ಅಲ್ಪಸಂಖ್ಯಾತರ ಕೋಟಾ ಅನುದಾನ ಸದ್ಬಳಕೆ; ಜ್ಯೋತಿಗಣೇಶ್
Tumkurnews
ತುಮಕೂರು; ನಗರದ 20ನೇ ವಾರ್ಡ್ ವ್ಯಾಪ್ತಿಯ ಎನ್.ಆರ್ ಕಾಲೋನಿಯಲ್ಲಿ ಅಲ್ಪಸಂಖ್ಯಾತರ ಕೋಟಾದ ಅನುದಾನ 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸಿದರು.
20ನೇ ವಾರ್ಡ್’ನಲ್ಲಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮಾತನಾಡಿದ ಅವರು, ಅಲ್ಪಸಂಖ್ಯಾತ ಕೋಟಾದಡಿ 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಈ ವಾರ್ಡ್ ನಲ್ಲಿ ಕೈಗೊಳ್ಳಲಾಗಿದೆ. ಈ ಅನುದಾನ ಕ್ರಿಶ್ಚಿಯನ್ನರು, ಜೈನರು ಮತ್ತು ಅಲ್ಪಸಂಖ್ಯಾತರು ಇರುವ ಭಾಗಕ್ಕೆ ಮಾತ್ರ ಬಳಸಬೇಕಾಗಿದೆ ಎಂದರು.
ಇನ್ನೊಂದು ತಿಂಗಳಲ್ಲಿ ಮತ್ತೊಂದು ಅನುದಾನ ಬಿಡುಗಡೆಯಾಗಲಿದೆ. ಆ ಅನುದಾನವನ್ನು ಮೇಯರ್ ವಾರ್ಡ್ ಸೇರಿದಂತೆ ಅಗತ್ಯ ಇರುವ ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳಿದರು.
ನಗರದ ಎಲ್ಲ ವಾರ್ಡ್’ಗಳಿಗೂ ಸ್ಮಾರ್ಟ್‌ಸಿಟಿ ಅನುದಾನ ಬಳಕೆಯಾಗಿಲ್ಲ. ರಿಂಗ್ ರಸ್ತೆ ಸೇರಿದಂತೆ 7-8 ವಾರ್ಡ್‌ಗಳಿಗೆ ಸ್ಮಾರ್ಟ್‌ಸಿಟಿ ಅನುದಾನ ಬಳಕೆಯಾಗಿದೆ. ಉಳಿದ ವಾರ್ಡ್‌ಗಳಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಇದುವರೆಗೂ ನಗರದ ಅಭಿವೃದ್ಧಿ ಕಾರ್ಯಗಳಿಗೆ 150 ಕೋಟಿ ರೂ. ಅನುದಾನ ಬಂದಿದೆ. ಕಳೆದ 40 ವರ್ಷದಲ್ಲಿ ನೋಡದೇ ಇರುವ ನಗರದ ಅಭಿವೃದ್ಧಿ ಕಾರ್ಯಗಳು ಈಗ ನಡೆದಿವೆ. ನಾವು ನೀವೆಲ್ಲಾ ನಗರದ ಅಭಿವೃದ್ಧಿ ಪರ್ವವನ್ನು ನೋಡುತ್ತಿದ್ದೇವೆ ಎಂದರು.
ಯಾವ ಅನುದಾನದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ಜನತೆ ಅರ್ಥೈಸಿಕೊಳ್ಳಬೇಕು. ಎಲ್ಲವೂ ಸ್ಮಾರ್ಟ್‌ಸಿಟಿ ಅನುದಾನದಿಂದಲೇ ನಡೆಯುವುದಿಲ್ಲ. ರಾಜ್ಯ ಸರ್ಕಾರದ ಅನುದಾನದಿಂದಲೂ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಉಪಮೇಯರ್ ಟಿ.ಕೆ ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಶ್ರೀನಿವಾಸ್, ಶೆಟ್ಟಾಳ್ಳಯ್ಯ, ರಾಜಣ್ಣ, ಕಿರಣ್, ಅಂಜನಮೂರ್ತಿ, ದೇವಿ, ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.
+ There are no comments
Add yours