ಒಂದು ಡೈರಿಯಲ್ಲಿ ವರ್ಷಕ್ಕೆ 1 ಕೋಟಿ ರೂ. ಅಕ್ರಮ ಸಂಪಾದನೆ!; ತುಮಕೂರಿನಲ್ಲಿ ರೈತರಿಗೆ ಇದೆಂಥಾ ಮೋಸ?
Tumkurnews
ತುಮಕೂರು; ಡೈರಿಗಳಲ್ಲಿ ಹಾಲು ಅಳತೆಯಲ್ಲಿ ರೈತರಿಗೆ ಮೋಸ ಮಾಡುವುದು ಆಗಾಗ ಬಯಲಾಗುತ್ತಲೇ ಇರುತ್ತದೆ, ಆದರೆ ಇದೀಗ ಡೈರಿ ಕಾರ್ಯದರ್ಶಿಯೊಬ್ಬರು ಮಹಾಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ರೈತರಿಗೆ ಮಾಡುವ ಮೋಸದಿಂದ ಕಾರ್ಯದರ್ಶಿ ಕೋಟ್ಯಾಂತರ ರೂ. ಸಂಪಾದನೆ ಮಾಡಿರುವ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಪತರು ನಾಡು ತುಮಕೂರು ಜಿಲ್ಲೆ ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಲಕ್ಷಾಂತರ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಆದರೆ ಮುಗ್ದ ರೈತರನ್ನು ಡೈರಿ ಕಾರ್ಯದರ್ಶಿಗಳು ಮೋಸ ಮಾಡುತ್ತಿರುವುದು ಬಟಾಬಯಲಾಗಿದೆ.
ರೈತರಿಂದ ರಾಗಿ ಖರೀದಿಸಲು ಸಿದ್ಧತೆ; ಡಿ.15 ರಿಂದ ನೋಂದಣಿ, ಬೆಂಬಲ ಬೆಲೆ ಎಷ್ಟಾಗಿದೆ ಗೊತ್ತೇ?
ಒಂದು ಹೊತ್ತಿಗೆ 360 ಲೀ. ಹಾಲು!?; ಕುಣಿಗಲ್ ತಾಲ್ಲೂಕಿನ ಹೊನ್ನಮಾಚನಹಳ್ಳಿ ಡೈರಿಯಲ್ಲಿ ಒಂದು ಟೈಮಿಗೆ 360 ಲೀ. ಹಾಲು ಹಾಕಿರುವ ಚೀಟಿಯೊಂದು ಪತ್ತೆಯಾಗಿದ್ದು, ಹಾಲಿನ ಡೈರಿಗಳಲ್ಲಿ ನಡೆಯುವ ಮಹಾ ಮೋಸವನ್ನು ಬಯಲು ಮಾಡಿದೆ. 2-8-2022ನೇ ದಿನಾಂಕದಂದು ಸಂಜೆ ಸಮಯದಲ್ಲಿ ಹೊನ್ನಮಾಚನಹಳ್ಳಿ ಡೈರಿಯಲ್ಲಿ ಒಬ್ಬನೇ ವ್ಯಕ್ತಿ 360 ಲೀ. ಹಾಲು ಹಾಕಿರುವಂತಿದೆ ಈ ಚೀಟಿ! ಈ ಚೀಟಿ ನೋಡಿ ರೈತರು ಶಾಕ್’ಗೆ ಒಳಗಾಗಿದ್ದಾರೆ. ಒಂದು ಹೊತ್ತಿಗೆ 360 ಲೀ. ಹಾಲು ಕೊಡುವ ಹಸು ಯಾವುದದು? ಎಂದು ಹೈನುಗಾರರು ಪ್ರಶ್ನೆ ಮಾಡುತ್ತಿದ್ದಾರೆ.
(ಚಿತ್ರ; ಒಂದು ಟೈಮಿಗೆ 360 ಲೀ. ಹಾಲು ಹಾಕಿರುವ ಚೀಟಿ)
ರೈತರಿಂದ ಸುಲಿಗೆ; ರೈತರಿಗೆ ಮೋಸ ಮಾಡಿ ಸಂಗ್ರಹಿಸಿದ ಹಾಲಿನ ಪ್ರಮಾಣವೇ ಈ 360 ಲೀ. ಹಾಲು ಎಂದು ರೈತರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಕೇವಲ ಒಂದು ಡೈರಿಯಲ್ಲಿ ಒಂದು ಟೈಮಿಗೆ 360 ಲೀ. ಹಾಲನ್ನು ರೈತರಿಂದ ಲಪಟಾಯಿಸಿದರೆ ಅದರ ಬಾಬ್ತು 13,500 ರೂ. ಸಿಗುತ್ತದೆ. ಪ್ರತಿ ದಿನ ಎರಡು ಹೊತ್ತು ಹಾಲು ಹಾಕಲಾಗುತ್ತದೆ. ದಿನಕ್ಕೆ ಒಂದು ಡೈರಿಯಲ್ಲಿ 360*2=720 ಲೀ. ಹಾಲು ಕದ್ದರೆ ಅದರ ಬಾಬ್ತು 27,000 ರೂ. ದೊರೆಯುತ್ತದೆ. 27,000 ರೂ.ಗಳಂತೆ 30 ದಿನಕ್ಕೆ 8,10,000 ರೂ. ದೊರೆಯುತ್ತದೆ. ಇದು ಒಂದು ವರ್ಷಕ್ಕೆ ಲೆಕ್ಕ ಹಾಕಿದರೆ 8,10,000*12=97,20,000 ರೂ. ಹಣ ಸಿಗುತ್ತದೆ! ಅಂದರೆ ರೈತರಿಗೆ ವಂಚನೆ ಮಾಡಿ ಒಂದು ವರ್ಷಕ್ಕೆ ಹತ್ತತ್ತಿರ 1 ಕೋಟಿ ರೂ. ಅಕ್ರಮ ಸಂಪಾದನೆ! ಈ ಲೆಕ್ಕಾಚಾರ ನೋಡಿ ರೈತರು ಹೌಹಾರಿದ್ದಾರೆ.
ಒಕ್ಕೂಟದ ಮೌನವೇಕೆ?; ಡೈರಿಗಳಲ್ಲಿ ಅಳತೆ ಮಾಡುವ ಬಗ್ಗೆ ಬಹುತೇಕ ಡೈರಿಗಳಲ್ಲಿ ದೂರುಗಳಿವೆ. ಆದರೆ ಆ ಬಗ್ಗೆ ತುಮಕೂರು ಹಾಲು ಒಕ್ಕೂಟ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಅಸಮಾಧಾನ ರೈತರಲ್ಲಿದೆ. ಈ ಹಿಂದೆಯೂ ರೈತರೊಬ್ಬರು ಕಾರ್ಯದರ್ಶಿಯೋರ್ವಳು ಅಳತೆ ಮೋಸ ಮಾಡಿದ್ದನ್ನು ವಿಡಿಯೋ ದಾಖಲೆ ಸಮೇತ ಬಹಿರಂಗ ಮಾಡಿದ್ದರು. ಆದರೆ ಒಕ್ಕೂಟದಿಂದ ಈ ಮೋಸ ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.
ತುಮಕೂರು; ಹಾಲು ಒಕ್ಕೂಟದಿಂದ ರೈತರಿಗೆ ಭಾರೀ ಮೋಸ; ಅಕ್ರಮ ಬಯಲಿಗೆಳೆದ ಯುವ ರೈತ
ಕಾರ್ಯದರ್ಶಿ ಮೇಲೆ ಆರೋಪ; ಇದೀಗ ಪತ್ತೆಯಾಗಿರುವ 360 ಲೀ. ಹಾಲಿನ ಚೀಟಿಯು ಕುಣಿಗಲ್ ತಾಲ್ಲೂಕು ಹೊನ್ನಮಾಚನಹಳ್ಳಿ ಡೈರಿಯದ್ದು ಎನ್ನಲಾಗಿದ್ದು, ಅಲ್ಲಿನ ಕಾರ್ಯದರ್ಶಿ ಸುಮಾ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೈನುಗಾರರು ಆಕ್ರೋಶ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ತುಮಕೂರು ಹಾಲು ಒಕ್ಕೂಟವು ಈ ಚೀಟಿ ಹಿಂದಿನ ಸತ್ಯಾಸತ್ಯತೆಯನ್ನು ಬಯಲು ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಚುನಾವಣೆ ಸಂದರ್ಭದಲ್ಲಿ ರೈತರು ಮತ ಕೇಳಲು ಬರುವ ರಾಜಕೀಯ ಮುಖಂಡರುಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಒಂದು ಡೈರಿಯಲ್ಲಿ ಒಂದು ವರ್ಷಕ್ಕೆ ಅಕ್ರಮ ಸಂಪಾದನೆಯೇ 1 ಕೋಟಿ ರೂ. ಇದೆ ಎಂದರೆ ಡೈರಿ ಕಾರ್ಯದರ್ಶಿಗಳು ಅದಿನ್ನೆಷ್ಟು ಸಂಪದ್ಭರಿತವಾಗಿರಬೇಕು ಹೇಳಿ.
ಒಂದು ಟೈಮಿಗೆ ಒಬ್ಬ ವ್ಯಕ್ತಿ 360 ಲೀ. ಹಾಲು ಹಾಕುವುದು ಸಾಧ್ಯವಿಲ್ಲ. ಫಾರ್ಮ್ ಇಟ್ಟುಕೊಂಡವರಲ್ಲಿ ಇಷ್ಟು ಪ್ರಮಾಣದ ಹಾಲು ಸಂಗ್ರಹವಾಗುತ್ತದೆ. ಆದರೆ ನಿರ್ಧಿಷ್ಟ ಡೈರಿಯಲ್ಲಿ ನಿರ್ಧಿಷ್ಟ ವ್ಯಕ್ತಿಯಿಂದ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಹಾಲು ಸಂಗ್ರಹವಾಗಿರುವುದು ಅಕ್ರಮ ನಡೆದಿರುವ ಶಂಕೆ ಮೂಡಿಸುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
– ಮಹಾಲಿಂಗಪ್ಪ, ಅಧ್ಯಕ್ಷರು, ತುಮಕೂರು ಹಾಲು ಒಕ್ಕೂಟ (ತುಮುಲ್)
+ There are no comments
Add yours