ್ಥರ ಮೂಲಕ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದಲ್ಲಿ ಮೌಲ್ಯಮಾಪನದಿಂದ ಮರಳಿದ ನಂತರ ಇವರಿಗೆ ಪ್ರತ್ಯೇಕವಾಗಿ ಚುನಾವಣಾ ತರಬೇತಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಲ್ಲದೆ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಯುವ ಮತದಾರರಿಗಾಗಿ ತಲಾ 4ರಂತೆ ಯುವ ಅಧಿಕಾರಿಗಳನ್ನೊಳಗೊಂಡ ಒಟ್ಟು 44 ಯುವ ಮತಗಟ್ಟೆ ಹಾಗೂ ವಿಕಲಚೇತನ ಮತದಾರರಿಗಾಗಿ ತಲಾ 4ರಂತೆ ಒಟ್ಟು 44 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಎನ್.ಐ.ಸಿ. ಅಧಿಕಾರಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours