ಉಚಿತ ವಿದ್ಯುತ್ ಕೊಡುಗೆ: ಅರ್ಜಿ ಸಲ್ಲಿಸಲು ಮನವಿ
Tumkurnews
ತುಮಕೂರು: ಬೆವಿಕಂ ತುಮಕೂರು ವಿಭಾಗದ ವ್ಯಾಪ್ತಿಗೊಳಪಡುವ ತುಮಕೂರು ಮತ್ತು ಗುಬ್ಬಿ ತಾಲ್ಲೂಕು ವ್ಯಾಪ್ತಿಯ ನಗರ ಉಪವಿಭಾಗ-1 ಮತ್ತು 2, ಕ್ಯಾತ್ಸಂದ್ರ, ಗ್ರಾಮೀಣ ಉಪವಿಭಾಗ-1 ಮತ್ತು 2, ಗುಬ್ಬಿ ಮತ್ತು ನಿಟ್ಟೂರು ಉಪವಿಭಾಗಗಳ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಬೆಸ್ಕಾಂ ಗ್ರಾಹಕರು ಗೃಹ ಬಳಕೆಗಾಗಿ 75 ಯುನಿಟ್‍ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.
ಈಗಾಗಲೇ ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನಲ್ಲಿ 18166 ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಬಾಕಿ ಉಳಿದಿರುವ ಫಲಾನುಭವಿಗಳನ್ನು ಸದರಿ ಯೋಜನೆಯಡಿ ನೋಂದಾಯಿಸಲು ಪ್ರತಿ ಗ್ರಾಮಗಳಿಗೆ ಬೆಸ್ಕಾಂ ಅಧಿಕಾರಿಗಳು ಮತ್ತು ನೌಕರರು ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚುವ ಮೂಲಕ, ಬ್ಯಾನರ್, ಪೋಸ್ಟರ್’ಗಳ ಮೂಲಕ ಹಾಗೂ ಮೈಕ್‍ಗಳ ಮೂಲಕ ಜಾಗೃತಿ ಮೂಡಿಸಿ ಅರ್ಜಿ ನೋಂದಣಿ ಕಾರ್ಯ ಮಾಡುತ್ತಿದ್ದು, ಸದರಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಸೌಲಭ್ಯವನ್ನು ಪಡೆಯಲಿಚ್ಛಿಸುವವರು ಸಂಬಂಧಿಸಿದ ಬೆಸ್ಕಾಂ ಶಾಖಾಧಿಕಾರಿಗಳ ಕಚೇರಿ, ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೀಟರ್ ರೀಡರ್, ಪವರ್ ಮ್ಯಾನ್ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.
ಉಚಿತ ವಿದ್ಯುತ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವವರು ಬಾಕಿ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಪಾವತಿ ಮಾಡಿರಬೇಕು. ಬಿಪಿಎಲ್ ಕಾರ್ಡ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ವಿದ್ಯುತ್ ಬಿಲ್ಲು ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು ಎಂದು ಅವರು ತಿಳಿಸಿದ್ದಾರೆ.
+ There are no comments
Add yours