ರೈತರಿಂದ ರಾಗಿ ಖರೀದಿಸಲು ಸಿದ್ಧತೆ; ಡಿ.15 ರಿಂದ ನೋಂದಣಿ, ಬೆಂಬಲ ಬೆಲೆ ಎಷ್ಟಾಗಿದೆ‌ ಗೊತ್ತೇ?

1 min read

 

Tumkurnews
ತುಮಕೂರು; ಜಿಲ್ಲೆಯಲ್ಲಿ 2022-23ನೇ ಮುಂಗಾರು ಋತುವಿನ ಅವಧಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಡಿ.15 ರಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲು ಡಿ.15 ರಿಂದ ರೈತರ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ವ್ಯವಸ್ಥಿತವಾಗಿ ನೋಂದಣಿ ಪ್ರಕ್ರಿಯೆಯನ್ನು ನಡೆಸಬೇಕು ಎಂದರು.

ಸ್ಟಿಂಗ್ ಆಪರೇಷನ್; 108 ಕಳ್ಳಾಟ ಬಯಲು ಮಾಡಿದ ತಹಸೀಲ್ದಾರ್!
ರೈತರು ನೋಂದಣಿಯನ್ನು ಆಯಾ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಇಲಾಖೆ ನೀಡಿರುವ ‘FRUITS ID’ ಯನ್ನು ಕಡ್ಡಾಯವಾಗಿ ಹಾಜರುಪಡಿಸಿ ನೋಂದಾಯಿಸಿಕೊಳ್ಳಬೇಕು, ಸರ್ಕಾರ ನಿಗದಿಪಡಿಸಿದ ಮಾನದಂಡವನ್ನು ಅನುಸರಿಸಿ ಎಫ್.ಎ.ಕ್ಯೂ. ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿ ಮಾಡಬೇಕು. ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಸಂಬಂಧಿಸಿದ ಖರೀದಿ ಅಧಿಕಾರಿ ಮತ್ತು ಕೃಷಿ ಇಲಾಖೆಯ ಗ್ರೇಟರ್‌ಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದರು.

ಬಿಲ್ ಕೌಂಟರ್ ಇಲ್ಲದ ರಾಜ್ಯದ‌ ಮೊದಲ ಆಸ್ಪತ್ರೆ ಉದ್ಘಾಟನೆ; ನಯಾ ಪೈಸೆ ಪಡೆಯಲ್ಲ ಎಂದ ಸಿಎಂ!
ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಬೇಕು. ಸರ್ಕಾರದಿಂದ ಪ್ರತಿ ಕ್ವಿಂಟಾಲ್ ರಾಗಿಗೆ 3578 ರೂ.ಗಳ ಖರೀದಿ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಾಲ್‍ನಂತೆ ಗರಿಷ್ಟ 20 ಕ್ವಿಂಟಾಲ್‍ವರೆಗೆ ಮಾತ್ರ ರಾಗಿಯನ್ನು ಖರೀದಿಸಲಾಗುವುದು. ಸರ್ಕಾರ ನಿಗದಿಪಡಿಸಿದ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿಯನ್ನು ಖರೀದಿಸುವಂತಿಲ್ಲ ಎಂದರು.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಬೋಗಸ್ ಗ್ರೇಡಿಂಗ್, ಮತ್ತಿತರ ಲೋಪವೆಸಗುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ರಾಗಿ ಖರೀದಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ನಡೆಸಬೇಕೆಂದು ಸೂಚಿಸಿದರು.

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಜಿಲ್ಲೆಯ ಪಾವಗಡ ಹಾಗೂ ಕೊರಟಗೆರೆ ತಾಲೂಕುಗಳನ್ನು ಹೊರತುಪಡಿಸಿ ಕುಣಿಗಲ್ ತಾಲ್ಲೂಕಿನಲ್ಲಿ 2, ತಿಪಟೂರು-2 ಹಾಗೂ ತುರುವೇಕೆರೆ, ಹುಳಿಯಾರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ತುಮಕೂರು, ಶಿರಾ ತಾಲ್ಲೂಕುಗಳಲ್ಲಿ ತಲಾ 1 ಖರೀದಿ ಕೇಂದ್ರ ಸೇರಿದಂತೆ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ರೈತರಿಗೆ ಸಮಸ್ಯೆಯಾಗದಂತೆ ಯಾವುದೇ ದೂರು ಬಾರದಂತೆ ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದು ಸೂಚಿಸಿದರು.
ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ಬರುವ ರೈತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಬೇಕೆಂದರಲ್ಲದೆ, FRUITS ID ಯಲ್ಲಿ ನೋಂದಣಿಯಾದ ರೈತರು ಮಾತ್ರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅವಕಾಶವಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಬೇಕು. ವಿನಾಕಾರಣ ಅವರನ್ನು ಅಲೆದಾಡಿಸಬಾರದು ಎಂದರು.

ತುಮಕೂರು ರೈತರಿಗೆ 988 ಕೋಟಿ ರೂ. ಬಿಡುಗಡೆ, ಕಾಫಿ ಬೆಳೆಗಾರರಿಗೆ 1 ಲಕ್ಷ ಎಕರೆ ಜಮೀನು ಗುತ್ತಿಗೆಗೆ; ಆರ್.ಅಶೋಕ್
ಜಿಲ್ಲೆಯಲ್ಲಿ ಕಳೆದ 2021-22ನೇ ಸಾಲಿನಲ್ಲಿ 49,634 ರೈತರಿಂದ 7,30,671 ಕ್ವಿಂಟಾಲ್ ರಾಗಿ ಖರೀದಿಯಾಗಿದ್ದು, ಕೃಷಿ ಇಲಾಖೆಯ ಮಾಹಿತಿಯನ್ವಯ ಈ ಸಾಲಿನಲ್ಲಿ 2.73ಲಕ್ಷ ಮೆ.ಟನ್ ರಾಗಿ ಖರೀದಿಗೆ ಬರಬಹುದೆಂದು ಅಂದಾಜಿಸಲಾಗಿದೆ. ಖರೀದಿ ಕೇಂದ್ರದಲ್ಲಿ ಖರೀದಿಸಿದ ದಾಸ್ತಾನು ಸಂಗ್ರಹ ಮಾಡಲು ಅಗತ್ಯ ಸರ್ಕಾರಿ ಗೋದಾಮುಗಳನ್ನು ಕಾಯ್ದಿರಿಸಬೇಕು. ರಾಗಿ ಖರೀದಿ ಕೇಂದ್ರಗಳನ್ನು ಎಪಿಎಂಸಿ ಆವರಣಗಳಲ್ಲಿ ತೆರೆಯಬೇಕು. ಈ ಖರೀದಿ ಕೇಂದ್ರದಲ್ಲಿ ಕನಿಷ್ಟ 1000 ದಿಂದ 2000 ಕ್ವಿಂಟಾಲ್ ದಾಸ್ತಾನು ಮಾಡಿಕೊಳ್ಳುವ ಸಾಮರ್ಥ್ಯವಿರುವ ಸ್ಥಳವನ್ನು ಗುರುತಿಸಿ ಸದರಿ ಸ್ಥಳದಲ್ಲಿಯೇ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ತಿಳಿಸಿದರು.
ಆಯಾ ತಾಲ್ಲೂಕು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಎಪಿಎಂಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂದಾಯ, ಕೃಷಿ ಇಲಾಖೆ ಸಿಬ್ಬಂದಿಗಳನ್ನೊಳಗೊಂಡ ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದ್ದು, ಸಮಿತಿಯು ರೈತರ ನೋಂದಣಿ ಕೇಂದ್ರ ಮತ್ತು ರಾಗಿ ಕೇಂದ್ರಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕು ಎಂದರು.
ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ರೈತರಿಂದ ನೇರವಾಗಿ ರಾಗಿ ಖರೀದಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಾಗಿ ಖರೀದಿಗೆ ಪ್ರತಿ ಕ್ವಿಂಟಾಲ್‍ಗೆ 3578 ರೂ.ಗಳ ದರವನ್ನು ನಿಗದಿಪಡಿಸಲಾಗಿದೆ. ಇದರಿಂದ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷದ ರಾಗಿ ಖರೀದಿ ದರ 201 ರೂ.ಗಳಷ್ಟು ಹೆಚ್ಚಳವಾದಂತಾಗಿದೆ. ರಾಗಿ ಖರೀದಿಗಾಗಿ ರೈತರ ನೋಂದಣಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿ.ಅಜಯ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರವೀಶ್ ಎನ್., ರಾಜ್ಯ ಉಗ್ರಾಣ ನಿಗಮ, ಎಪಿಎಂಸಿ, ಕೆಎಫ್‍ಸಿಎಸ್‍ಸಿ ಅಧಿಕಾರಿ, ಸಿಬ್ಬಂದಿ, ಎಲ್ಲ ತಹಶೀಲ್ದಾರರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours