Tumkurnews
ತುಮಕೂರು; ಸಾಂಗ್ಲಿಯಾನ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಶಂಕರ್‌ನಾಗ್ ಮಾರುವೇಷ ಧರಿಸಿ ಪೊಲೀಸರಿಗೆ ಪಾಠ ಕಲಿಸುವ ದೃಶ್ಯವನ್ನು ನೀವೆಲ್ಲರೂ ನೋಡಿದ್ದೀರಿ. ತುಮಕೂರು ಜಿಲ್ಲೆ ಕೊರಟಗೆರೆಯ ತಹಸೀಲ್ದಾರ್ ನಾಹೀದಾ ಅವರು ಅದೇ ಮಾದರಿಯಲ್ಲಿ ಸ್ಟಿಂಗ್ ಆಪರೇಷನ್ ನಡೆಸಿ ಆಂಬ್ಯುಲೆನ್ಸ್’ಗಳ ಕಳ್ಳಾಟ, ನಿರ್ಲಕ್ಷ್ಯವನ್ನು ಬಯಲು ಮಾಡಿರುವ ಘಟನೆ ನಡೆದಿದೆ.
ಚಿರತೆ ದಾಳಿಯಿಂದ ಗಾಯಗೊಂಡು ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತರು ಮತ್ತು ಮಕ್ಕಳ ಆರೋಗ್ಯ ವಿಚಾರಣೆಗೆ ತಹಸೀಲ್ದಾರ್ ನಾಹೀದಾ ಅವರು ಆಸ್ಪತ್ರೆಗೆ ಬಂದಿದ್ದರು. ಆಗ ಆಸ್ಪತ್ರೆಯಲ್ಲಿ ತುರ್ತುವಾಹನ 108 ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವುದಿಲ್ಲ ಎಂದು ರೋಗಿಗಳು ದೂರು ಹೇಳಿದ್ದಾರೆ.
ರೋಗಿಗಳ ದೂರಿನ ಅನ್ವಯ 108 ವ್ಯವಸ್ಥೆಯನ್ನು ಪರೀಕ್ಷಿಸಲು ತಹಸೀಲ್ದಾದ್ ನಾಹೀದಾ ಅವರು ರಾಮಕ್ಕ ಎಂಬ ಹೆಸರಿನಲ್ಲಿ 108ಗೆ ತಮ್ಮ ಮೊಬೈಲ್‌ನಿಂದ ಕರೆ ಮಾಡಿದ್ದಾರೆ. ಸಂಜೆ 5ಗಂಟೆ 2 ನಿಮಿಷಕ್ಕೆ 108ಗೆ ರಾಮಕ್ಕ ಎಂಬ ಹೆಸರಿನಲ್ಲಿ ಕರೆ ಮಾಡಿದ ತಹಸೀಲ್ದಾರ್, ವಡ್ಡಗೆರೆ ಕ್ರಾಸ್ ಬಳಿ ಅಪಘಾತ ಆಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. 2 ನಿಮಿಷ 108 ಗ್ರಾಹಕ ಸೇವಾಕೇಂದ್ರದ ಸಿಬ್ಬಂದಿ ಮಾಹಿತಿ ಪಡೆದಿದ್ದಾರೆ. ನಂತರ ಕರೆಯು ಆಂಬ್ಯುಲೆನ್ಸ್ ಸಿಬ್ಬಂದಿಗೆ ವರ್ಗಾವಣೆ ಆಗಿದೆ. ಆಂಬ್ಯುಲೆನ್ಸ್ ಸಿಬ್ಬಂದಿ ಉಮಾದೇವಿಯ ಜೊತೆ 8 ನಿಮಿಷ ತಹಸೀಲ್ದಾರ್ ಮಾತನಾಡಿದ್ದಾರೆ. ಒಟ್ಟು 10 ನಿಮಿಷ ದೂರವಾಣಿ ಕರೆಯಲ್ಲಿಯೇ 108 ಸಿಬ್ಬಂದಿ ಕಾಲ ಕಳೆದಿದ್ದಾರೆ. ಬಳಿಕ 1 ಗಂಟೆ ತಡವಾಗಿ ಬರ್ತಿವಿ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ ಎಂಬ ಉಡಾಫೆಯ ಉತ್ತರವನ್ನು ಸಿಬ್ಬಂದಿ ನೀಡಿದ್ದಾರೆ.
1 ತಾಸು ತಡ ಮಾಡಿದ 108!; ತಹಸೀಲ್ದಾರ್ ಕರೆ ಮಾಡಿದ ಬಳಿಕ ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ತುರ್ತುವಾಹನ 56 ನಿಮಿಷಗಳ ನಂತರ ತಡವಾಗಿ ಬಂದಿದೆ. ಸಂಜೆ 5 ಗಂಟೆ 2 ನಿಮಿಷಕ್ಕೆ ಅಪಘಾತವಾಗಿದೆ ಎಂದು 108ಗೆ ಕರೆ ಮಾಡಿದರೆ ಸಂಜೆ 5 ಗಂಟೆ 58 ನಿಮಿಷಕ್ಕೆ ಸ್ಥಳಕ್ಕೆ 108 ಬಂದಿದೆ! ಸ್ವಿಂಗ್ ಆಪರೇಷನ್ ಮೂಲಕ ತಹಸೀಲ್ದಾರ್ ನಾಹೀದಾ ಅವರು 108 ಅವ್ಯವಸ್ಥೆಯನ್ನು ಬಯಲಿಗೆ ಎಳೆದಿದ್ದಾರೆ.
ಅನಗತ್ಯ ಚರ್ಚೆ ಮಾಡ್ತಾರೇ 108 ಸಿಬ್ಬಂದಿ; ತುರ್ತು ಸೇವೆಗಾಗಿ ಜನರು 108ಗೆ ಕರೆಮಾಡಿದರೇ ಸ್ವೀಚ್‌ಆಫ್ ಬರೋದು, ಬ್ಯುಸಿ ಬರೋದು ಸರ್ವೇ ಸಾಮಾನ್ಯ ಆಗಿದೆ. ಇನ್ನೂ ಕರೆ ಕನೆಕ್ಟ್ ಆದರೇ 108 ಗ್ರಾಹಕ ಸಿಬ್ಬಂದಿ 2 ನಿಮಿಷ ಮಾಹಿತಿ ಪಡಿತಾರೆ. ನಂತರ 108 ಸಿಬ್ಬಂದಿಗೆ ದೂರವಾಣಿ ಕರೆ ವರ್ಗಾವಣೆ ಆಗುತ್ತೆ. ಗ್ರಾಹಕ ಸೇವಾ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಇಬ್ಬರು ಅನಗತ್ಯ ಚರ್ಚೆಗೆ ಇಳಿದು ಪ್ರಶ್ನೆಗಳ ಸುರಿಮಳೆಯನ್ನು ಕೇಳ್ತಾರೆ. ಮತ್ತೆ ಕೊನೆಗೆ 1 ಗಂಟೆ ಆಗುತ್ತೆ, ಕಾಯ್ತೀರಾ ಅಥವಾ ಖಾಸಗಿ ವಾಹನದಲ್ಲಿ ಹೋಗ್ತೀರಾ ಎಂಬ ಪ್ರಶ್ನೆಯನ್ನು ಕೇಳುವುದು ಸಾಮಾನ್ಯವಾಗಿದೆ.
5 ತುರ್ತುವಾಹನ ಇದ್ರೂ ನಿರ್ವಹಣೆ ಇಲ್ಲ;
ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತುರ್ತುವಾಹನ, ನಗುಮಗು, 108 ತುರ್ತುವಾಹನ ಇದೆ. ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು 108 ವಾಹನ ಸೌಲಭ್ಯವಿದೆ. ನಿರ್ವಹಣೆ ವಿಫಲವಾಗಿ ತುರ್ತುವೇಳೆ 109 ವಾಹನ ಕೆಲಸ ಮಾಡುವುದೇ ಇಲ್ಲ. ಆಸ್ಪತ್ರೆಯ ಮುಖ್ಯಾಧಿಕಾರಿ ಅಥವಾ ಟಿಹೆಚ್‌ಓ ಆಂಬ್ಯುಲೆನ್ಸ್ ಸಿಬ್ಬಂದಿಗೆ ಸಮಸ್ಯೆಯ ಬಗ್ಗೆ ಪ್ರಶ್ನಿಸುವುದಿಲ್ಲ. ಸಿಬ್ಬಂದಿ ನಿರ್ಲಕ್ಷದಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ಪ್ರಾಣಸಂಕಟ ಎದುರಾಗಿದೆ. ಒಟ್ಟಾರೆಯಾಗಿ ಆಂಬುಲೆನ್ಸ್ ಅವ್ಯವಸ್ಥೆ ಬಗ್ಗೆ ತಹಸೀಲ್ದಾರ್ ನಾಹೀದಾ ಅವರು ಡಿ.ಎಚ್.ಒಗೆ ವರದಿ ಮಾಡಿದ್ದು, ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
+ There are no comments
Add yours